ಸುದ್ದಿವಿಜಯ, ಜಗಳೂರು: ಗ್ರಾಪಂಗಳಲ್ಲಿ ಹೇಳೋರಿಲ್ಲ ಕೇಳೋರಿಲ್ಲ. ಪಿಡಿಓಗಳು ಕೆಲಸಕ್ಕೆ ಬರ್ತಿಲ್ಲ. ಮಧ್ಯವರ್ತಿಗಳ ಕಾಟ ಕಚೇರಿಯಲ್ಲಿ ಜಾಸ್ತಿಯಾಗಿದೆ. ಸ್ವಚ್ಛತೆಯಿಲ್ಲ. ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಲೋಕಾಯುಕ್ತ ಎಸ್‍ಪಿಗೆ ಅನೇಕ ಸಾರ್ವಜನಿಕರು ದೂರು ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಲೋಕಯುಕ್ತ ವತಿಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ದೂರುಗಳಗಳ ಸುರಿಮಳೆಗಳು ಕೇಳಿಬಂದವು.
ಹನುಮಂತಾಪುರ ಗ್ರಾಪಂನ ಗ್ರಾಮಸ್ಥ ದಾದಾಪೀರ್ ಎಂಬುವರು ಲೋಕಾಯುಕ್ತ ಎಸ್ಪಿ ಎದುರು ಸಮಸ್ಯೆಗಳನ್ನು ಬಿಚ್ಚಿಟ್ಟು ಎಲ್ಲರನ್ನೂ ಉಬ್ಬೇರುವಂತೆ ಮಾಡಿದರು. ನಮ್ಮ ಗ್ರಾಪಂ ಕಚೇರಿಯಲ್ಲಿ ಹೊಡಿ, ಬಡಿ, ಕಡಿ ಸಂಸ್ಕøತಿಯಿದೆ. ಬೇಕಾಬಿಟ್ಟಿ ಬಿಲ್ ಮಾಡಿಕೊಂಡು ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಎಂದು ಆಕ್ರೋಶ ಹೊರಹಾಕಿದರು.
ಆಗ ಲೋಕಾ ಎಸ್‍ಪಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಲು ಸರಕಾರ ಅಧಿಕಾರಿಗಳಿಗೆ ಪ್ರತಿ ತಿಂಗಳು ವೇತನ ನೀಡುತ್ತಿದೆ. ಆದರೆ ಮೈಗಳ್ಳತನದಿಂದ ಸರಿಯಾಗಿ ಕಚೇರಿಗೂ ಬಾರದೇ, ಜನರ ಕೈಗೂ ಸಿಗದೇ ಓಡಾಡಿದರೆ ನಿಮ್ಮ ಅವಶ್ಯಕತೆ ಇರುವುದಿಲ್ಲ. ಅಂತವರು ಕೆಲಸಕ್ಕೆ ರಾಜೀನಾಮೆ ನೀಡಿ ಮನೆಯಲ್ಲಿರಿ ಎಂದು ನೀರಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ನಾಗರಾಜ್ ಮಾತನಾಡಿ, ಆಸ್ಪತ್ರೆಯ ಕುಂದು-ಕೊರತೆಗಳ ಬಗ್ಗೆ ಮಾಹಿತಿ ನೀಡಿದ ಅವರಿಗೆ ಎಷ್ಟು ಮಂದಿ ವೈದ್ಯರು, ಸಿಬ್ಬಂದಿಗಳಿದ್ದಾರೆ. ಅವರೆಲ್ಲಾ ಕೇಂದ್ರ ಸ್ಥಾನದಲ್ಲಿದ್ದಾರೆಯೇ ಅಥವಾ ಬೇರೆ ಕಡೆಯಿಂದ ಓಡಾಡುತ್ತಿದ್ದಾರಾ ಎಂದು ಎಸ್ಪಿ ಪ್ರಶ್ನಿಸಿದರು ಅದಕ್ಕೆ ಸ್ಪಷ್ಟನೆ ನೀಡದೇ ತಲೆ ಅಲ್ಲಾಡಿಸಿದ ಆರೋಗ್ಯಾಧಿಕಾರಿಗೆ ಆಸ್ಪತ್ರೆಗೆ ಹಗಲು ರಾತಿಯಲ್ಲಿ ಹಲವಾರು ತೊಂದರೆಗಳಿಗೆ ಒಳಗಾದವರು ಬರುತ್ತಾರೆ. ಆಗ ವೈದ್ಯರಿಲ್ಲದಿದ್ದರೇ ತೊಂದರೆಯಾಗುತ್ತದೆ. ಆದ್ದರಿಂದ ಎಲ್ಲಾ ವೈದ್ಯರು ಕೇಂದ್ರಸ್ಥಾನದಲ್ಲಿದ್ದು ಕೆಲಸ ಮಾಡಲು ಸೂಚನೆ ನೀಡಬೇಕು ಎಂದು ತಾಕೀತು ಮಾಡಿದರು.
