ಜಗಳೂರು: ಲಂಚ ಪಡೆದ ಲೈನ್‍ಮನ್ ರುದ್ರಗೌಡ ಕಕ್ಕಳಮೇಲಿ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ!

Suddivijaya
Suddivijaya July 3, 2024
Updated 2024/07/03 at 6:27 AM

suddivijayanews3/07/2024
ಶಿವಲಿಂಗಪ್ಪ, ದೊಡ್ಡಬೊಮ್ಮನಹಳ್ಳಿ

ಸುದ್ದಿವಿಜಯ, ಜಗಳೂರು: ತಾಲೂಕಿನ ತೋರಣಗಟ್ಟೆ ಗ್ರಾಪಂ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಬೆಸ್ಕಾಂ ಲೈನ್‍ಮನ್ ರುದ್ರಗೌಡ ಕಕ್ಕಳಮೇಲಿ ವಿರುದ್ಧ ರೈತರು ಭ್ರಷ್ಟಾಚಾರ ಆರೋಪ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಹೊನ್ನಮರಡಿ ಗ್ರಾಮದ ಬಳಿ ಕಳೆದ ಭಾನುವಾರ (ಜು.30) ಕ್ಲೀನ್‍ಮ್ಯಾಕ್ಸ್ ವಿಂಡ್ ಫ್ಯಾನ್ ಸ್ಥಾವರ ನಿರ್ಮಾಣಕ್ಕೆ ಬೃಹತ್ ಲಾರಿಗಳಲ್ಲಿ ವಿದ್ಯುತ್ ಉಪಕರಣಗಳನ್ನು ಸಾಗಿಸುವಾಗ ಗ್ರಾಮಕ್ಕೆ ಪೂರೈಕೆಯಾಗುವ ನಿರಂತರ ಜ್ಯೋತಿ ವಿದ್ಯುತ್ ಕಂಬಳಿಗೆ ತಾಗಿ ಮೂರು ವಿದ್ಯುತ್ ಕಂಬಗಳು ಮತ್ತು ಟ್ರಾನ್ಸ್ ಫಾರ್ಮರ್ ಮುರಿದು ನೆಲಕ್ಕೆ ಬಿದ್ದಿದ್ದವು.

ಈ ಅವಘಡವನ್ನು ತಾಲೂಕು ಬೆಸ್ಕಾಂ ಎಇಇ ಸುಧಾಮಣಿ ಅವರ ಗಮನಕ್ಕೆ ತಾರದೇ ಆ ಭಾಗದ ಲೈನ್‍ಮನ್ ರುದ್ರಗೌಡ ಕಕ್ಕಳಮೇಲಿ ವಿಂಡ್ ಫ್ಯಾನ್ ಕಂಪನಿಯ ಜೊತೆ ಶಾಮೀಲಾಗಿ ಹಣ ಪಡೆದು ಗುತ್ತಿಗೆದಾರರಿಂದ ನೇರವಾಗಿ ಕಾಮಗಾರಿ ಮಾಡಿಸಿದ್ದಾರೆ ಎಂದು ಜಮ್ಮಾಪುರ ಗ್ರಾಮದ ರೈತರಾದ ತಿಪ್ಪೇಸ್ವಾಮಿ ಸೇರಿದಂತೆ ಅನೇಕ ರೈತರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ 20 ವರ್ಷಗಳಿಂದ ತೋರಣಗಟ್ಟೆ ಗ್ರಾಪಂ ವ್ಯಾಪ್ತಿಯ ಜಮ್ಮಾಪುರ, ಹೊನ್ನಮರಡಿ, ಅರಿಶಿಣಗುಂಡಿ, ಲಿಂಗಣ್ಣನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳ ಇಂಚಾರ್ಜ್ ಬೆಸ್ಕಾಂ ಲೈನ್‍ಮನ್ ಆಗಿ ಕಾರ್ಯನಿರ್ವಹಿಸುತ್ತಿರುವ ಮೂಲತಃ ಬಿಜಾಪುರ ಜಿಲ್ಲೆ ರುದ್ರಗೌಡ ಕಕ್ಕಳಮೇಲಿ ವಿರುದ್ಧ ರೈತರು ತಿರುಗಿ ಬಿದ್ದಿದ್ದಾರೆ.

