ನೂತನ ಶಾಸಕರಿಗೊಂದು ಸದಾಶಯದ ಪತ್ರಬರೆದ ಲೇಖಕ ಎನ್.ಟಿ.ಎರ್ರಿಸ್ವಾಮಿ

Suddivijaya
Suddivijaya May 18, 2023
Updated 2023/05/18 at 1:21 PM

ಸುದ್ದಿವಿಜಯ, ಜಗಳೂರು: ಪ್ರಿಯ ಬಂಧು ಬಿ .ದೇವೇಂದ್ರಪ್ಪನವರಿಗೆ ವರಸೆಯಲ್ಲಿ ಅಣ್ಣನಾದ ಎನ್. ಟಿ. ಎರ್ರಿಸ್ವಾಮಿ ಮಾಡುವ ಸಪ್ರೇಮ ಆಶೀರ್ವಾದಗಳು. ದೈವಬಲ, ಜನರ ಪ್ರೀತಿ, ಪಟ್ಟ ಕಷ್ಟ, ಸತತ ಪರಿಶ್ರಮ, ನಿಶ್ಚಿತ ಗುರಿ, ವಿನಯ-ವಿವೇಕದ ನಡೆ ನುಡಿಗಳಿಂದ ನೀವು ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆ ಆದದು ದೈವ ಸಂಕಲ್ಪವೆಂದು ತಿಳಿಯುವೆ. ಏಕೆಂದರೆ ಮತಗಳ ಎಣಿಕೆಯ ಸಂದರ್ಭದಲ್ಲಿ ಆದ ಜುಗಲ್ ಬಂದಿ ನಾವೆಲ್ಲ ಕಣ್ಣಾರೆ ಕಂಡಿದ್ದೇವೆ.

“ನೀನೊಲಿದರೆ ಕೊರಡು ಕೊನರುವುದಯ್ಯ ,ನೀನೊಲಿದರೆ ಬರಡು ಹಯನಹುದು” ಎನ್ನುವ ಶರಣರ ಮಾತಿನಂತೆ ಸಂವಿಧಾನದ ದೈವ ಮತದಾರ ಪ್ರಭು ನಿಮಗೆ ಒಲಿದಿದ್ದಾನೆ, ಜೊತೆಗೆ ನಿಮ್ಮ ಅದೃಷ್ಟದ ಬಾಗಿಲು ತೆರೆದಿದೆ .ಇನ್ನು ಮುಂದೆ ಜನರ ಅದೃಷ್ಟವೂ ಕೂಡ ಖುಲಾಯಿಸಲಿ ಎಂಬ ಸದಾಶಯ ನನ್ನದು.

ನಿಮ್ಮ ಇದುವರೆಗಿನ ಬದುಕು ಬವಣೆಗಳನ್ನು ನಾನು ಹತ್ತಿರದಿಂದ ಬಲ್ಲೆ. ಬಡತನ, ಹಸಿವು, ಅವಮಾನ, ಪೆಟ್ಟು, ನೋವು, ನಿರಾಸೆಗಳು ಮನುಷ್ಯನಿಗೆ ಕಲಿಸುವ ಬದುಕಿನ ಪಾಠವಿದೆಯಲ್ಲ, ಅದು ಯಾವ ವಿಶ್ವವಿದ್ಯಾಲಯ ಓದಿಗೂ ಕಡಿಮೆ ಇಲ್ಲ. ಆದರೆ ಜಾಣ್ಮೆ ಇರುವುದು ಕೆಸರಿನಲ್ಲಿ ಕೆಸರಾಗುವುದಲ್ಲ, ಕೆಸರಿನ ಮಧ್ಯೆ ಕಮಲದ ಹೂವಾಗಿ ಅರಳುವುದು. ಅಂತಹ ಜಾಣ್ಮೆಯನ್ನು ನೀವು, ನಿಮ್ಮ ಮಡದಿ ,ಎರಡು ಜನ ಮಕ್ಕಳು ಬದುಕಿನ ಪ್ರತಿ ಹೆಜ್ಜೆಯಲ್ಲೂ ಮೆರೆಯುತ್ತಾ ಬಂದಿದ್ದೀರಿ. ಅದರ ಫಲವಾಗಿಯೇ ಅಮೃತದ ಸವಿ ಸವಿಯುವ ಕಾಲ ಒದಗಿಬಂದಿದೆ.

