ಸುದ್ದಿವಿಜಯಮ ಜಗಳೂರು: ವೀರಶೈವ ಲಿಂಗಾಯಿತ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಕೈ ಜೋಡಿಸಿರುವುದು ಪಕ್ಷಕ್ಕೆ ಆನೆ ಬಲ ಬಂದಿದೆ ಎಂದು ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಹೇಳಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವೀರಶೈವ ಲಿಂಗಾಯಿತರ ಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ್ ಹೈಕಮಾಂಡ್ ಗುರುತಿಸಿ ನನಗೆ ಟಿಕೆಟ್ ನೀಡಿದೆ. ಹಾಗಾಗಿ ಸ್ಪರ್ಧೆ ಮಾಡಿದ್ದೇನೆ. ಕೆಲವರು ನನ್ನ ಬಗ್ಗೆ ಅಪ ಪ್ರಚಾರ ಮಾಡುತ್ತಿದ್ದಾರೆ. ಆದರೆ ಅನಗತ್ಯ ಗೊಂದಲ ಮಾಡುವುದು ಬೇಡ. ಇದಕ್ಕೆ ಕ್ಷೇತ್ರದ ಮತದಾರರೇ ಉತ್ತಮವಾದ ತೀರ್ಪು ನೀಡಲಿದ್ದಾರೆ ಎಂದರು.
2011ರಲ್ಲಿ ಅರಸಿಕೆರೆ ದೇವೇಂದ್ರಪ್ಪ ಕಾಂಗ್ರೆಸ್‍ನಿಂದ ಸೋತಿದ್ದರು, ಆದರೆ 2013ರಲ್ಲಿ ದೇವೇಂದ್ರಪ್ಪಗೆ ಟಿಕೆಟ್ ತಪ್ಪಿಸಿ ಅನ್ಯಾಯ ಮಾಡಿದ್ದು ರಾಜೇಶ್ ಅವರು ಮರೆಯಬಾರದು. ಇದೀಗ 2023ರಲ್ಲಿ ದೇವೇಂದ್ರಪ್ಪ ಹೆಸರಿನ ನನಗೆ ಟಿಕೆಟ್ ಲಭಿಸಿದೆ ಎಂದು ಪರೋಕ್ಷವಾಗಿ ಕುಟುಕಿದರು.
ಕ್ಷೇತ್ರದಲ್ಲಿ ಎಸ್.ವಿ ರಾಮಚಂದ್ರ ಮತ್ತು ಎಚ್.ಪಿ ರಾಜೇಶ್ ಇಬ್ಬರನ್ನು ಜನರು ಆಯ್ಕೆ ಮಾಡಿ ವಿಧಾನ ಸೌಧಕ್ಕೆ ಕಳಿಸಿಕೊಟ್ಟಿದ್ದಾರೆ. ಈ ಭಾರಿ ನನಗೂ ಆಶೀರ್ವಾದ ಮಾಡಿ ಒಂದು ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಕೆಪಿಸಿಸಿ ಕ್ಷೇತ್ರ ಉಸ್ತುವಾರಿ ಕಲ್ಲೇಶ್‍ರಾಜ್ ಪಟೇಲ್ ಮಾತನಾಡಿ, ವೀರಶೈವರು ಬಸವಣ್ಣನವರ ಅನೂಯಾಯಿಗಳಾಗಿದ್ದೇವೆ. ಬಿಜೆಪಿಗೆ ಈ ಭಾರಿ ವೀರಶೈವ ಸಮಾಜ ವಿರುದ್ದವಾಗಿ ನಿಂತಿದೆ. ಕಾಂಗ್ರೆಸ್ ಎಲ್ಲಾ ಸಮುದಾಯಗಳಿಗೂ ಸಾಮಾಜಿಕ ನ್ಯಾಯವನ್ನು ಕಲ್ಪಿಸಿದೆ. ಎಲ್ಲರಿಗೂ ಸೌಲಭ್ಯಗಳನ್ನು ನೀಡಿದೆ. ಆದರೆ ಬಿಜೆಪಿಯವರ ಟೀಕೆಗಳಿಗೆ ಕಿವಿಗೊಡಬೇಡಿ ಎಂದರು.
ಕೆಪಿಸಿಸಿ ಎಸ್ಟಿ ಘಟಕ ಅಧ್ಯಕ್ಷ ಕೆ.ಪಿ ಪಾಲಯ್ಯ ಮಾತನಾಡಿ, ಈ ದೇಶದಲ್ಲಿ ವೀರಶೈವ ಸಮಾಜ ಅಸಿದವರಿಗೆ ಅನ್ನ ದಾಸೋಹ ನೀಡಿದವರು. ಚುನಾವಣೆಯಲ್ಲಿ ಸಮುದಾಯದ ಮುಖಂಡರು ಕಾಂಗ್ರೆಸ್ ಪರವಾಗಿ ನಿಂತಿದ್ದು, ನಮ್ಮ ಪರವಾಗಿ ಉತ್ತಮ ಫಲಿತಾಂಶ ಸಿಗಲಿದೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಸಗೋಡು ಜಯಸಿಂಹ ಮಾತನಾಡಿ, ವೀರಶೈವ ಲಿಂಗಾಯಿತ ಸಮುದಾಯ ಬಿಜೆಪಿಯವರು ಮತ ಬ್ಯಾಂಕ್ ಅಂದುಕೊಂಡಿದ್ದರು ಆದರೆ ಕಾಲ ಬದಲಾಗಿದೆ. ಬಹುತೇಕ ವೀರಶೈವರು ಕಾಂಗ್ರೆಸ್‍ನೊಂದಿಗೆ ಇದ್ದೇವೆಂಬುವುದನ್ನು ಕ್ಷೇತ್ರದಲ್ಲಿ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ನಿಶ್ಚಿತ ಎಂದರು.
ಈ ಸಂದರ್ಭದಲ್ಲಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್‍ಗೌಡ, ಮುಖಂಡರಾದ ಬೂದಿಹಾಳ್ ಸಿದ್ದಪ್ಪ, ಡಿ. ಬಸವರಾಜ್, ಚನ್ನಪ್ಪ ಸೇರಿದಂತೆ ನೂರಾರು ಮುಖಂಡರುಗಳು ಇದ್ದರು.