ಸುದ್ದಿವಿಜಯ, ಜಗಳೂರು: ಇಂದಿಗೆ ಸರಿಯಾಗಿ (ಮೇ.13,2023) ಚಿಕ್ಕಮ್ಮನಹಟ್ಟಿ ಗ್ರಾಮದ ಬಿ.ದೇವೇಂದ್ರಪ್ಪ ಅವರು ಶಾಸಕರಾಗಿ ಬರೋಬ್ಬರಿ ಒಂದು ವರ್ಷ ಪೂರೈಸಿದ್ದಾರೆ.
ಸರಿಯಾಗಿ ಒಂದು ವರ್ಷದ ಹಿಂದೆ ಇದೇ ಸಮಯಕ್ಕೆ ಜಗಳೂರು ಪಟ್ಟಣದಲ್ಲಿ ಅದ್ಧೂರಿ ಮೆರವಣಿಗೆ ಸಾಗಿತ್ತು.
ಹಿಂದೆ ಶಾಸಕರಾಗಿದ್ದ ಎಸ್.ವಿ.ರಾಮಚಂದ್ರ ಮತ್ತು ಪಕ್ಷೇತರ ಅಭ್ಯರ್ಥಿ, ಮಾಜಿ ಶಾಸಕ ಎಚ್.ಪಿ.ರಾಜೇಶ್ ಅವರನ್ನು ಚುನಾವಣೆಯಲ್ಲಿ ಸೋಲಿಸಿ ಶಾಸಕರಾದ ದೇವೇಂದ್ರಪ್ಪ ಅವರು ಒಂದು ವರ್ಷ ಯಶಸ್ವಿಯಾಗಿ ಮುಗಿಸಿದ್ದಾರೆ. ಜಗಳೂರು ಕ್ಷೇತ್ರ ಸ್ವಾತಂತ್ರ್ಯ ಬಂದು 76 ವರ್ಷಗಳಲ್ಲಿ 60 ವರ್ಷ ಬರಗಾಲವನ್ನೇ ಎದುರಿಸಿದೆ.
ಇಲ್ಲಿನ ಜನ ಬುದ್ಧಿವಂತರು. ವಿಶಾಲ ಹೃದಯದವರು. ಕಷ್ಟ ಜೀವಿಗಳು. ತಾವು ಪಡುವ ಕಷ್ಟ ತಮ್ಮ ಮಕ್ಕಳು ಪಡಬಾರದು ಎಂಬ ಕಾರಣಕ್ಕೆ ಹೊಟ್ಟೆ ಬಟ್ಟೆ ಕಟ್ಟಿ ವಿದ್ಯಾಭ್ಯಾಸ ಮಾಡಿಸಿ ಗುಣಮಟ್ಟದ ಜೀವನ ನಡೆಸಲಿ ಎಂಬ ಆಶಯ ಹೊಂದಿದ್ದಾರೆ.
ಉದ್ಯೋಗ ಇಲ್ಲದೇ ಕಂಗಾಲಾಗಿರುವ ಸಾಕಷ್ಟು ಜನ ಕೃಷಿ, ಹೈನುಗಾರಿಕೆ ವೃತ್ತಿಯಲ್ಲಿ ತೊಡಗಿದ್ದಾರೆ. ಇನ್ನೂ ಕೆಲವರು ಸಣ್ಣ ಮೊತ್ತದ ಸಂಬಳಕ್ಕೆ ಹೊರ ರಾಜ್ಯ, ಮೆಟ್ರೋ ಸಿಟಿಗಳಲ್ಲಿ ಜೀವನ ನಡೆಸುತ್ತಿದ್ದಾರೆ. ರೈತರ ಬದುಕು ದುರ್ಬರವಾಗಿದೆ. ಇಲ್ಲಿನ ಬಹು ಭಾಗ ಗ್ರಾಮೀಣ ಜನತೆ ಗುಳೆ ಹೋಗಿ ಜೀವನ ನಡೆಸುತ್ತಿದ್ದಾರೆ.
ಸಾಲು ಸಾಲು ಸವಾಲು:
2018ರಲ್ಲಿ ಜಗಳೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ದಿನದಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಜಗಳೂರು ಕ್ಷೇತ್ರದ 57 ಕರೆ ತುಂಬಿಸುವ ಯೋಜನೆಗೆ ಬಜೆಟ್ ನಲ್ಲಿ ಹಣ ಮೀಸಲಿಡುವುದಾಗಿ ಘೋಷಣೆ ಮಾಡಿ ನುಡಿದಂತೆ ನಡೆದರು. ಆದರೆ ಏಳು ವರ್ಷಗಳಾದರೂ ಕಾಮಗಾರಿ ಪೂರ್ಣಗೊಂಡಿಲ್ಲ.