ಮೊನ್ನೆ ನೀವು ಡಾ.ಟಿ.ತಿಪ್ಪೇಸ್ವಾಮಿಯವರ ಸಮಾಧಿಯ ಬಳಿ ಹೋಗಿ ದೀರ್ಘದಂಡ ನಮಸ್ಕಾರ ಹಾಕಿದ್ದನ್ನು ನೋಡಿದೆ. ವಿದ್ಯಾರತ್ನ ಡಾ.ಟಿ.ಟಿ. ಯವರು ನನ್ನ ವಿದ್ಯಾ ಗುರುಗಳು. ಜಗಳೂರಿನಲ್ಲಿ ಅವರು ಬಿತ್ತಿ ಬೆಳೆದ ಶಿಕ್ಷಣ, ದೇಶಭಕ್ತಿ, ಭಾರತೀಯತೆ, ಶರಣರ ವಿಚಾರಗಳು ಶಿಷ್ಯರ ಎದೆಯಲ್ಲಿ ಎಂದಿಗೂ ಅಮರ ಆದವುಗಳು. ಅವರ ಸೇವೆಯಲ್ಲಿ ಅನನ್ಯತೆಯನ್ನು ಕಂಡ ತಾವು ಅವರ ಆದರ್ಶಗಳನ್ನು ಮತ್ತೆ ಬಿತ್ತಿ ಬೆಳೆಯುವ ಕಾಲ ಈಗ ತಂತಾನೆ ನಿಮಗೆ ಒದಗಿ ಬಂದಿದೆ .ಈ ಸಮಯ ವ್ಯರ್ಥವಾಗದಿರಲಿ.

ಮೃದುವಚನ ಮೂಲೋಕ ಗೆಲ್ಲುವುದು ತಿಳಿಯ ಎಂಬ ಮಾತಿದೆ. ಮಾತು ಮಲ್ಲಿಗೆಯ ಘಮದಂತೆ ಎಲ್ಲರಿಗೂ ಪ್ರಿಯವಾದುದು. ನೀವೀಗ ‘ಮಾತಿನ ಮಲ್ಲರು’ ಎಂಬುದನ್ನು ಹಲವು ಸಭೆಗಳಲ್ಲಿ ಪ್ರತ್ಯಕ್ಷ ಕಂಡಿದ್ದೇನೆ. ಟಿಟಿಯವರ ಒಡನಾಟದಲ್ಲಿ ನೀವು ಕಲಿತ ಓದು, ಸಂಸ್ಕಾರ ,ವಿಷಯ, ವಿಚಾರಗಳು ನಿಮ್ಮ ಮೇಲೆ ಪ್ರಭಾವ ಬೀರಿರುವುದು ನಿಚ್ಚಳವಾಗಿ ಕಾಣುತ್ತದೆ .ಶರಣರ ವಿಚಾರಗಳು ನಮಗೆ ತಿಳಿದೇ ಇದೆ. ನಮ್ಮ ನುಡಿ ಮಾತ್ರವಲ್ಲ, ನಡೆಯು ಒಂದಾಗಬೇಕೆಂಬ ವಿಚಾರ ಅದು! ನಡೆ ನುಡಿ ಒಂದಾದಡೆ ಈ ಜನುಮವೇ ಕಡೆ .ಅಂತಹ ಸಾರ್ಥಕ ಬದುಕಿನ ಕಡೆ ನಿಮ್ಮ ಪಯಣ ಸಾಗಲಿ.

ಸೇವೆ ಮತ್ತು ಸೇವಕ ಎನ್ನುವ ಪದಗಳು ಸವಕಲು ನಾಣ್ಯದಂತೆ ಬೆಲೆ ಕಳೆದುಕೊಳ್ಳುತ್ತಿವೆ ಎನ್ನುವ ದಿನಮಾನದಲ್ಲಿ “ನಾನು ಜನರ ಸೇವಕ ” ಎನ್ನುವ ಮಾತು ನಿಮ್ಮಿಂದ ಪದೇಪದೇ ಬರುವುದನ್ನು ನಾನು ಕೇಳಿದ್ದೇನೆ. ಕಳೆದ ಐದಾರು ವರ್ಷಗಳಲ್ಲಿ ನೀವು ಜನರ ಸಂಕಷ್ಟಗಳಿಗೆ ಸ್ಪಂದಿಸಿದ ರೀತಿ ಅನನ್ಯ .ನಿಮ್ಮ ವ್ಯಕ್ತಿತ್ವ ನಿಜಕ್ಕೂ ಪರಾಮರ್ಶೆಗೆ ಒಳಪಡುವುದು ಅಧಿಕಾರ ಸಿಕ್ಕ ಈ ಘಳಿಗೆಯಿಂದ. ಹಾಗಾಗಿ ನಿಮ್ಮ ಮುಂಬರುವ ಕ್ರಿಯೆಗಳು ಪಾರದರ್ಶಕವಾಗಿರಲಿ, ಜನಪರವಾಗಿರಲಿ, “ಜನಸೇವೆಯೇ ಜನಾರ್ಧನ ಸೇವೆ “ಎಂಬ ತತ್ವ ಎದೆಯಲ್ಲಿರಲಿ.

