ಮೆಕ್ಕೆಜೋಳದ ತೆನೆಯೊಳಗೆ ಮನೆ ಮಾಡಿದ ಲದ್ದಿ ಹುಳು, ರೈತರಲ್ಲಿ ಹೆಚ್ಚಿದ ತಂಕ

Suddivijaya
Suddivijaya September 11, 2023
Updated 2023/09/11 at 1:54 AM

ಸುದ್ದಿವಿಜಯ ಜಗಳೂರು: ಮಳೆಯಿಲ್ಲದೇ ಕಂಗಾಲಾಗಿರುವ ರೈತರಿಗೆ ಲದ್ದಿ ಹುಳು ಅಥವಾ ಸೈನಿಕ ಹುಳು ಗಾಯದ ಮೇಲೆ ಬರೆ ಎಳೆಯುತ್ತಿವೆ!

ಹೌದು, ಜಗಳೂರು ತಾಲೂಕಿನಲ್ಲಿ ಶೇ.70 ರಷ್ಟು ಮಳೆಯ ಕೊರತೆ ಮಧ್ಯೆಯೂ ನೀರಾವರಿ ಭೂ ಪ್ರದೇಶದಲ್ಲಿ ಬೆಳೆದಿರುವ ಮೆಕ್ಕೆಜೋಳಕ್ಕೆ ಸೈನಿಕ ಹುಳು ಅಥವಾ ಅದೇ ಜಾತಿಯ ಕಾರ್ನ್ ಬೋರ್ ಕೀಟ ತೆನೆಯೊಳಗೆ ಸೇರಿಕೊಂಡು ಒಂದೇ ದಿನಕ್ಕೆ ಇಡೀ ಮೆಕ್ಕೆಜೋಳದ ತೆನೆಗಳನ್ನು ಮುಕ್ಕುತ್ತಿರುವುದು ರೈತರಲ್ಲಿ ಆತಂಕ ಸೃಷ್ಟಿಸಿದೆ.

ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದ ರೈತ ಕೆ.ಬಿ.ಕರಿಬಸಪ್ಪ ಎಂಬುವರ ಜಮೀನಿನಲ್ಲಿ ಬೆಳೆಯಲಾಗಿರುವ ಮೆಕ್ಕೆಜೋಳಕ್ಕೆ ಈ ಕೀಟ ಸೇರಿಕೊಂಡಿದ್ದು ನೋಡಲು ತೆನೆಗಳು ಚನ್ನಾಗಿ ಕಾಣುತ್ತಿದ್ದರೂ ಸಿಪ್ಪೆ ಬಿಚ್ಚಿದ ಮೇಲೆ ಕೀಟವು ಸಂಪೂರ್ಣವಾಗಿ ಹಾಲುಗಾಳು ಮೆಕ್ಕೆಜೋಳದ ಕಾಳುಗಳನ್ನು ತಿನ್ನುತ್ತಿರುವುದು ಕಂಡು ಬಂದಿದೆ.

ಸೈನಿಕ ಹುಳು ಅಥವಾ ಲದ್ದಿ ಹುಳು ತೆನೆಯನ್ನು ತಿಂದರೆ ಶೇ.30 ರಿಂದ 40 ರಷ್ಟು ಇಳುವರಿಯನ್ನು ಕಡಿಮೆ ಮಾಡುತ್ತದೆ ಎಂದು ಕೃಷಿ ತಜ್ಞರ ಅಭಿಪ್ರಾಯಪಟ್ಟಿದ್ದಾರೆ.

ಮಾಸಲು ಕಪ್ಪು ಬಣ್ಣದ ಮತಂಗಗಳು ರಾತ್ರಿ ಹೊತ್ತಿನಲ್ಲಿ ಕಾಣಿಸಿಕೊಂಡು ತೆನೆಯೊಳಗೆ ಸೇರಿಕೊಂಡು ಸುಮಾರು ನಾಲ್ಕು ಅಥವಾ ಐದು ದಿನಗಳಲ್ಲಿ ಸಂಫೂರ್ಣ ತೆನೆಯನ್ನು ತಿನ್ನುತ್ತವೆ.

ಹಾಲುಗಾಳು ಮೆಕ್ಕೆಜೋಳಗನ್ನು ತಿನ್ನುವುದರಿಂದ ರೈತರನ್ನು ಚಿಂತೆಗೀಡುಮಾಡಿದೆ. ತೆನೆ ತಿನ್ನುವ ಸೇನಿಕ ಹುಳುವಿನ ಕಾಟಕ್ಕೆ ರೈತರು ಹೈರಾಣಾಗಿ ಹೋಗಿದ್ದಾರೆ.

