ಸುದ್ದಿವಿಜಯ, ಜಗಳೂರು: ನಂಜುಂಡಪ್ಪ ವರದಿ ಅನುಸಾರ ಅತ್ಯಂತ ಹಿಂದುಳಿದ ಜಗಳೂರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಸಚಿವನಾಗಿ ನಾನು ಒತ್ತು ನೀಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು.
ಸಚಿವರಾದ ನಂತರ ಇದೇ ಮೊದಲ ಬಾರಿಗೆ ಪಟ್ಟಣಕ್ಕೆ ಆಗಮಿಸಿದ ಮಲ್ಲಿಕಾರ್ಜುನ್, ಜನ ಸಂರ್ಪಕ ಕಚೇರಿಯಲ್ಲಿ ಮಂಗಳವಾರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಅಭಿವೃದ್ಧಿ ಪಥದಲ್ಲಿ ಕ್ಷೇತ್ರವನ್ನು ಕೊಂಡೋಯ್ಯುವ ನಿಟ್ಟಿನಲ್ಲಿ ಸಂಪೂರ್ಣ ಒತ್ತು ನೀಡುತ್ತೇನೆ ಎಂದರು.
ಗ್ರಾಮೀಣ ಮತ್ತು ಪಟ್ಟಣಕ್ಕೆ ಬೇಕಾಗುವ ಕುಡಿಯುವ ನೀರು, ರಸ್ತೆ ಮತ್ತು ಮೂಲಸೌಕರ್ಯಗಳಿಗೆ ಒತ್ತು ನೀಡುತ್ತೇನೆ. ಪಟ್ಟಣದಲ್ಲಿ ಇದುವರೆಗೂ ವ್ಯವಸ್ಥಿತವಾದ ಯುಜಿಡಿ ಇಲ್ಲದೇ ಇರುವುದು ನಮ್ಮ ಗಮನಕ್ಕೆ ಬಂದಿದೆ. ಪಟ್ಟಣದ ನೀರು ಕೆರೆ ಹೋಗದಂತೆ ಬೇರ್ಪಡಿಸಿ ವ್ಯವಸ್ಥಿತವಾದ ಯುಜಿಡಿ ಕಾಮಗಾರಿಗೆ ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದರು.

ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಜಗಳೂರು ಸೇರ್ಪಡೆಯಾಗಿದ್ದು ರಾಜ್ಯ ಸರಕಾರದಿಂದ ಸಿಗುವ ಎಲ್ಲ ಸೌಲಭ್ಯಗಳು ರೈತರಿಗೆ ಶೀಘ್ರದಲ್ಲೇ ಲಭ್ಯವಾಗಲಿದೆ. ಬುಧವಾರ ಕೃಷಿ ಸಚಿವ ಚಲುವರಾಯ ಸ್ವಾಮಿ ಅವರು ಸೊಕ್ಕೆ ಗ್ರಾಮಕ್ಕೆ ಆಗಮಿಸುತ್ತಿದ್ದು ಬರ ವೀಕ್ಷಣೆ ಮಾಡಲಿದ್ದಾರೆ ಎಂದರು.
ದೇವೇಂದ್ರಪ್ಪ ಶಾಸಕನಾದ ಮೇಲೆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗುತ್ತವೆ. 57 ಕೆರೆ ನೀರು ತುಂಬಿಸುವ ಯೋಜನೆ ಮತ್ತು ಅಪ್ಪರ್ ಭದ್ರಾ ಯೋಜನೆ ಪೂರ್ಣ ಆದ ನಂತರ ಬರ ಪೀಡಿತ ತಾಲೂಕು ಎಂಬ ಕಳಂಕ ಹೋಗಲಿದೆ.
57 ಕೆರೆ ತುಂಬಿಸುವ ಯೋಜನೆಯನ್ನು ತುರ್ತು ಜಾರಿಗೆ ತರಲು ಶಾಸಕ ದೇವೇಂದ್ರಪ್ಪ ಸಾಕಷ್ಟು ಉತ್ಸುಕರಾಗಿದ್ದಾರೆ ಎಂದರು. ಜಗಳೂರು ಕ್ಷೇತ್ರ ಯಾವಾಗಲೂ ಕಾಂಗ್ರೆಸ್ ಕ್ಷೇತ್ರವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಎಲ್ಲರೂ ಕೆಲಸ ಮಾಡಬೇಕು. ಐದು ಯೋಜನೆಗಳು ಬಂದ ಮೇಲೆ ಬಡವರಿಗೆ ತಲುಪಬೇಕಾದ ಯೋಜನೆಗಳು, ನೇರವಾಗಿ ಜನರಿಗೆ ತಲುಪಿವೆ ಎಂದರು.
‘ಮುಖ್ಯಮಂತ್ರಿ… ಎಸ್.ಎಸ್.ಮಲ್ಲಿಕಾರ್ಜುನ್’
ಶಾಸಕ ದೇವೇಂದ್ರಪ್ಪ ಮಾತನಾಡುವಾಗ ಪಟ್ಟಣಕ್ಕೆ ಆಗಮಿಸಿ ಮುಖ್ಯಮಂತ್ರಿ ಎಸ್.ಎಸ್.ಮಲ್ಲಿಕಾರ್ಜುನ್ ಎಂದು ಬಾಯಿ ತಪ್ಪಿ ಹೇಳಿದಾಗ ಕಾರ್ಯಕರ್ತರು ಮುಂದಿನ ಮುಖ್ಯಮಂತ್ರಿ ಎಂದು ಕೂಗಿದರು.