ಕುಡಿಯುವ ನೀರಿನ ಟ್ಯಾಂಕ್ ಮಾಫಿಯಾ:
ಜಗಳೂರು ಪಟ್ಟಣದಲ್ಲಿ ಎಲ್ಲಿಯೂ ಆರ್‍ಓ ಘಟಕಗಳಿಲ್ಲ. ಸುಮಾರು 15ಕ್ಕೂ ಹೆಚ್ಚು ಕುಡಿಯುವ ನೀರಿನ ಖಾಸಗಿ ಟ್ಯಾಂಕ್‍ಗಳು ಮನೆ ಬಾಗಿಲಿಗೆ ನೀರು ತಲುಪಿಸುತ್ತವೆ. ಆದರೆ ಅವುಗಳ ಗುಣಮಟ್ಟ ಹೇಗಿದೆ ಎಂಬುದು ಅಧಿಕಾರಿಗಳಿಗೆ ಗೊತ್ತಿಲ್ಲ ಎಂದು ಕೆಲ ಸಾರ್ವಜನಿಕರು ದೂರು ನೀಡಿದರು. ಅದಕ್ಕೆ ಎಸ್‍ಪಿ ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್, ಮತ್ತು ಟಿಎಚ್‍ಓ ನಾಗರಾಜ್ ಅವರನ್ನು ಕರೆದು ತರಾಟೆಗೆ ತೆಗೆದುಕೊಂಡರು.
ಶಾಲೆಗಳ ದುಸ್ಥಿತಿ:
ತಾಲೂಕಿನಲ್ಲಿ ಪ್ರಾಥಮಿಕ ಕಿರಿಯ ಶಾಲೆ 101, ಪ್ರೌಢ 80, ಸರ್ಕಾರಿ ಪ್ರೌಢ ಶಾಲೆಗಳು 17 ಸೇರಿದಂತೆ 198 ಶಾಲೆಗಳಿವೆ. ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ 6 ವಸತಿಯುತ ಶಾಲೆಗಳಿವೆ. ಅಲ್ಪ ಸಂಖ್ಯಾತ 1, ಅನುದಾನಿತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 14, ಪ್ರೌಢ ಶಾಲೆ 21, ಅನುದಾನ ರಹಿತ ಕಿರಿಯ ಪ್ರಾಥಮಿಕ ಶಾಲೆ 16, ಹಿರಿಯ ಪ್ರಾಥಮಿಕ ಶಾಲೆ 10, ಪ್ರೌಢ ಶಾಲೆ 7 ಸೇರಿದಂತೆ ಒಟ್ಟು 273 ಶಾಲೆಗಳು ಇವೆ. ಇದರಲ್ಲಿ ಶೇ.30 ರಷ್ಟು ಶಾಲೆಗಳು ದುಸ್ಥಿತಿಯಲ್ಲಿವೆ ಎಂದು ಪ್ರಬಾರ ಬಿಇಒ ಸುರೇಶ್‍ರೆಡ್ಡಿ ಮಾಹಿತಿ ನೀಡಿದರು.
ಲೋಕಯುಕ್ತ ಎಸ್ಪಿ ಎಂ.ಎಸ್ ಕೌಲಾಪೂರೆ ಈಗಾಗಲೇ ಶಾಲೆಗಳು ಆರಂಭವಾಗಿ ಮಕ್ಕಳೆಲ್ಲಾ ಶಾಲೆಯತ್ತಾ ಹೆಜ್ಜೆ ಹಾಕಿದ್ದಾರೆ. ಆದರೆ ಸಾಕಷ್ಟು ಶಾಲಾ ಕೊಠಡಿಗಳು ಶಿಥಿಲಗೊಂಡು ಬೀಳುವಂತಿವೆ. ಇದರಿಂದ ಮಕ್ಕಳಿಗೆ ತುಂಬ ತೊಂದರೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಆದಷ್ಟು ಬೇಗ ಬೀಳುವ ಹಂತದಲ್ಲಿರುವ ಶಾಲೆಗಳ ಪಟ್ಟಿ ಸರ್ಕಾರಕ್ಕೆ ವರದಿ ಕೇಳಿಸಬೇಕು. ಈಗ ಕಾಮಗಾರಿ ಹಂತದಲ್ಲಿರುವ ಕಟ್ಟಡಗಳನ್ನು ಬೇಗ ಪೂರ್ಣಗೊಳಿಸಬೇಕು ಎಂದು ಬಿಇಒ ಅವರಿಗೆ ಸೂಚನೆ ನೀಡಿದರು.