ಒಂದೆಡೆ ಮಳೆ ಕೊರತೆಯಿಂದ ಬಾಡುತ್ತಿರುವ ಬೆಳೆಗಳಿಗೆ ಈಗ ಕೀಟ ರೋಗಬಾಧೆಯಿಂಂದ ಮತ್ತುಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ.ವಿಶೇಷವಾಗಿ ಲದ್ದಿ ಹುಳುವಿನ ಪೀಡೆಯಿಂದ ಮೆಕ್ಕೆಜೋಳ ಉಳಿಸಿಕೊಳ್ಳುವುದೇ ರೈತರಿಗೆ ಸವಾಲಾಗಿದೆ.

ಪತಂಗ

ತಿಳಿ ತೆಳು ಕಂದು ಮಿಶ್ರಿತ ಹಳದಿ ದೃಢವಾದ ಪತಂಗ.
ಮುಂಭಾಗದ ರೆಕ್ಕೆಗಳು ಆಲಿವ್ ಹಸಿರು ಬಣ್ಣದಿಂದ ತೆಳು ಕಂದು ಬಣ್ಣದಲ್ಲಿರುತ್ತವೆ ಮತ್ತು ಮಧ್ಯದಲ್ಲಿ ಗಾಢ ಕಂದು ವೃತ್ತಾಕಾರದ ಚುಕ್ಕೆ ಇರುತ್ತದೆ.

ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಮೆಕ್ಕೆಜೋಳದ ತೆನೆಗಳನ್ನು ಕೊರೆದು ತಿನ್ನುತ್ತಿರುವ ಸೈನಿಕ ಹುಳುಗಳು.
ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಮೆಕ್ಕೆಜೋಳದ ತೆನೆಗಳನ್ನು ಕೊರೆದು ತಿನ್ನುತ್ತಿರುವ ಸೈನಿಕ ಹುಳುಗಳು.

ಹಿಂಭಾಗದ ರೆಕ್ಕೆಗಳು ಮಸುಕಾದ ಹೊಗೆಯಂತಹ ಬಿಳಿ ಬಣ್ಣದಲ್ಲಿರುತ್ತವೆ ಮತ್ತು ಅಗಲವಾದ ಕಪ್ಪು ಬಣ್ಣದ ಹೊರ ಅಂಚು ಹೊಂದಿರುತ್ತವೆ.

ತೆನೆ ಕೊರಕ/Corn worm

ಇದು ಸಾಮಾನ್ಯವಾಗಿ ಹವಮಾನ ವೈಭವೃತ್ಯವಾದಾಗ ಈ ಕೀಟ ಕಾಣಿಸಿಕೊಳ್ಳುತ್ತದೆ. ಮೊಟ್ಟೆಗಳು ಗೋಳಾಕಾರದ ಆಕಾರ ಮತ್ತು ಕೆನೆ ಬಿಳಿ ಬಣ್ಣ, ಏಕಾಂಗಿಯಾಗಿ ಇಡುತ್ತವೆ.
ಲಾರ್ವಾ – ಹಸಿರು ಬಣ್ಣದಿಂದ ಕಂದು ಬಣ್ಣಕ್ಕೆ ಬಣ್ಣ ವ್ಯತ್ಯಾಸವನ್ನು ತೋರಿಸುತ್ತದೆ.

ನಿಯಂತ್ರಣ ಹೇಗೆ:

ಲದ್ದಿ ಹುಳುಗಳ ನಿಯಂತ್ರಣವನ್ನು ಇಮಾಮೆಕ್ಟಿನ್ ಬೆಂಝೋಯೇಟ್ 0.2 ಗ್ರಾಂ ಅಥವಾ 0.4 ಮಿ.ಲೀ ಕ್ರೋರಾಂ ಟ್ರೆನಿಲಿಪ್ರೋಲ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸುಳಿಯಲ್ಲಿ ಬೀಳುವಂತೆ ಸಿಂಪಡಿಸಬೇಕು.

