ಸುದ್ದಿವಿಜಯ, ಜಗಳೂರು: ದಾವಣಗೆರೆ ಜಿಲ್ಲೆಯಲ್ಲೇ ಅತ್ಯಂತ ಹಿಂದುಳಿದ ಜಗಳೂರು ತಾಲೂಕನ್ನು ಸಂಪೂರ್ಣ ಬರ ಪೀಡಿತ ತಾಲೂಕು ಎಂದು ಸರಕಾರ ಘೊಷಣೆ ಮಾಡಿದ್ದು ಅಧಿಕಾರಿಗಳು ಜಾಗೃತರಾಗಿ ಜನರ ಸಂಕಷ್ಟಗಳಿಗೆ ನೆರವಾಗಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದೆ ಸಮೀಕ್ಷೆಯಲ್ಲಿ ಜಗಳೂರು ಮಧ್ಯಮ ಬರಪಟ್ಟಿಯಲ್ಲಿ ಸೇರಿದೆ ಎಂದು ವಿರೋಧಿಸಿ ರೈತರಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು, ಇದನ್ನು ಗಮನದಲ್ಲಿಟ್ಟುಕೊಂಡು ಕಂದಾಯ ಇಲಾಖೆ, ಕೃಷಿ ಹಾಗೂ ತೋಟಗಾರಿಕೆ ಜಂಟಿ ಸಮೀಕ್ಷೆ ಮಾಡಿಸಿ ಸರಕಾರಕ್ಕೆ ವರದಿ ಕಳಿಸಲಾಗಿತ್ತು.
ಬರಪೀಡಿತ ಪಟ್ಟಿಯಲ್ಲಿ ಜಗಳೂರು ತಾಲೂಕನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು ರೈತರಿಗೆ ಉಪಯುಕ್ತ ಕಾರ್ಯಕ್ರಮಗಳನ್ನು ನೀಡಲಿದೆ. ಬರಪೀಡಿತ ಘೋಷಣೆಯಿಂದ ರೈತಾಪಿ, ಕೂಲಿಕಾರ್ಮಿಕ ವರ್ಗಕ್ಕೆ ತುಂಬ ಸಹಕಾರಿಯಾಗುತ್ತದೆ ಎಂದರು.
ತಾಲೂಕು ಅನೇಕ ವರ್ಷಗಳಿಂದಲೂ ಬರಪೀಡಿತಕ್ಕೆ ತುತ್ತಾಗುತ್ತಾ ಬಂದಿದೆ. ಪ್ರಸಕ್ತ ಸಾಲಿನಲ್ಲಿಯೂ ಮುಂಗಾರು ಮಳೆಯ ವೈಫಲ್ಯದಿಂದ ಬೆಳೆಗಳು ಸಂಪೂರ್ಣ ಒಣಗಿ ಹಾಳಾಗಿವೆ. ವಾಡಿಕೆಗಿಂತ ಶೇ.73 ರಷ್ಟು ಮಳೆ ಕೊರತೆಯಾಗಿದೆ. ಜಗಳೂರು ಪಟ್ಟಣದ ಪತ್ರಿಕಾಭವನದಲ್ಲಿ ಶಾಸಕ ಬಿ.ದೇವೇಂದ್ರಪ್ಪ ಮತ್ತು ತಹಶೀಲ್ದಾರ್ ಅರುಣ್ ಕಾರಗಿ ಸುದ್ದಿಗೋಷ್ಠಿ ನಡೆಸಿದರು.
ಈ ಬರಗಾಲ ಘೋಷಣೆಯಿಂದ ರೈತರ ಬೆಳೆಗಳಿಗೆ ಪರಿಹಾರ, ನರೇಗಾ ಯೋಜನೆಯಡಿ ಕೂಲಿಕಾರರಿಗೆ ಮಾನವ ದಿನಗಳು ಏರಿಕೆ ಮಾಡಲಿದೆ. ಅಗತ್ಯವಿದ್ದರೆ ಗೋಶಾಲೆ, ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದರು.
ಬರಪೀಡಿತ ಪಟ್ಟಿಗೆ ಸೇರಿಸಲು ಒತ್ತಾಯ, ನೆನಗುದಿಗೆ ಬಿದ್ದಿರುವ ಭದ್ರಾ ಮೇಲ್ದಂಡೆ ಯೋಜನೆಗೆ ಚುರುಕು ನೀಡಬೇಕು ಎಂದು ಮಾಜಿ ಶಾಸಕ ಎಸ್.ವಿ ರಾಮಚಂದ್ರ ಒತ್ತಾಯಿಸಿದ್ದರು. ಅದರಂತೆ ಜಗಳೂರು ಸೇರ್ಪಡೆಯಾಗಿದ್ದು ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯ ಬಗ್ಗೆ ಗಮನಹಸಿರಿ ಆದಷ್ಟು ಬೇಗ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಹಿಂಗಾರು ಮಳೆಗೆ ಕಡಲೆ,ಬಿಳಿಜೋಳ, ಸೂರ್ಯಕಾಂತಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲು ರೈತರು ಸಿದ್ದರಾಗಿದ್ದಾರೆ. ಆದ್ದರಿಂದ ರೈತರಿಗೆ ಬಿತ್ತನೆ ಬೀಜ, ಗೊಬ್ಬರದ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಿ ದಾಸ್ತಾನು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಅರುಣ್ ಕಾರಗಿ, ಕೃಷಿ ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್, ತೋಟಗಾರಿಕಾ ಸಹಾಯಕ ನಿರ್ದೇಶಕ ತೋಟದಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್, ಕೆಪಿಸಿಸಿ ಸದಸ್ಯ ಕಲ್ಲೇಶ್‍ರಾಜ್ ಪಟೇಲ್, ಮುಖಂಡ ಅನುಪ್ ಸೇರಿದಂತೆ ಮತ್ತಿತರಿದ್ದರು.