ಜೈವಿಕ ಗೊಬ್ಬರಗಳಿಂದ ಬೀಜೋಪಚಾರ ಮಾಡಿ ಬಿತ್ತನೆಗೆ ಕೆವಿಕೆ ವಿಜ್ಞಾನಿಗಳ ಸಲಹೆ

Suddivijaya
Suddivijaya May 29, 2023
Updated 2023/05/29 at 2:49 PM

ಸುದ್ದಿವಿಜಯ,ಜಗಳೂರು: ರೈತರು ಬಿತ್ತನೆ ಮಾಡುವಾಗ ಜೈವಿಕ ಗೊಬ್ಬರಗಳಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡಿದರೆ ಬೆಳೆಗಳ ಬೆಳವಣಿಗೆ ಸಮೃದ್ಧವಾಗಿ ಬರುತ್ತದೆ. ರೋಗ ಬಾಧೆ ಶೇ.90 ನಿಯಂತ್ರಣಕ್ಕೆ ಬರುತ್ತದೆ ಎಂದು ಕೆವಿಕೆ ಬೇಸಾಯ ತಜ್ಞ ಬಿ.ಓ.ಮಲ್ಲಿಕಾರ್ಜುನ ರೈತರಿಗೆ ಸಲಹೆ ನೀಡಿದರು.

ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ದಾವಣಗೆರೆ ಹಾಗೂ ಬಿದರಿಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಯ ಸಂಯೋಗದಲ್ಲಿ ಸೋಮವಾರ ಮುಂಚೂಣಿ ಪ್ರಾತ್ಯಕ್ಷಿಕೆಯ ಮೆಕ್ಕೆಜೋಳದಲ್ಲಿ ಅಂತರ ಬೆಳೆಯಾಗಿ ತೊಗರಿ ಮತ್ತು ಭೀಮಾ ಸೂಪರ್ ತಳಿಯ ಈರುಳ್ಳಿ ಬಿತ್ತನೆಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

  ಜಗಳೂರು ತಾಲೂಕಿನ ಬಿದರಕೆರೆ ಗ್ರಾಮದ ಎಫ್‍ಪಿಒದಲ್ಲಿ ಮೆಕ್ಕೆಜೋಳದಲ್ಲಿ ಅಂತರ ಬೆಳೆಯಾಗಿ ತೊಗರಿ ಮತ್ತು ಭೀಮಾ ಸೂಪರ್ ತಳಿಯ ಈರುಳ್ಳಿ ಬಿತ್ತನೆಯ ತರಬೇತಿ ಮತ್ತು ಉಚಿತ ಬಿತ್ತನೆ ಬೀಜ ವಿತರಣೆ ಮಾಡಲಾಯಿತು.
  ಜಗಳೂರು ತಾಲೂಕಿನ ಬಿದರಕೆರೆ ಗ್ರಾಮದ ಎಫ್‍ಪಿಒದಲ್ಲಿ ಮೆಕ್ಕೆಜೋಳದಲ್ಲಿ ಅಂತರ ಬೆಳೆಯಾಗಿ ತೊಗರಿ ಮತ್ತು ಭೀಮಾ ಸೂಪರ್ ತಳಿಯ ಈರುಳ್ಳಿ ಬಿತ್ತನೆಯ ತರಬೇತಿ ಮತ್ತು ಉಚಿತ ಬಿತ್ತನೆ ಬೀಜ ವಿತರಣೆ ಮಾಡಲಾಯಿತು.

ಮೆಕ್ಕೆಜೋಳವನ್ನು ಏಕ ಬೆಳೆ ಬೆಳೆಯುವುದರ ಬದಲು ಮಳೆಯಾಶ್ರಿತ ಪ್ರದೇಶಗಳಲ್ಲಿ ಅಂತರ ಬೆಳೆಯಾಗಿ ತೊಗರಿಯನ್ನು ಬೆಳೆಯುವುದು ಸೂಕ್ತ. ತೊಗರಿಯಲ್ಲಿ ನವೀನ ತಳಿಯಾದ ಟಿಎಸ್ 3 ಆರ್, ಮಧ್ಯಮ ಅವಧಿ ತಳಿಯನ್ನು ಬಿತ್ತನೆ ಮಾಡುವ ಸಂದರ್ಭದಲ್ಲಿ ರೈತರು ಜೈವಿಕ ಗೊಬ್ಬರಗಳಾದ ಅಜಟೋಬ್ಯಾಕ್ಟರ್ 500 ಗ್ರಾಂ ಪ್ರತೀ ಎಕರೆ ಮೆಕ್ಕೆಜೋಳ ಬೀಜಕ್ಕೆ ಹಾಗೂ ರೈಸೋಬಿಯಂ,

