ಸುದ್ದಿವಿಜಯ, ಜಗಳೂರು: ಕೆಲಸ ಮಾಡದ ಅಧಿಕಾರಿಗಳಿಗೆ ಕೆಡಿಪಿ ಸಭೆಯಲ್ಲಿ ಬೈದದ್ದು ಆಯ್ತು, ನೇರವಾಗಿ ಬುದ್ದಿ ಹೇಳಿದ್ದು ಆಯ್ತು, ಜಡವಾಗಿರುವ ಅಧಿಕಾರಿಗಳಿಗೆ ಸಿಟ್ಟಿನಿಂದ ಹೇಳುತ್ತೇನೆ.
ಅದಕ್ಕೆ ಕೆಲವರು ನನ್ನನ್ನು ಸಿಟ್ಟಿನ ಶಾಸಕ, ರೌಡಿ ಶಾಸಕ ಎನ್ನುತ್ತಾರೆ. ನಾನೇನು ಅವರಿಂದ ನಮ್ಮ ಮನೆಯ ಕೆಲಸ ಮಾಡಿಸಿಕೊಳ್ಳುತ್ತೇನಾ ಎಂದು ಶಾಸಕ ಬಿ.ದೇವೇಂದ್ರಪ್ಪ ಅಧಿಕಾರಿಗಳಿಗೆ, ಟೀಕಿಸುವವರಿಗೆ ಪ್ರಶ್ನಿಸಿದರು.
ತಾಲೂಕಿನ ದೇವಿಕೆರೆ ಗ್ರಾಪಂ ವ್ಯಾಪ್ತಿಗೆ ಒಳಪಡುವ ಹತ್ತು ಹಳ್ಳಿಗಳ ಜನರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಮುಖಂಡ ಬಸವಾಪುರ ರವಿಚಂದ್ರ ನೇತೃತ್ವದಲ್ಲಿ ಸೋಮವಾರ ದೇವಿಕೆರೆ ಗ್ರಾಮದಲ್ಲಿ ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ಸನ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನನ್ನನ್ನು ಕೆಲವರು ಸಿಟ್ಟಿನ ಶಾಸಕ ಎನ್ನುತ್ತಾರೆ ಆದರೆ ನನ್ನ ಸ್ವಭಾವವೇ ಹಾಗೆ. ಕೆಲಸ ಮಾಡಿಕೊಡಿ ಎಂದು ಸಾರ್ವಜನಿಕರು ಅಧಿಕಾರಿಗಳ ಬಳಿ ಹೋಗುತ್ತಾರೆ.
ಕೆಲ ಅಧಿಕಾರಿಗಳು ಕೆಲಸ ಮಾಡಿಕೊಡದೇ ಸತಾಯಿಸುತ್ತಾರೆ ಆಗ ಸಾರ್ವಜನಿಕರು ನನ್ನ ಬಳಿ ಬಂದು ಕೆಲಸ ಮಾಡಿಸಿಕೊಡಿಸಿ ಕೊಡಿ ಎಂದು ಕೇಳುತ್ತಾರೆ. ಅಂತಹ ಅಧಿಕಾರಿಗಳಿಗೆ ಸಿಟ್ಟಿನಿಂದ ಹೇಳುತ್ತೇನೆ. ಜವಾಬ್ದಾರಿಯುತವಾಗಿ ಕೆಲಸ ಮಾಡಿ ಎಂದು ಹೇಳುತ್ತೇನೆ.
ಅದಕ್ಕೆ ಸಿಟ್ಟಿನ ಶಾಸಕ ಎಂದು ಅಪಪ್ರಚಾರ ಮಾಡಿದರೆ ನಾನೇನು ಮಾಡಲಿ. ನಾನೇನು ನನ್ನ ಮನೆಯ ಕೆಲಸ ಮಾಡಲು ಹೇಳುತ್ತೇನಾ. ಕೆಲ ಪಿಡಿಒಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸಂಬಳ ತೆಗೆದುಕೊಳ್ಳುವ ಅವರಿಗೆ ಸಾರ್ವಜನಿಕರ ಕೆಲಸ ಮಾಡಿ ಎಂದು ಹೇಳುವುದು ತಪ್ಪಾ ಎಂದು ಪ್ರಶ್ನಿಸಿದರು.
ರವಿಚಂದ್ರ ನನ್ನನ್ನು ಕಾಂಗ್ರೆಸ್ ಗೆ ಆಹ್ವಾನಿಸಿದ್ದರು:
ನಾನು ಜೆಡಿಎಸ್ ಪಕ್ಷದಲ್ಲಿದ್ದಾಗ ರವಿಚಂದ್ರ ಅವರೇ ನನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದ್ದರು. ನನ್ನನ್ನು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಬಳಿ ಕರೆದೊಯ್ದು ಪರಿಚಯ ಮಾಡಿಸಿದ್ದರು.
ಚುನಾವಣೆಯಲ್ಲಿ ಗೆದ್ದಿದ್ದೇನೆ. ಮತಹಾಕಿದ ಜನರ ಋಣ ತೀರಿಸುವುದು ನನ್ನ ಹೆಗಲ ಮೇಲಿದೆ. ಜನರ ಸಂಕಷ್ಟಕ್ಕೆ ಮಿಡಿಯುವ ಹೃದಯ ನನ್ನದು ಎಂದು ಹೇಳಿದರು.
