ಸುದ್ದಿವಿಜಯ, ದಾವಣಗೆರೆ: ಜಮೀನಿನ ಚೆಕ್ ಬಂದಿ ಮತ್ತು ಪೋಡು ಸಂಖ್ಯೆ ಬದಲಾಗಿರುವುದನ್ನು ಸರಿ ಪಡಿಸಲು ರೈತರೊಬ್ಬರಿಂದ ಲಂಚ ಪಡೆಯುತ್ತಿದ್ದ ಭೂ ದಾಖಲೆಗಳ ಇಲಾಖೆ ಸೂಪರಿಂಟೆಂಡೆಂಟ್ (ಅಧೀಕ್ಷಕ) ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಗುರುವಾರ ನಡೆದಿದೆ.
ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿರುವ ಭೂ ದಾಖಲೆಗಳ ಇಲಾಖೆಯ ಅಧೀಕ್ಷಕ ಕೇಶವಮೂರ್ತಿ ಲೋಕಾಯುಕ್ತರ ಬಲೆಗೆ ಬಿದ್ದ ಅಧಿಕಾರಿ. ಜಗಳೂರು ತಾಲೂಕು ಪಲ್ಲಾಗಟ್ಟೆಯ ಪಿ.ಜಿ. ಮುನಿಯಪ್ಪ ಅವರ ಸೊಸೆಯ ತಾಯಿ ಮೀನಾಕ್ಷಮ್ಮ ಎಂಬುವರ ಹೆಸರಿನಲ್ಲಿರುವ ಜಮೀನಿನ ಚೆಕ್‍ಬಂದಿ ಮತ್ತು ಪೋಡು ಸಂಖ್ಯೆ ಬದಲಾಗಿತ್ತು.
ಇದನ್ನು ಸರಿಪಡಿಸಿಕೊಡುವಂತೆ ಅವರು ಭೂ ದಾಖಲೆಗಳ ಇಲಾಖೆಗೆ ಅರ್ಜಿಸಲ್ಲಿಸಿದ್ದರು. ದಾಖಲೆ ಸರಿಪಡಿಸಿಕೊಡಲು 40,000 ರೂ. ಲಂಚಕ್ಕೆ ಕೇಶವಮೂರ್ತಿ ಬೇಡಿಕೆ ಇರಿಸಿದ್ದರು. ಚೌಕಾಸಿ ಬಳಿಕ 30,000 ರೂ.ಗೆ ಒಪ್ಪಿಕೊಂಡಿದ್ದರು.
ಅದರಂತೆ ಜಿಲ್ಲಾಡಳಿತ ಭವನದಲ್ಲಿರುವ ಭೂ ದಾಖಲೆಗಳ ಇಲಾಖೆಯ ಅಧೀಕ್ಷಕ ಕಚೇರಿಯಲ್ಲಿ ಅಧೀಕ್ಷಕ ಕೇಶವಮೂರ್ತಿ, ಮುನಿಯಪ್ಪ ಅವರಿಂದ ಮುಂಗಡವಾಗಿ 5,000 ರೂ. ಲಂಚ ಪಡೆಯುವಾಗ ಲೋಕಾಯುಕ್ತ ಎಸ್‍ಪಿ ಎಂ.ಎಸ್. ಕೌಲಾಪೂರೆ ಮಾರ್ಗದರ್ಶನದಲ್ಲಿ, ಪೆÇಲೀಸ್ ನಿರೀಕ್ಷಕ ಎಚ್.ಎಸ್. ರಾಷ್ಟ್ರಪತಿ ನೇತೃತ್ವದ ತಂಡ ದಾಳಿ ನಡೆಸಿದೆ.