ಸಿಂಪಡಣೆಯನ್ನು ಸಂಜೆ ವೇಳೆ ಹುಳುಗಳು ಹೊರ ಬರುವ ಸಮಯದಲ್ಲಿ ಮಾಡುವುದರಿಂದ ಯಶಸ್ವಿಯಾಗಿ ನಿಯಂತ್ರಿಸಬಹುದು ಎಂದು ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್ ತಿಳಿಸಿದ್ದಾರೆ.

ಮೇಲ್ನೋಟಕ್ಕೆ ಮೆಕ್ಕೆಜೋಳಕ್ಕೆ ಯಾವುದೇ ಕೀಟ ಬಾಧೆ ಕಾಣುವುದಿಲ್ಲ ಎಂದು ರೈತರು ಮೈಮರೆತರೆ ಕೊನೆಗೆ ತೆನೆಯನ್ನೆಲ್ಲಾ ತಿಂದು ಸರ್ವನಾಶಮಾಡುವಷ್ಟು ಶಕ್ತಿ ಈ ಹುಳಗಳಿಗೆ ಇದೆ.

ಅಕಾಲಿಕ ತಡವಾದ ಮಳೆಯಿಂದ ಅಸಾಮಾನ್ಯವಾಗಿ ಸೈನಿಕ ಹುಳುಗಳು ಉದ್ಭವಾಗಿ ಅದರ ಹಾವಳಿಯು ತಡವಾದ ಬಿತ್ತನೆಯಿಂದ ಈ ಹುಳುಗಳು ಸುಳಿ ತಿಂದು ನಂತರ ನಿಧಾನವಾಗಿ ತೆನೆಯೊಳಗೆ ಸೇರಿಕೊಂಡು ತಿಂದು ಮುಗಿಸುತ್ತಿವೆ ಎಂದು ದಾವಣಗೆರೆ ಕೆವಿಕೆ ಬೇಸಾಯ ತಜ್ಞ ಬಿ.ಓ. ಮಲ್ಲಿಕಾರ್ಜುನ್ ಅನುಭವ ಹಂಚಿಕೊಂಡರು.

ರೈತರು ಔಷಧಿ ಸಿಂಪಣೆಯಿಂದ ಬೇಸತ್ತಿದ್ದಾರೆ. ಹುಳುಗಳ ನಿಯಂತ್ರಣಕ್ಕೆ ಎರಡು ಮೂರು ಬಾರಿ ಔಷಧಿ ಸಿಂಪಡಣೆಯಿಂದ ಹೈರಾಣಾಗಿ ಹೋಗಿದ್ದಾರೆ.

ಮಳೆಯಿಲ್ಲದೇ ಇರುವುದರಿಂದ ಕೃಷಿಯ ಸಹವಾಸವೇ ಬೇಡ ಎನ್ನುವ ನಿರ್ಧಾರಕ್ಕೆ ರೈತರು ಬಂದಿದ್ದಾರೆ.

ಮಳೆಯ ಕೊರತೆ ಮಧ್ಯೆ ಗಾಯದ ಮೇಲೆ ಬರೆ

ಮೆಕ್ಕೆಜೊಳಕ್ಕೆ ಲದ್ದಿ ಹುಳುಗಳ ಕಾಟಕ್ಕೆ ಬೇಸತ್ತು ಹೋಗಿದ್ದೇವೆ. ಔಷಧಿ ಸಿಂಪಡಿಸಿದ ಮೇಲೂ ನಿಯಂತ್ರಣಕ್ಕೆ ಬಂದಿಲ್ಲ. ಜೊತೆಗೆ ಮೆಕ್ಕೆಜೋಳದ ತೆನೆಯ ಒಳಗಡೆ ಔಷಧಿ ಸಿಂಪಡಿಸುವುದು ಸಾಧ್ಯವಿಲ್ಲ. ಈಗಾಗಲೇ ಮಳೆಯಿಂದ ಕಂಗೆಟ್ಟಿರುವ ನಮಗೆ ಈ ಕೀಟಬಾಧೆಯಿಂದ ರೋಸಿ ಹೋಗಿದ್ದೇವೆ ಎಂದು ನೋವು ತೋಡಿಕೊಳ್ಳುತ್ತಾರೆ ಕಟ್ಟಿಗೆಹಳ್ಳಿ ಗ್ರಾಮದ ರೈತ ಕೆ.ಬಿ.ಕರಿಬಸಪ್ಪ.

Share this Article
Leave a comment

Leave a Reply

Your email address will not be published. Required fields are marked *

error: Content is protected !!