ಸುದ್ದಿವಿಜಯ, ಜಗಳೂರು:ಪಟ್ಟಣದ ಹೊರಕೆರೆಯ ಸರಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಹೆಚ್ಚುವರಿ ಶಿಕ್ಷಕರನ್ನು ನೇಮಿಸುವಂತೆ ಒತ್ತಾಯಿಸಿ ಬುಧವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂಭಾಗ ವಿದ್ಯಾರ್ಥಿಗಳ ಪಾಲಕರು ಪ್ರತಿಭಟನೆ ನಡೆಸಿ ಪ್ರಬಾರ ಬಿಇಒ ಸುರೇಶ್ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ಹೊರಕೆರೆಯಲ್ಲಿರುವ ಸರಕಾರಿ ಶಾಲೆಯೂ ತುಂಬ ಹಳೆಯದಾಗಿದ್ದು, ಪ್ರತಿ ವರ್ಷವೂ ನೂರಾರು ವಿದ್ಯಾರ್ಥಿಗಳು ಓದಿದ್ದಾರೆ. ಪ್ರಸ್ತುತ ಸಾಲಿನಲ್ಲಿ ಸುಮಾರು 125 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ಅನುಸಾರವಾಗಿ ಶಿಕ್ಷಕರ ಸಮಸ್ಯೆ ಎದುರಾಗಿದೆ.
ಇಷ್ಟು ವಿದ್ಯಾರ್ಥಿಗಳಿಗೆ ಮುಖ್ಯ ಶಿಕ್ಷಕ ಸೇರಿದಂತೆ ನಾಲ್ಕು ಜನ ಶಿಕ್ಷಕರು ಮಾತ್ರ ಸೇವೆ ಸಲ್ಲಿಸುತ್ತಿದ್ದಾರೆ. ಇದರಿಂದ ಮಕ್ಕಳ ಕಲಿಕೆ ತೊಂದರೆಯಾಗುತ್ತಿದೆ ಪಾಲಕರು ದೂರಿದರು.
ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕಿ ಇಂದಿರಮ್ಮ ಅವರನ್ನು ದಿಢೀರನೇ ಬೇರೆ ಕಡೆಗೆ ವರ್ಗಾವಣೆ ಮಾಡಿರುವುದರಿಂದ ಮತ್ತಷ್ಟು ಸಮಸ್ಯೆಯಾಗಿದೆ.
ಇಂದಿರಮ್ಮ ಇರುವವರೆಗೂ ವಿದ್ಯಾರ್ಥಿಗಳು ಯಾವುದೇ ತೊಂದರೆ ಇಲ್ಲದೇ ಶಿಕ್ಷಣ ಪಡೆಯುತ್ತಿದ್ದರು, ಆದರೇ ಇದೀಗ ಅವರಿಲ್ಲವೆಂಬ ಕಾರಣಕ್ಕೆ ಮಕ್ಕಳು ಸರಿಯಾಗಿ ಶಾಲೆಗೆ ಹೋಗುತ್ತಿಲ್ಲ.
ಆದ್ದರಿಂದ ಇಂದಿರಮ್ಮ ಅವರನ್ನು ಪುನಃ ಇದೇ ಶಾಲೆಗೆ ಹೆಚ್ಚುವರಿಯಾಗಿ ನೇಮಕ ಮಾಡಬೇಕು ಇಲ್ಲವಾದರೇ ನಮ್ಮ ಮಕ್ಕಳನ್ನು ಶಾಲೆ ಬಿಡಿಸಿ ಬೇರೆ ಕಡೆ ಸೇರಿಸಲಾಗುವುದು ಎಂದು ವಿದ್ಯಾರ್ಥಿಗಳ ಪಾಲಕರು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಪ್ರಬಾರ ಬಿಇಒ ಸುರೇಶ್ ರೆಡ್ಡಿ ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ವರ್ಗಾವಣೆ ಸಾಮಾನ್ಯ, ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮಾಹಿತಿ ಪಡೆದು ಹೆಚ್ಚುವರಿ ಶಿಕ್ಷಕರು ನೇಮಕ ಮಾಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಪ್ರಕಾಶ್, ಪ.ಪಂ ಸದಸ್ಯ ಓಬಳೇಶ್, ಎಸ್.ಡಿ.ಎಂ.ಸಿ ಸದಸ್ಯರಾದ ಕಿರಣ್ ಕುಮಾರ್, ಡ್ರೈವರ್ ರಾಜು. ಮಂಜುಳ, ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಮಲೆ ಮಾಚಿಕೆರೆ ಸತೀಶ್ ಸೇರಿದಂತೆ ಮತ್ತಿತರರು ಇದ್ದರು.