ಚುನಾವಣಾ ಸಂದರ್ಭದಲ್ಲಿ ನೀವು ಹೇಳುತ್ತಿದ್ದ ಮಾತು “ನಾನು ಕಾಲೇಜು ಒಂದರ ಕಸಗುಡಿಸಿದ್ದೇನೆ, ಘಂಟೆ ಬಾರಿಸಿ ಶಾಲೆಯ ಸೇವೆ ಮಾಡಿದ್ದೇನೆ, ಈಗ ಸಮಾಜದ ಕಸ ಗುಡಿಸಬೇಕಿದೆ, ಅಭಿವೃದ್ಧಿಯ ಘಂಟೆ ಬಾರಿಸಿ ಜನರ ಸೇವೆ ಮಾಡಬೇಕಿದೆ” ಎಂದು ಹೇಳಿದ ಮಾತುಗಳು ಬಹಳ ಆಕರ್ಷಣೀಯವೇ ಆಗಿತ್ತು. ಆದರೆ ಒಂದು ಮಾತು ತಿಳಿದಿರಲಿ. ಜಾತೀಯತೆ, ಶೋಷಣೆ, ದಬ್ಬಾಳಿಕೆ, ಕಂದಾಚಾರ, ಮೂಡನಂಬಿಕೆ, ಭ್ರಷ್ಟಾಚಾರ, ಲಂಚಗುಳಿತನ, ಸ್ವಜನ ಪಕ್ಷಪಾತ ,ಅಸಮಾನತೆ ಮುಂತಾದ ಸಮಾಜದ ಕಸವನ್ನು ಗುಡಿಸುವುದು ಅಷ್ಟು ಸುಲಭದ ಮಾತಲ್ಲ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ರಂತಹ ಮಹನೀಯರು ಜನಿಸಿದ ನಂತರವೂ ಈ ಸಮಸ್ಯೆಗಳು ನಮಗೆ ಕಾಡುತ್ತಲೇ ಇವೆ ಎಂಬುದು ಸತ್ಯ.

ಇದೊಂದು ನಿರಂತರ, ನಿಲ್ಲದ ,ಅನಂತ ಕ್ರಿಯೆ. ಅಭಿವೃದ್ಧಿಯ ಘಂಟೆ ಬಾರಿಸುವುದು ಎಂದರೆ ಕಟ್ಟಡ ಕಟ್ಟುವುದಲ್ಲ, ರಸ್ತೆ ಚರಂಡಿಗಳ ನಿರ್ಮಾಣವಲ್ಲ,ಬದಲಾಗಿ ಜನರ ಮನಸ್ಸುಗಳನ್ನು ಕಟ್ಟುವುದು,, ಜನರು ತಮ್ಮಷ್ಟಕ್ಕೆ ತಾವು ಆತ್ಮಭಿಮಾನದಿಂದ, ಆತ್ಮ ಗೌರವದಿಂದ ಬದುಕುವ ವಾತಾವರಣವನ್ನು ಸೃಷ್ಟಿಸುವುದು. ಬಸವಾದಿ ಶರಣರನ್ನು, ಬುದ್ಧ, ಗಾಂಧಿ, ಅಂಬೇಡ್ಕರ್ ರವರನ್ನು ಓದಿಕೊಂಡಿರುವ ನೀವು ಸಮಾನತೆ, ಮಾನವೀಯತೆಯ ಸೆಲೆಗಳನ್ನು ಜನರ ಎದೆಯಲ್ಲಿ ತುಂಬುವಿರೆಂಬ ಆತ್ಮ ವಿಶ್ವಾಸ ನನ್ನದು.

