Suddivijaya| Kannada News |28-04-2023
ಸುದ್ದಿವಿಜಯ ಜಗಳೂರು.ಪಟ್ಟಣದ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ಪ್ರಯುಕ್ತ ವೈಭವದ ರಥೋತ್ಸವ ಶುಕ್ರವಾರ ಜರುಗಿತು.
ಮಧ್ಯಾಹ್ನ 3 ಗಂಟೆಗೆ ಚೌತ ಮನೆ ಪ್ರವೇಶಿಸಿದ ರಥೋತ್ಸವ ಮೆರವಣಿಗೆ ದೇವಿಗೆ ಸೇವಾ ರೂಪದಲ್ಲಿ ಬಂದಂತಹ ಸೀರೆ ಮುಂತಾದ ವಸ್ತುಗಳ ಹರಾಜು ಪ್ರಕ್ರಿಯೆ ನಡೆಯಿತು. ಬಳಿಕ ಧಾರ್ಮಿಕ ಪೂಜಾ ವಿಧಿ ವಿಧಾನದೊಂದಿಗೆ ಜಾತ್ರಾ ಗದ್ದುಗೆಯಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಯಿತು. ತದನಂತರ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಅನ್ನಸಂತರ್ಪಣೆ ನಡೆಯಿತು.
ಸಂಜೆ ದೇವಾಲಯದಿಂದ ಹೊರಟ ದೇವಿಯ ರಥೋತ್ಸವ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಪಂಚವಾದ್ಯ, ಡೊಳ್ಳು ಕುಣಿತ, ಚಂಡಿ ವಾದ್ಯ, ಗೊಂಬೆ ಕುಣಿತ, ನೃತ್ಯ ಮತ್ತು ವೇಷಭೂಷಣಗಳ ಜತೆಗೆ ಮೇಳ ಮುಂತಾದ ಸಾಂಸ್ಕೃತಿಕ ವೈಭವ ಹಾಗೂ ಭಕ್ತರ ಜಯ ಘೋಷದೊಂದಿಗೆ ವಿಜೃಂಬಣೆಯಿಂದ ಸಾಗಿತು.
ಮಾರ್ಗದುದ್ದಕ್ಕೂ ಸಹಸ್ರ ಸಹಸ್ರ ಭಕ್ತಾಧಿಗಳು ರಥದ ಮೇಲೆ ಬಾಳೆ ಹಣ್ಣು, ಉತ್ತುತ್ತಿ, ದವಸ ದಾನ್ಯ ಸೇರಿದಂತೆ ವಿವಿಧ ಹಣ್ಣು ಹಂಪಲುಗಳನ್ನು ಎಸೆದು ಭಕ್ತಿ ಸಮರ್ಪಿಸಿದರು.ಮಾರಿಕಾಂಬಾ ದೇವಸ್ಥಾನದಿಂದ ಅರ್ಧ ಕಿಲೋಮೀಟರ್ ದೂರದ ಜಾತ್ರಾ ಗದ್ದುಗೆ ರಥವನ್ನು ಭಕ್ತಾದಿಗಳು ಸುಮಾರು ಒಂದು ತಾಸುಗಳ ಅವಧಿಯಲ್ಲಿ ಎಳೆದರು. ನಂತರ ಜಾತ್ರಾ ಗದ್ದುಗೆಯಲ್ಲಿ ದೇವಿಯನ್ನು ಪ್ರತಿಷ್ಠಾಪಿಸುವ ಕಾರ್ಯ ನೆರವೇರಿತು.
ರಥ ಬೀದಿಯುದ್ದಕ್ಕೂ ಸಾಮಾಜಿಕ ಕಾರ್ಯಕರ್ತರಿಂದ ಶರಬತ್, ಮಜ್ಜಿಗೆ, ಕುಡಿಯುವ ನೀರು ಸೇರಿದಂತೆ ವಿವಿಧ ಪಾನಿಯಗಳನ್ನು ಭಕ್ತರಿಗೆ ಪೂರೈಕೆ ಮಾಡಲಾಯಿತು. ಪುರುಷರು, ಮಹಿಳೆಯರು, ವೃದ್ಧರು, ಮಕ್ಕಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಕ್ಕಿಕ್ಕಿರಿದ ಜನಸ್ತೋಮ:
ಐದು ವರ್ಷಗಳಿಗೊಮ್ಮೆ ನಡೆಯುವ ಶ್ರೀ ಮಾರಿಕಾಂಬ ದೇವಿಯ ಜಾತ್ರೆ ಹಾಗೂ ರಥೋತ್ಸವಕ್ಕೆ ವಿವಿಧ ಜಿಲ್ಲೆಗಳಿಂದ ಸಹಸ್ರಾರು ಭಕ್ತರು ಆಗಮಿಸಿದ್ದರು.
ನಟರಾಜ ಚಿತ್ರಮಂದಿರ ರಸ್ತೆ, ಚಳ್ಳಕೆರೆ ರಸ್ತೆ, ಮಾರಿಕಾಂಬ ದೇವಸ್ಥಾನ, ಈಶ್ವರ ದೇವಸ್ಥಾನ, ಕೊಟ್ಟೂರಿ ರಸ್ತೆಗಳು ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಎತ್ತ ನೋಡಿ ಕ್ಕಿಕ್ಕಿರಿದ ಜನಸ್ತೋಮ ಕಂಡು ಬಂದಿತು. ರಸ್ತೆಗಳಲ್ಲಿ ಓಡಾಡಲು ಜಾಗವಿಲ್ಲದೆ ಮಗ್ಗುಲಾಗಿ ಓಡಾಡುವಂತಾಯಿತು.ಕಣ್ಣಿಗೆ ಕಾಣುವಷ್ಟು ದೂರು ಜನಸಾಗರ ಕಂಡಿತು.
ರಸ್ತೆ ಜಾಮ್:
ಮೊದಲೇ ರಸ್ತೆಗಳಲ್ಲೆ ಚಿಕ್ಕದಾಗಿರುವುದರಿಂದ ಜನರೇ ಓಡಾಡುವುದೇ ಕಷ್ಟವಿರುವಾಗ ಇನ್ನು ವಾಹನಗಳ ಸ್ಥಿತಿ ಹೇಗಾಗಿರಬಹುದು.
ಪಟ್ಟಣದ ಹಳೆ ಊರು ಎನಿಸಿಕೊಂಡಿರುವ ಹೊರಕೆರೆಯಲ್ಲಿ ರಥೋತ್ಸವ ಜರುಗುವುದರಿಂದ ಇಡೀ ಪಟ್ಟಣದ ಜನರೆಲ್ಲಾ ಇಲ್ಲಿಗೆ ಬರಬೇಕು. ಆದರೆ ನಡೆದುಕೊಂಡ ಬರಲಾಗದೇ ಬಹುತೇಕರು ಕಾರು, ಬೈಕ್ ಗಳಲ್ಲಿ ಆಗಮಿಸಿದ್ದರಿಂದ ವಾಹನಗಳು ಪಾರ್ಕಿಂಗ್ ಮಾಡಲು ವ್ಯವಸ್ಥೆ ಇಲ್ಲದೇ ದಾರಿಯ ಪಕ್ಕದಲ್ಲಿ ಸುಮಾರು ಒಂದು ಕಿ.ಮೀ ದೂರದವರೆಗೂ ನಿಂತಿದ್ದು ಕಂಡು ಬಂದಿತು.