ಓವರ್ ಹೆಡ್ ಸ್ವಚ್ಛತೆಗೊಳಿಸಿ:
ಪಟ್ಟಣದ ಸೇರಿದಂತೆ ತಾಲೂಕಿನಲ್ಲಿರುವ ಓವರ್‍ಹೆಡ್ ಟ್ಯಾಂಕ್ ಹಾಗೂ ಮಿನಿ ಟ್ಯಾಂಕುಗಳು ತೊಳೆದು ಸ್ವಚ್ಛತೆಗೊಳಿಸದೆ ದುರ್ನಾತ ಬೀರುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿದೆ. ಹಾಗದರೇ ಗ್ರಾಮ ಪಂಚಾಯಿತಿ ಅಧಿಕಾರಿಗಳು ಏನ್ ಕೆಲಸ ಮಾಡುತ್ತಾರೆ. ಕನಿಷ್ಠ ತಿಂಗಳಿಗೊಮ್ಮೆಯಾದರೂ ಶುಚಿಗೊಳಿಸದಿದ್ದರೆ ಜನರು ನೀರು ಹೇಗೆ ಕುಡಿಯಲು ಸಾಧ್ಯ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ತಕ್ಷಣವೇ ಎಷ್ಟು ಟ್ಯಾಂಕುಗಳಿವೆಯೋ ಮಾಹಿತಿ ತೆಗೆದುಕೊಂಡು ಒಂದು ವಾರದೊಳಗೆ ಸ್ವಚ್ಛಗೊಳಿಸಿ ವರದಿ ನೀಡಬೇಕು, ಆರೋಗ್ಯಾಧಿಕಾರಿಗಳು ಇದರ ಬಗ್ಗೆ ಗಮನಹರಿಸಬೇಕು, ಕೇವಲ ಕಚೇರಿಯಲ್ಲಿ ಕುಳಿತರೆ ಸಾಲದ ಗ್ರಾಮಗಳಿಗೆ ಸಂಚಾರ ಮಾಡಿ ಜನರು ಸಮಸ್ಯೆಗಳಿಗೆ ಧ್ವನಿಯಾಗಬೇಕು ಎಂದು ಲೋಕಯುಕ್ತ ಎಸ್ಪಿ ಸಲಹೆ ನೀಡಿದರು.
ಗ್ರಾಮ ಪಂಚಾಯಿತಿಗಳಲ್ಲಿ ಅವ್ಯವಸ್ಥೆಯಿಂದ ಕೂಡಿದೆ. ಅಲ್ಲಿ ಕೆಲಸ ಮಾಡುವ ಅಭಿವೃದ್ದಿ ಅಧಿಕಾರಿ ಸೇರಿದಂತೆ ಸಿಬ್ಬಂದಿಗಳು ಕೂಡ ಸೋಮಾರಿಗಳಾಗಿದ್ದಾರೆ. ಸಣ್ಣ ಪುಟ್ಟ ಕೆಲಸಗಳಿಗೆ ಬರುವ ಸಾರ್ವಜನಿಕರು ಅಧಿಕಾರಿಗಳಿಲ್ಲದೇ ಅಲೆದಾಡಿ ಮನೆಗೆ ವಾಪಾಸ್ಸಾಗುತ್ತಾರೆ. ಏನಾದರು ಪ್ರಶ್ನೆ ಮಾಡಿದರೇ ನಮ್ಮ ಮೇಲೆ ದೌರ್ಜನ್ಯ ಮಾಡುತ್ತಾರೆ ಎಂದು ಹನುಮಂತಾಪುರ ಗ್ರಾಮಸ್ಥ ದಾದಾಪೀರ್ ಲೋಕಯುಕ್ತ ಎಸ್ಪಿಗೆ ದೂರು ನೀಡಿ ಅಸಮಾಧಾನ ಹೊರಹಾಕಿದರು.
ಈ ಸಂದರ್ಭದಲ್ಲಿ ಲೋಕಯುಕ್ತ ಡಿವೈಎಸ್ಪಿ ಕೆ.ಜಿ ರಾಮಕೃಷ್ಣ, ಲೋಕಾ ಪಿಎಸ್‍ಐ ಪ್ರಭುಸೂರಿನ, ತಹಸೀಲ್ದಾರ್ ಸಂತೋಷ್‍ಕುಮಾರ್, ತಾ.ಪಂ ಇಒ ಚಂದ್ರಶೇಖರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಮಹೇಶ್ವರಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಡಿ.ಡಿ ಹಾಲಪ್ಪ ಸೇರಿದಂತೆ ಮತ್ತಿತರಿದ್ದರು.