“ರೋಟಿ,ಕಪಡಾ ಹೌರ್ ಮಕಾನ” ಇವು ಮೂರು ಮನುಷ್ಯನನ್ನು ಕಾಡುವ ರೀತಿಯೇ ವಿಚಿತ್ರ. ಹಸಿದವರಿಗೆ ತುಳುಕು ರೊಟ್ಟಿ, ಹಿಡಿ ಅನ್ನ ,ಮಾನ ಮುಚ್ಚಲು ಒಂದಿಷ್ಟು ಬಟ್ಟೆ, ನೆಮ್ಮದಿಯ ನಿದ್ರೆಗೆ ತಲೆಯ ಮೇಲೊಂದು ಸೂರು ದೊರೆತರೆ ಮನುಷ್ಯನ ಸ್ವಭಾವವೇ ಬದಲಾದೀತು. ಜನರ ನೆಮ್ಮದಿಯ ಬದುಕಿಗೆ ಕಾರಣವಾದ ಈ ಮೂರು ಅಂಶಗಳ ಬಗ್ಗೆ ನಿಮ್ಮ ಗಮನವಿರಲಿ.

ದೇವಾಲಯಗಳನ್ನು ಕಟ್ಟುವುದಕ್ಕಿಂತ ಮುಖ್ಯವಾಗಿ ಸುಸಜ್ಜಿತವಾದ ಗ್ರಂಥಾಲಯಗಳನ್ನು ಕಟ್ಟುವ ಕೆಲಸವಾಗಬೇಕಿದೆ. ಅಲ್ಲಿ ಎಲ್ಲ ಸ್ತರದ ಜನ ಕುಂತು ಓದುವ ವಾತಾವರಣ ಕಲ್ಪಿಸುವುದು ನಮ್ಮ ಆದ್ಯತೆಯ ಕೆಲಸವಾಗಬೇಕಿದೆ. ಸ್ವಾತಂತ್ರ್ಯ ಬಂದು 75 ವರ್ಷ ಸಂದರೂ ಹಳ್ಳಿಗಾಡಿನಲ್ಲಿ ಇರಲಿ, ಜಗಳೂರಿನಲ್ಲಿ ಸೂಕ್ತ ಗ್ರಂಥಾಲಯ ಕಟ್ಟಡ ಇಲ್ಲ ಎಂಬ ಸಂಗತಿ ತಲೆತಗ್ಗಿಸುವಂತಹುದು. ಇದುವರೆಗಿನ ಪ್ರಯತ್ನ ಕೋಣದ ಮುಂದೆ ಕಿಂದರಿ ಬಾರಿಸಿದ ಹಾಗಾಗಿದೆ. ಇನ್ನಾದರೂ ಓದುಗರ ಆಸೆ ಈಡೇರಲಿ.

“ದೇವರು ಇರುವುದು ನಾಲ್ಕು ಗೋಡೆಗಳ ಮಧ್ಯದಲ್ಲಿ ಮಾತ್ರವಲ್ಲ, ಹಗಲಿರುಳೆನ್ನದೆ ಕಾಯಕ ನಿರತನಾದ ನೇಗಿಲ ಯೋಗಿಯ ಹೃದಯದಲ್ಲಿ ಅವನು ವಾಸವಾಗಿದ್ದಾನೆ” ಎಂದು ರೈತರನ್ನು ಕುರಿತು ಕವಿ ರವೀಂದ್ರನಾಥ ಟ್ಯಾಗೂರರು ನುಡಿದಿದ್ದಾರೆ. ಹಳ್ಳಿಗಳು ಹಸನಾಗದ ಹೊರತು ದೇಶ ಹಸನಾಗದು .ಹಳ್ಳಿಗಳ ಕಷ್ಟಕಾರ್ಪಣ್ಯಗಳಿಗೆ ಸದಾ ಮಿಡಿಯುವ ಹೃದಯ ನಿಮ್ಮದಾಗಲಿ.

ನೀರಾವರಿ ಯೋಜನೆಗಳು ತ್ವರಿತವಾಗಿ ಕೈಗೂಡಲಿ.

ಶುದ್ಧ ಕುಡಿಯುವ ನೀರು ಕನಸಿನ ಮಾತಾಗಿದೆ . ಜಗಲೂರಿಗೆ ಸೂಳೆಕೆರೆ ನೀರು ನೆಲ ಕಚ್ಚಿದೆ. ಹಳ್ಳಿಗಳಲ್ಲಿ ಫೆÇ್ಲೀರೈಡ್ ನೀರನ್ನೇ ಜನ ಕುಡಿದು ಬದುಕುವ ಪ್ರಮೇಯವಿದೆ. ಜಲಜೀವನ್ ಮಿಷನ್ ಯೋಜನೆ ಬೇಗ ಆದಲ್ಲಿ ಜನ ನಿಮ್ಮ ಸೇವೆ ಸ್ಮರಣೆ ಮಾಡಿಯಾರು.

