ಸುದ್ದಿವಿಜಯ, ಜಗಳೂರು:ಮಣಿಪುರ ಹಿಂಸಾಚಾರ ಹಾಗೂ ಕುಕಿ ಸಮುದಾಯದ ಯುವತಿಯರನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿದ ಘಟನೆ ಖಂಡಿಸಿ ಸೋಮವಾರ ವಿವಿಧ ಪ್ರಗತಿ ಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್ ಮಂಜಾನಂದ ಅವರಿಗೆ ಮನವಿ ಸಲ್ಲಿಸಿದರು.
ಮಣಿಪುರದಲ್ಲಿ ಕಳೆದ ಮೇ 4ರಂದು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಲಾಗಿದೆ. ಜತೆಗೆ ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದ ಈ ದಾರುಣ ಘಟನೆಯನ್ನು ಖಂಡಿಸಿ ತಪ್ಪಿತಸ್ಥರಿಗೆ ತೀವ್ರ ಶಿಕ್ಷೆ ನೀಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಕರುನಾಡ ನವನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಮಹಾಲಿಂಗಪ್ಪ ಎಚ್.ಎಂ ಹೊಳೆ ಮಾತನಾಡಿ, ಮಣಿಪುರದಿಂದ ಹೊರಬಂದ ಹೃದಯ ವಿದ್ರಾವಕ ವಿಡಿಯೋ ಇಡೀ ರಾಷ್ಟ್ರವನ್ನು ಬೆಚ್ಚಿಬೀಳಿಸಿದ್ದು, ಇಂತಹ ಹೀನಾಯ ಕೃತ್ಯಗಳನ್ನು ಮನುಷ್ಯರಾದವರು ಹೇಗೆ ನಡೆಸುತ್ತಾರೆ ಎಂಬುದನ್ನು ಗ್ರಹಿಸಲಾಗದು.
ಇದರಿಂದ ಇಡೀ ನಾಗರಿಕ ಸಮಾಜ ತಲೆತೆಗ್ಗಿಸುವಂತಾಗಿದೆ ಎಂದರು.
ಸ್ವಾತಂತ್ರ್ಯ ಪೂರ್ವದಿಂದ ಈವರೆಗೆ ಮಹಿಳೆಯ ಸಮಾನ ಹಕ್ಕುಗಳಿಗಾಗಿ ಹೋರಾಟ ಮಾಡಿದ್ದೆವು. ಆದರೆ ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದರೂ ಇನ್ನೂ ಮಹಿಳೆಯರಿಗೆ ರಕ್ಷಣೆಯೇ ಸಿಕ್ಕಿಲ್ಲ ಎಂಬುದು ನಮಗೆ ಗೊತ್ತಾಗಿದೆ.
ಬಿಲ್ಕಿಸ್ ಬಾನು ಪ್ರಕರಣವಾದಾಗ, ಹತ್ರಾಸ್ ದಲಿತ ಹೆಣ್ಣು ಮಗಳ ಮೇಲೆ ಅತ್ಯಾಚಾರ ನಡೆದಾಗ, ಮಹಿಳಾ ಕುಸ್ತಿಪಟುಗಳ ದೌರ್ಜನ್ಯ ನಡೆದಾಗ ನಮ್ಮ ದೇಶದ ಪ್ರಧಾನಮಂತ್ರಿ ಮಾತನಾಡಿದ್ದರೆ ಇಂದು ಇಂತಹ ಕೃತ್ಯ ಎಸಗಲು ದುಷ್ಟರು ಯೋಚಿಸುತ್ತಿದ್ದರು ಆಕ್ರೋಶ ವ್ಯಕ್ತಪಡಿಸಿದರು.
ದಸಂಸ ತಾಲೂಕು ಸಂಚಾಲಕ ಮಲೆಮಾಚಿಕೆರೆ ಸತೀಶ್ ಮಾತನಾಡಿ, ಕಳೆದ ಮೂರು ತಿಂಗಳಿಂದಲೂ ಮಣಿಪುರ ಜನಾಂಗೀಯ ದ್ವೇಷದ ದಳ್ಳುರಿಯಲ್ಲಿ ಬೇಯುತ್ತಿದೆ.
ಅಲ್ಲಿನ ಕುಕಿ ಬುಡಕಟ್ಟು ಸಮುದಾಯದ ಮೂವರು ಮಹಿಳೆಯರನ್ನು ಬೆತ್ತಲೆಗೊಳಿಸಿ, ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಅಮಾನವೀಯ. ಇಡೀ ಮನುಕುಲವೇ ತಲೆ ತಗ್ಗಿಸುವ ಕೃತ್ಯವಿದು.
ಅಲ್ಲಿನ ಹೆಣ್ಣುಮಕ್ಕಳಿಗೆ ಆದ ಅಪಮಾನ, ನೋವು, ಮಾನಸಿಕ ಆಘಾತವನ್ನು ಊಹಿಸಲು ಸಾಧ್ಯವಿಲ್ಲ. ಈ ಕೃತ್ಯ ಗುಜರಾತ್, ಕೈಲಾರ್ಂಜೆ, ಹತ್ರಾಸ್ ಮುಂತಾದ ಹೇಯ ಘಟನೆಗಳ ಮುಂದುವರೆದ ಭಾಗವಾಗಿದೆ.
ಮೂರು ತಿಂಗಳಾದರೂ ಆಡಳಿತ ವ್ಯವಸ್ಥೆ ಕ್ರಮಕ್ಕೆ ಮುಂದಾಗದಿರುವುದು ಅತ್ಯಂತ ಅಪಾಯಕಾರಿ ನಡೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಲ್ಲಿನ ಮಹಿಳೆಯರು ನೆಮ್ಮದಿಯಿಂದ ಬದುಕುವ ವ್ಯವಸ್ಥೆ ನಿರ್ಮಾಣ ಮಾಡಬೇಕಿದೆ.
ಮಣಿಪುರ ಕಳೆದೆರಡು ತಿಂಗಳು ಹಿಂಸಾಚಾರದಲ್ಲಿ ಹೊತ್ತಿ ಉರಿಯುತ್ತಿರುವಾಗ ಪ್ರಧಾನಿಯ ಮೌನ ಖಂಡನೀಯ. ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮಧ್ಯ ಪ್ರವೇಶ ಮಾಡಿದೆ.
ಹಾಗಾಗಿ ನಮ್ಮ ಪ್ರಧಾನಿ 80 ದಿನಗಳ ನಂತರ ಮೌನ ಮುರಿದಿದ್ದಾರೆ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ದಸಂಸ ಮುಖಂಡರಾದ ಜಗಜೀವನ್ ರಾಂ, ಮೈಲಾರಸ್ವಾಮಿ, ಪವನ್ ಕುಮಾರ್, ಗ್ರಾಕೂಸ್ ಸಂಚಾಲಕಿ ಪಿ.ಎಸ್ ಸುಧಾ, ಕಲ್ಪನಾ, ಶಿವು, ಧನ್ಯಕುಮಾರ್, ಸೂರ್ಯ ಸೇರಿದಂತೆ ಮತ್ತಿತರಿದ್ದರು.