ರಂಜಕ ಕರಗಿಸುವ ಗೊಬ್ಬರ 500 ಗ್ರಾಂ ಪ್ರತಿ ಎಕರೆ ತೊಗರಿ ಬೀಜಕ್ಕೆ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದರಿಂದ ಸಾರಜನಕ ಸ್ಥಿರೀಕರಣ ವಾಗುತ್ತದೆ. ಶಿಫಾರಸ್ಸು ಮಾಡಿದ ಸಾರಜನಕ ಗೊಬ್ಬರವನ್ನು ಶೇಕಡ 20ರಷ್ಟು ಕಡಿಮೆ ಮಾಡಬಹುದು ಎಂದರು.

ಕೆವಿಕೆ ತೋಟಗಾರಿಕೆ ತಜ್ಞ ಎಂ.ಜಿ.ಬಸವನಗೌಡ ಮಾತನಾಡಿ, ಜಗಳೂರು ತಾಲೂಕಿನಲ್ಲಿ ಈರುಳ್ಳಿ ಬಿತ್ತನೆಗೆ ಪೂರಕವಾದ ವಾತಾವರಣವಿದೆ. ಕಳೆದ ವರ್ಷ ಅತಿಯಾದ ಮಳೆಯಿಂದ ಈರುಳ್ಳಿ ಬಿತ್ತನೆ ಮಾಡಿದ ರೈತರು ನಷ್ಟ ಅನುಭವಿಸಿದರು. ಆದರೆ ಬಾಗಲಕೋಟೆ ವಿವಿಯಿಂದ ಸಂಶೋಧನೆ ಮಾಡದ ಬೀಮಾ ಸೂಪರ್ ತಳಿಯ ಈರುಳ್ಳಿ ಬಿತ್ತನೆ ಮಾಡಿದ್ದರಿಂದ ಕೊಳೆ ರೋಗ ಮತ್ತು ಎಲೆ ಮಚ್ಚೆರೋಗ ನಿಯಂತ್ರಣದಲ್ಲಿತ್ತು. ರೈತರು ಭೀಮಾ ಸೂಪರ್ ತಳಿಯ ಈರುಳ್ಳಿ ತಳಿಗಳನ್ನು ಬಿತ್ತನೆ ಮಾಡಿದರೆ ಸೂಕ್ತ. ಬೀಜೋಪಚಾರವನ್ನು ಕಡ್ಡಾಯವಾಗಿ ಮಾಡಿದರೆ ರೋಗ ನಿಯಂತ್ರಣಕ್ಕೆ ಬರುತ್ತದೆ ಎಂದರು.

ಪ್ರಾತ್ಯಕ್ಷಿಕೆಯ ರೈತರಿಗೆ ತೊಗರಿ ಮತ್ತು ಈರುಳ್ಳಿ ಬೀಜಗಳನ್ನು ಹಾಗೂ ಜೈವಿಕ ಗೊಬ್ಬರವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಕೃಷಿ ಅಧಿಕಾರಿ ಬೀರಪ್ಪ, ಜಿಲ್ಲಾ ಸಂಯೋಜಕರಾದ ಆಕಾಶ್ .ಎನ್.ಆರ್, ಕಂಪನಿಯ ಅಧ್ಯಕ್ಷರಾದ ಎಂ.ಎಚ್.ಮಂಜುನಾಥ, ನಿರ್ದೇಶಕರಾದ ಕೆ.ಕೃಷ್ಣಮೂರ್ತಿ, ಅರಿಶಿಣಗುಂಡಿ ನಾಗರಾಜ್, ಗುತ್ತಿದುರ್ಗ ಬಸವನಗೌಡ, ಪ್ರಗತಿಪರ ರೈತ ಎನ್.ಎಸ್.ಸೋಮನಗೌಡ, ಎಚ್.ಎಸ್.ಆದರ್ಶ, ಎಂ.ಪಿ.ನವೀನ್ ಸೇರಿದಂತೆ ಕಲ್ಲೇದೇವರಪುರ ಮತ್ತು ಕಟ್ಟಿಗೆಹಳ್ಳಿ ಗ್ರಾಮದ ಪ್ರಗತಿಪರ ರೈತರು ಭಾಗವಹಿಸಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!