ಮಾತು ಮುಂದುವರೆಸಿದ ಅವರು, ನನ್ನ ಕ್ಷೇತ್ರ ನಂಜುಂಡಪ್ಪ ವರದಿ ಅನುಸಾರ ಸಾಕಷ್ಟು ಹಿಂದುಳಿದಿದ್ದು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಬೇಕಿದೆ.
ಸಚಿವರು ತಮ್ಮ ಎರಡೂ ಕಣ್ಣುಗಳ ದೃಷ್ಟಿಯನ್ನು ನಮ್ಮ ಕ್ಷೇತ್ರಕ್ಕೆ ಅಭಿವೃದ್ಧಿ ಮೇಲೆ ಬೀಳುವ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಪಟ್ಟಣದಲ್ಲಿ ಯುಜಿಡಿ ಕಾಮಗಾರಿ ಆಗಬೇಕಿದೆ. 57 ಕೆರೆ ಕಾಮಗಾರಿ 4 ಕಿ.ಮೀ. ಬಾಕಿ ಇದ್ದು ಮುಂದಿನ ವರ್ಷದ ಮಳೆಗಾಲಕ್ಕೆ 35 ಕೆರೆಗಳಿಗೆ ನೀರು ಹರಿಯಲಿದೆ ಎಂದರು.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ವರಿಷ್ಟರು ಸೂಚಿಸಿದ ವ್ಯಕ್ತಿಯನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಲು ನಮ್ಮ ಎಲ್ಲ ಕಾರ್ಯಕರ್ತರು ಕಂಕಣಬದ್ಧರಾಗಿ ದುಡಿಯಬೇಕು ಎಂದು ಶಾಸಕರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನಕಾರ್ಯದರ್ಶಿ ಅಸಗೋಡು ಜಯಸಿಂಹ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಂಜಪ್ಪ, ಕೆಪಿಸಿಸಿ ಸದಸ್ಯ, ಲೋಕಸಭಾ ಚುನಾವಣೆ ಆಕಾಂಕ್ಷಿ ಕಲ್ಲೇಶ್‍ರಾಜ್ ಪಟೇಲ್, ಕೆಪಿಸಿಸಿ ಎಸ್‍ಟಿ ಘಟಕದ ರಾಜ್ಯಾಧ್ಯಕ್ಷ ಕೆಪಿ ಪಾಲಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಶೀರ್ ಅಹಮದ್, ಅರಸೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಪಲ್ಲಾಗಟ್ಟೆ ಶೇಖರಪ್ಪ, ವಾಲೀಬಾಲ್ ತಿಮ್ಮಾರೆಡ್ಡಿ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್‍ಗೌಡ್ರು, ಜೀವಣ್ಣ ಸೇರಿದಂತೆ ಅನೇಕರು ಇದ್ದರು.
ತಡವಾಗಿ ಆರಂಭವಾದ ಜನಸ್ಪಂದನಾ ಕಾರ್ಯಕ್ರಮ
ಜನರ ಸಮಸ್ಯೆಗಳಿಗೆ ಪೂರಕವಾಗಿರುವ ಜನಸ್ಪಂದನಾ ಕಾರ್ಯಕ್ರಮ ಸಂಜೆ 6.30ಕ್ಕೆ ಆರಂಭವಾಯಿತು. ಉದ್ಯೋಗ, ಜಮೀನು ವ್ಯಾಜ್ಯ, ವಸತಿ, ವೇತನ ಸಮಸ್ಯೆ ಹೀಗೆ ಸಾಕಷ್ಟು ಸಮಸ್ಯೆಗಳ ಬಗ್ಗೆ ಅರ್ಜಿ ಹಿಡಿದು ಬಂದಿದ್ದ ಸಾರ್ವಜನಿಕರಿಗೆ ಅಷ್ಟಾಗಿ ಸ್ಪಂದನೆ ಸಿಗಲಿಲ್ಲ.
ಕಾದು ಕಾದು ಸುಸ್ತಾದ ಜನರು ಸಚಿವರು ತಡವಾಗಿ ಬಂದಿದ್ದಕ್ಕೆ ಮನೆಗಳಿಗೆ ಹಿಂದಿರುಗಿದರು. ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಸಹ ಮಧ್ಯಾಹ್ನದಿಂದ ಸಂಜೆವರೆಗೆ ಕಾದುಕುಳಿತು ಬಿಸಿಲಿಗೆ ಬಸವಳಿದಿದ್ದರು.
ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಭರ್ಜರಿ ಸ್ವಾಗತ
ಇದೇ ಮೊದಲ ಬಾರಿಗೆ ಸಚಿವರಾದ ಬಳಿಕ ಆಗಮಿಸಿದ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಪಟ್ಟಣದ ಗಾಂಧಿ ವೃತ್ತದಿಂದ ಶಾಸಕರ ಜನ ಸಂಪರ್ಪ ಕಚೇರಿಯವರೆ ಭವ್ಯವಾದ ಮೆರವಣಿಗೆ ಮಾಡಲಾಯಿತು. ಕಾರ್ಯಕರ್ತರು, ಮುಖಂಡರು ಬೃಹತ್ ಹೂವಿನ ಹಾರವನ್ನು ಕ್ರೈನ್ ಸಹಾಯದಿಂದ ಹಾಕಿ ಭರ್ಜರಿ ಸ್ವಾಗತ ಕೋರಿ ಪಟಾಕಿ ಸಿಡಿಸಿ ಜಯಘೋಷ ಕೂಗಿದರು.