 

ವಿಂಡ್ ಫ್ಯಾನ್ ನಿರ್ಮಾಣಕ್ಕೆ ಬೃಹತ್ ಉಪಕರಣಗಳನ್ನು ಲಾರಿಗಳಲ್ಲಿ ಸಾಗಿಸುವಾಗ ಕಿರಿದಾದ ರಸ್ತೆಯಲ್ಲಿ ಅಡ್ಡಲಾಗಿರುವ ಲೈನ್‍ಗೆ ತಾಗಿ ಕಂಬಗಳು ಮುರಿದು ಬಿದ್ದು ಒಂದು ದಿನವಾದ ನಂತರ ಅಧಿಕಾರಿಗಳ ಗಮನಕ್ಕೆ ತಂದು ಅವರು ಬರುವ ಮುಂಚೆಯೇ ವಿಂಡ್ ಫ್ಯಾನ್ ಕಂಪನಿಯ ಜೊತೆ ಹೊಂದಾಣಿಕೆ ಮಾಡಿಕೊಂಡು ಹಣ ಪಡೆದು ವಿದ್ಯುತ್ ಕಾಮಗಾರಿ ಗುತ್ತಿಗೆದಾರರ ಜೊತೆ ಸೇರಿ ಹೊಸ ಕಂಬಗಳು ಮತ್ತು ಟಿಸಿಯನ್ನು ತರಿಸಿ ಫಿಕ್ಸ್ ಮಾಡಿದ್ದಾರೆ.ಇದಕ್ಕೆ ಬೆಸ್ಕಾಂನ ಎಇ, ಎಸ್‍ಒ ಮತ್ತು ಎಇಇ ಅವರಿಂದ ನಿಯಮಗಳಂತೆ ಅನುಮತಿ ಪಡೆಯದೇ ಕಾಮಗಾರಿ ಮಾಡಿಸಿ ಕೈತೊಳೆದುಕೊಂಡಿದ್ದಾರೆ. ಅವಘಡಕ್ಕೆ ಯಾರಾದರೂ ಬಲಿಯಾಗಿದ್ದರೆ ಯಾರು ಹೊಣೆ ಎಂದು ರೈತರು ಪ್ರಶ್ನಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ:
ಅಧಿಕಾರಿಗಳ ಗಮನಕ್ಕೆ ಬಾರದೇ ಫ್ಯಾನ್ ಕಂಪನಿಯಿಂದ ದುರಸ್ತಿ ನೆಪದಲ್ಲಿ ಬೆಸ್ಕಾಂ ಇಲಾಖೆಯ ಲೈನ್‍ಮನ್ ಹಾಗೂ ಗುತ್ತಿಗೆದಾರನೊಬ್ಬನ ಖಾತೆಗೆ ಲಕ್ಷಾಂತರ ರೂಗಳು ವರ್ಗಾವಣೆಯಾಗಿರುವ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದ್ದು, ತನಿಖೆಯಾಗಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಬೆಸ್ಕಾಂಗೆ ಸಂಬಂಧಿಸಿದ ಯಾವುದೇ ಘಟನೆಯಾದರೆ ಅದನ್ನು ಮೇಲಾಧಿಕಾರಿಗಳ ಗಮನಕ್ಕೆ ತರಬೇಕು. ಆದರೆ ಈ ಲೈನ್‍ಮನ್ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ತಾನೇ ಏಕಾದಿಪಥ್ಯ ಸಾಧಿಸುತ್ತಿದ್ದಾರೆ ಎಂದು ರೈತರು ಗಂಭೀರ ಆರೋಪ ಮಾಡಿದ್ದಾರೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!