ಸುದ್ದಿವಿಜಯ, ಜಗಳೂರು: ತಾಲೂಕಿನ ಅಣಬೂರು ಗೊಲ್ಲರಹಟ್ಟಿ ಗ್ರಾಮದ ಜಮೀನೋಂದರಗಲ್ಲಿ ಉಳುಮೆ ಮಾಡುತ್ತಿದ್ದ ವೇಳೆ ಬಿರುಗಾಳಿ ಸಹಿತ ಮಳೆ ಬಂದ ಹಿನ್ನೆಲೆ ಹುಣಸೆ ಮರದ ಅಡಿ ಕುಳಿದ್ದ ಇಬ್ಬರು ವ್ಯಕ್ತಿಗಳಿಗೆ ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ನಡೆದಿದೆ. ಮೃತ ಮಟ್ಟವರನ್ನು ಕಾಟಪ್ಪ ಎಂಬುವರ ಪುತ್ರ ಕಾಟಲಿಂಗಪ್ಪ (40) ಮತ್ತು ಈರಪ್ಪ ಎಂಬುವರ ಪುತ್ರ ರಾಜಪ್ಪ (35) ಎಂದು ತಿಳಿದು ಬಂದಿದೆ.
ಘಟನೆ ವಿವರ:
ಮೊನ್ನೆ ಸುರಿದ ಭಾರಿ ಮಳೆಗೆ ಭೂಮಿ ಹದವಾಗಿದ್ದು ಶುಕ್ರವಾರ ಬಿತ್ತನೆ ಮಾಡಲು ಹೋಗಿದ್ದ ಇಬ್ಬರು ರೈತರು ಸಿಡಿಲಿಗೆ ಬಲಿಯಾಗಿದ್ದಾರೆ. ಗಾಳಿ ಮತ್ತು ಮಳೆ ಇದ್ದಕಾರಣ ಆಶ್ರಯಕ್ಕಾಗಿ ಹುಣಸೇ ಮರದ ಕೆಳಗೆ ಹೋಗಿದ್ದ ಕಾಟಲಿಂಗಪ್ಪ ಮತ್ತು ರಾಜಪ್ಪ ಅವರಿಗೆ ಸಿಡಿಲು ಬಡಿದು ಕ್ಷಣಾರ್ಧದಲ್ಲೇ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಶಾಸಕ ಬಿ.ದೇವೇಂದ್ರಪ್ಪ, ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್, ಸಿಪಿಐ ಶ್ರೀನಿವಾಸ್‍ರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಮಾತನಾಡಿದ ಶಾಸಕ ಬಿ.ದೇವೇಂದ್ರಪ್ಪ, ಇದೊಂದು ಘೋರ ದುರ್ಘಟನೆ ಹೀಗಾಗ ಬಾರದಿತ್ತು.
ಎನ್‍ಡಿಆರ್‍ಎಫ್ ನಿಯಮಗಳ ಅನುಸಾರ ಮೃತ ವ್ಯಕ್ತಿಗಳ ಕುಟುಂಬಕ್ಕೆ ತಲಾ ಐದು ಲಕ್ಷ ರೂ ಪರಿಹಾರ ನೀಡಲಾಗುವುದು. ವೈಯಕ್ತಿಕವಾಗಿ ಎರಡು ಕುಟುಂಬಗಳಿಗೆ ತಲಾ 25 ಸಾವಿರ ರೂ ಪರಿಹಾರ ನೀಡಿದ್ದೇವೆ. ರೈತರು ಗುಡುಗು ಸಹಿತ ಮಳೆ ಬಂದಾಗ ಮರ ಅಥವಾ ವಿದ್ಯುತ್ ಕಂಬಗಳ ಪಕ್ಕದಲ್ಲಿ ನಿಲ್ಲಬಾರದು ಎಂದು ಮನವಿ ಮಾಡಿದರು.
ಮೃತ ವ್ಯಕ್ತಿಗಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಶಾಸಕರಾದ ದೇವೇಂದ್ರಪ್ಪ ಮತ್ತು ಅಧಿಕಾರಿಗಳು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.