ಶಿಕ್ಷಣದ ಮಹತ್ವ ನಿಮಗೆ ತಿಳಿದಿದೆ ನಿಮ್ಮ ಮಕ್ಕಳ ಶಿಕ್ಷಣದ ಅಸ್ತ್ರದಿಂದಲೇ ನೀವು ಬದುಕಿನಲ್ಲಿ ಇಂತಹ ಎತ್ತರಕ್ಕೆ ಬಂದದ್ದು ಪ್ರಮುಖ ಕಾರಣ ಎಂಬುದನ್ನು ಮರೆಯಲಾಗದು. ತಾಲೂಕಿನಲ್ಲಿ ಗ್ರಾಮೀಣ ಸಾರಿಗೆಯ ವ್ಯವಸ್ಥೆಯ ಕೊರತೆಯಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಅಪಾರ. ಸೂಕ್ತ ಸಾರಿಗೆಯ ವ್ಯವಸ್ಥೆ ನಿಮ್ಮ ಆದ್ಯತೆಯ ಕೆಲಸವಾಗಲಿ.

ಜಾತಿ ,ಮತ, ಪಂಥ, ಕುಲ,ಬಂದು ಬಾಂಧವರು ನಿಮ್ಮ ಸೇವೆಯ ಹಾದಿಯಲ್ಲಿ ಅಡ್ಡ ಬಾರದಿರಲಿ.ಮಾನವಕುಲ ತಾನೊಂದೇ ವಲಂ ಎನ್ನುವ ಭಾವ ಸದಾ ಮನಸ್ಸಿನಲ್ಲಿರಲಿ.

ನಿಮಗೆ ಮೊದಲಿನಿಂದಲೂ ಓದುವ ಹವ್ಯಾಸ ಇರುವುದು ಮೆಚ್ಚುಗೆಯ ವಿಚಾರ. ಅಂತೆಯೇ ನಾಟಕ ,ಸಾಹಿತ್ಯ, ಸಂಗೀತದ ಅಭಿರುಚಿ ಅನುಕರಣೀಯ. ಶಾಸಕರಾದ ನಂತರ ಇವೆಲ್ಲ ಮಾಯವಾಗದಿರಲಿ .ನಾಡಿನ ಹಿರಿಮೆ ಗರಿಮೆ ಇರುವುದು ಅಲ್ಲಿನ ಸಾಹಿತ್ಯ,ಸಾಂಸ್ಕøತಿ ವಾತಾವರಣದಲ್ಲಿ. ಕ್ಷೇತ್ರದಲ್ಲಿ ಸಾಹಿತ್ಯ, ಕಲೆ, ನಾಟಕ, ಸಂಗೀತದ ಹೊನಲು ಹರಿಯುವಂತಾಗಲಿ.

ಬೆಲ್ಲ ಇದ್ದ ಕಡೆ ನೊಣ ಮುಸುರುವುದು ಸಹಜ. ನಿಮ್ಮಲ್ಲಿ ಅಧಿಕಾರ ಮನೆ ಮಾಡಿದ ತಕ್ಷಣ ಅನೇಕ ಮಂದಿ ವಂದಿಮಾಗದರು, ಹೊಗಳು ಭಟ್ಟರು, ಆಸ್ಥಾನ ಪಂಡಿತರು ತಂತಾನೆ ಹುಟ್ಟಿಕೊಳ್ಳಬಲ್ಲರು. ಹೊಗಳಿಕೆಯ ಹೊನ್ನ ಶೂಲ ನಿಮ್ಮನ್ನು ಇರಿಯದಿರಲಿ.ಚಾಡಿಹೇಳುವ,ತಮ್ಮ ಅನುಕೂಲಕ್ಕೆ ತಕ್ಕ ಸುಳ್ಳನ್ನು ಬಿತ್ತಿ ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳುವ.