ನಾನು ಯಾವುದೇ ತಪ್ಪು ಮಾಡಿಲ್ಲ. ತಪ್ಪೇ ಮಾಡದೇ ಇರುವಾಗ ಹೆದರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
‘ಕಾಲಿಗೆ ಆದ ನೋವು ಸರಿ ದಾರಿಯನ್ನು ತೋರಿಸುತ್ತದೆ. ಮನಸ್ಸಿಗೆ ಆದ ನೋವು ಹೇಗೆ ಬದುಕಬೇಕು ಎಂಬುದನ್ನು ತೋರಿಸುತ್ತದೆ’. ನಾನು ಸಾಕಷ್ಟು ನೋವು ಅನುಭವಿಸಿದ್ದೇನೆ.
ಸುಕ್ಷೇತ್ರವಾದ ಕೊಡದಗುಡ್ಡದಲ್ಲಿ ಹೈಟೆಕ್ ಶೌಚಾಲಯ, ಕಲ್ಯಾಣ ಮಂಟಪ, ಆಸ್ಪತ್ರೆ, ಕಾಲೇಜು, ಸಾರಿಗೆ ವ್ಯವಸ್ಥೆಗೆ ಬೇಡಿಕೆ ಇಟ್ಟಿದ್ದಾರೆ ಆದಷ್ಟು ಬೇಗ ನೆರವೇರಿಸುತ್ತೇನೆ ಎಂದರು.
ಕೆಪಿಸಿಸಿ ಸದಸ್ಯ ಕಲ್ಲೇಶ್‍ರಾಜ್ ಪಟೇಲ್ ಮಾತನಾಡಿ, ನಮ್ಮ ಸರಕಾರ ಅಧಿಕಾರಕ್ಕೆ ಬಂದು 5 ತಿಂಗಳಾಗುತ್ತಾ ಬಂದಿದೆ. ಐದು ಗ್ಯಾರಂಟಿಗಳ ಮೂಲಕ ನಾವು ಕೊಟ್ಟ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಶಾಸಕ ದೇವೇಂದ್ರಪ್ಪ ನುಡಿದಂತೆ ನಡೆಯುತ್ತಿದ್ದಾರೆ ಎಂದರು.
ಬಸವಾಪುರ ರವಿಚಂದ್ರ ಮಾತನಾಡಿ, 2018 ರಿಂದ 5 ವರ್ಷಗಳ ಕಾಲ ನಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ವಿಎಸ್‍ಎಸ್‍ಎನ್ ಸೂಪರ್ ಸೀಟ್ ಆಗಿತ್ತು.
ಕೊಟ್ಟವರಿಗೆ ಸಾಲ ಕೊಟ್ಟು ವಿಎಸ್‍ಎಸ್‍ಎನ್ ಅವನತಿಗೆ ತಂದಿದ್ದಾರೆ. ಐತಿಹಾಸಿಕ ಕ್ಷೇತ್ರವಾದ ಕೊಡದಗುಡ್ಡದ ವೀರಭದ್ರೇಶ್ವರ ಸನ್ನಿಧಾನದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಬೇಕು ಎಂದು ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು.
ಕಾಂಗ್ರೆಸ್ ಎಸ್‍ಟಿ ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ಈ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ ಏನು? ಹಿಂದುತ್ವದ ಹೆಸರಿನಲ್ಲಿ ಹತ್ತು ವರ್ಷ ಅಧಿಕಾರ ಅನುಭವಿಸಿದ ಅವರು ಶ್ರಮಿಕರು, ರೈತರಿಗೆ ಬೆಲೆ ಏರಿಕೆ ಕೊಡುಗೆ ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾರ್ಯಕ್ರಮಕ್ಕೂ ಮುಂಚೆ ಶಾಸಕ ಬಿ.ದೇವೇಂದ್ರಪ್ಪ ಮತ್ತು ಮುಖಂಡರನ್ನು ಬೃಹತ್ ಸೇಬಿನ ಹಾರ ಹಾಕಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಈ ವೇಳೆ ಕಾಂಗ್ರೆಸ್ ಮುಖಂಡ ಬಿ.ಮಹೇಶ್ವರಪ್ಪ, ಪಲ್ಲಾಗಟ್ಟೆ ಶೇಖರಪ್ಪ, ಪಪಂ ಸದಸ್ಯ ರಮೇಶ್‍ರೆಡ್ಡಿ, ಕಲ್ಲೇದೇವರಪುರ ಶರಣಪ್ಪ, ಕೊಡದಗುಡ್ಡ ದೇವಸ್ಥಾನ ಸಮಿತಿ ಕಾರ್ಯದರ್ಶಿ ರುದ್ರಸ್ವಾಮಿ, ಯುವ ಮುಖಂಡ ಪ್ರಕಾಶ್, ಅನೂಪ್ ರೆಡ್ಡಿ, ಗಿರೀಶ್,
ಕೊರಟಗೆರೆ ಗುರುಸಿದ್ದನಗೌಡ, ಜಿಪಂ ಮಾಜಿ ಸದಸ್ಯ, ಎಸ್.ಕೆ.ರಾಮರೆಡ್ಡಿ, ಪ್ರಕಾಶ್ ರೆಡ್ಡಿ, ಸಣ್ಣ ಸೂರಯ್ಯ, ಸಾವಯವ ಕೃಷಿಕ ಗುರುಸಿದ್ದಪ್ಪ, ಮೆದಗಿನ ಕೆರೆ ವೀರಣ್ಣ, ಗುರುಸ್ವಾಮಿ. ಸೇರಿದಂತೆ ಅನೇಕರು ಉಪಸ್ಥಿತಿರಿದ್ದರು.