ಒಳ್ಳೆಯವರನ್ನು ಕೆಟ್ಟವರನ್ನಾಗಿ ಬಿಂಬಿಸುವ, ಹತ್ತಿರದವರನ್ನು ದೂರ ಮಾಡುವ ಕೆಲವು ಸ್ವಹಿತಾಸಕ್ತರ ಪಡೆಯೇ ನಿಮ್ಮ ಮುಂದೆ ನಿಲ್ಲಬಲ್ಲದು. ಅವರಲ್ಲಿ ಒಳ್ಳೆಯವರು ಯಾರು, ಕೆಟ್ಟವರು ಯಾರು, ಅವರ ಒಳ ಉದ್ದೇಶಗಳು ಏನು, ಆಕಳ ಹಾಲು ಯಾವುದು , ಕಳ್ಳಿ ಹಾಲು ಯಾವುದು ಎನ್ನುವ ಪರಿಜ್ಞಾನ ಪ್ರಾರಂಭ ದಿಂದಲೇ ಇರಲಿ.

ನೌಕರಿ ಶಾಹಿಯ ಬಗ್ಗೆ ಹಿಡಿತವಿರಲಿ ನಿಮ್ಮ, ಸರ್ಕಾರದ ಉದ್ದೇಶಗಳು ಒಳ್ಳೆಯವೇ ಇರಬಹುದು. ಆದರೆ ಅವುಗಳನ್ನು ಜನರಿಗೆ ಸರಿಯಾದ ರೀತಿಯಲ್ಲಿ ತಲುಪಿಸುವ ಹೊಣೆಗಾರಿಕೆ ನೌಕರರಿಗೆ ಸೇರಿದೆ ಎಂಬ ಅಂಶ ಪ್ರಮುಖವಾದುದು. ನೀವು ಆಡಳಿತ ಯಂತ್ರವನ್ನು ಯಾವ ರೀತಿ ಮುನ್ನಡೆಸುವಿರೆಂಬ ವಿಷಯದಲ್ಲಿ ನಿಮ್ಮ ಯಶಸ್ಸು ಅಡಕವಾಗಿದೆ ಎಂಬುದನ್ನುಮರೆಯದಿರಿ.

ಕೊನೆಯದಾದರೂ ಒಂದು ಪ್ರಮುಖ ಮಾತು. ಹಣ, ಅಂತಸ್ತು, ಕೀರ್ತಿ, ಅಧಿಕಾರ, ದ್ವೇಷ , ದುರಾಸೆಗಳು ನಿಮ್ಮ ಮನಸ್ಸು ಕೆಡಿಸದಿರಲಿ. ನಾವು ಇದುವರೆಗೆ ಕಂಡ ಪ್ರಾಂಜ್ವಲ ಮನಸ್ಸಿನ ,ಸಕಲರಿಗೆ ಲೇಸ ಬಯಸುವ, ಸೇವೆಗಾಗಿ ಹಪಹಪಿಸುವ ಚಿಕ್ಕಮನಹಟ್ಟಿಯ ಚೊಕ್ಕ ದೇವೇಂದ್ರಪ್ಪನ ಅಂತರಾತ್ಮ ಶಾಸಕ ದೇವೇಂದ್ರಪ್ಪನ ಅಂತರಾಳದಲ್ಲಿ ಸದಾ ಅಡಗಿರಲಿ ಎಂಬ ಅಭಿಲಾಷೆ ನನ್ನದು, ನನ್ನಂಥವರದು. ಜನಪದದ ಮಹಿಳೆಯ ಮಾತು ಇಲ್ಲಿ ಸಾಂದರ್ಭಿಕ ಮತ್ತು ಸೂಕ್ತ.

“ಆಚಾರಕರಸಾಗು, ನೀತಿಗೆ ಪ್ರಭುವಾಗು, ಮಾತಿನಲಿ ಚೂಡಾ ಮಣಿಯಾಗು ನನ ಕಂದ, ಜ್ಯೋತಿಯೇ ಆಗು ಜಗಕೆಲ್ಲ” ಜಗಳೂರು ವಿಧಾನಸಭಾ ಕ್ಷೇತ್ರದ ಮತದಾರರ ಜಗತ್ತು ದೇವೇಂದ್ರಪ್ಪನವರಿಂದ ಇದೆಲ್ಲವನ್ನು ನಿರೀಕ್ಷಿಸುತ್ತದೆ.

ಇಂತಿ ನಿಮ್ಮ ಅಣ್ಣ
ಎನ್ . ಟಿ. ಎರ್ರಿಸ್ವಾಮಿ

Share this Article
Leave a comment

Leave a Reply

Your email address will not be published. Required fields are marked *

error: Content is protected !!