ಭದ್ರಾ ಮೇಲ್ದಂಡೆ ಯೋಜನೆ ತುರ್ತು ಅಗತ್ಯವಿದ್ದು ಯೋಜನೆ ಶಾಸಕರ ಅವಧಿಯಲ್ಲಿ ಪೂರ್ಣಗೊಂಡರೆ ಸಮಗ್ರ ನೀರಾವರಿಯಾಗಿ ಇಲ್ಲಿನ ರೈತರಿಗೆ ತುಸು ನೆಮ್ಮದಿ ತಂದೀತು. ಸಮಗ್ರ ನೀರಾವರಿಗೆ ಜಗಳೂರು ಬಂದ್ ಮಾಡಿ ಜನ ಬೆಂಬಲವನ್ನು ಸೂಚಿಸಿದ್ದಾರೆ.
448 ಕೋಟಿ ರೂ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಳೆದ ಬಿಜೆಪಿ ಸರಕಾರ ಜಗಳೂರು ಕ್ಷೇತ್ರದ ಜನತೆಗೆ ಕುಡಿಯುವ ನೀರಿನ್ನು ಒದಗಿಸುವ ಯೋಜನೆಗೆ ಹಸಿರು ನಿಶಾನೆ ತೋರಿಸಿ ಉದ್ಘಾಟನೆಯೂ ಆಗಿತ್ತು. ಆದರೆ ಇದುವರೆಗೂ ಯೋಜನೆ ಏನಾಗಿದೆ ಎಂಬುದು ಗೊತ್ತಾಗಿಲ್ಲ.ಜಗಳೂರು ಪಟ್ಟಣದಲ್ಲಿ ಸ್ವಾತಂತ್ರ್ಯ ಬಂದು 76 ವರ್ಷಗಳಾದರೂ ಇದುವರೆಗೂ ಯುಜಿಡಿ (ಒಳಚರಂಡಿ)ಆಗಿಲ್ಲ. ಗಲೀಜು ನೀರು ರಸ್ತೆಗೆ ಹರಿದು ರೋಗಕ್ಕೆ ಕಾರಣವಾಗಿದೆ.
ಆಸ್ಪತ್ರೆಯ ದುರಸ್ತಿ, ಪಟ್ಟಣದ ರಸ್ತೆ ಅಗಲೀಕರಣ, ಭ್ರಷ್ಟಾಚಾರ ರಹಿತ ಆಡಳಿತ, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು, ಗ್ರಾಮೀಣ ಶಾಲೆಗಳಲ್ಲಿ ಮೂಲಸೌಕರ್ಯ ಸೇರಿದಂತೆ ಸುಸ್ಥಿರ ಅಭಿವೃದ್ಧಿಗೆ ಇನ್ನೂ ಅನೇಕ ದೂರದೃಷ್ಟಿ ಯೋಜನೆಗಳನ್ನು ಹಮ್ಮಿಕೊಂಡು ಉಳಿದ ನಾಲ್ಕು ವರ್ಷಗಳಲ್ಲಿ ಪೂರ್ಣಗೊಳಿಸುವ ಸಾಲು ಸಾಲು ಸವಾಲುಗಳಿವೆ ಶಾಸಕರಾದ ಬಿ.ದೇವೇಂದ್ರಪ್ಪ ಅವರ ಹೆಗಲ ಮೇಲಿದೆ.
ಇನ್ನು ಅವರು ಶಾಸಕರಾದ ಮೇಲೆ 5 ಗ್ಯಾರಂಟಿಗಳ ಮಧ್ಯೆಯೂ ಒಂದು ವರ್ಷದಲ್ಲಿ 150 ಕೋಟಿ ರೂಗಿಂತ ಅಧಿಕ ಕಾಮಗಾರಿಗಳು ಪೂರ್ಣಗೊಂಡಿವೆ.
ಉದಾಹರಣೆಗೆ ಶಾಸಕರ ಜನ ಸಂಪರ್ಕ ಕಚೇರಿ, ಸುಸಜ್ಜಿತ ಗ್ರಂಥಾಲಯ, ವಾಚನಾಲಯ, ರಸ್ತೆಗಳ ಅಭಿವೃದ್ಧಿ, ಪ್ರತಿ ತಿಂಗಳು ಮೂರನೇ ಭಾನುವಾರ ಸ್ವಚ್ಚ ಜಗಳೂರು ಮಾಡಲು ಪೌರಕಾರ್ಮಿಕರೊಂದಿಗೆ ಕಸಗುಡಿಸುವ ಕಾರ್ಯ ಮಾಡುತ್ತಿದ್ದಾರೆ.
ಜಗಳೂರು ಕ್ಷೇತ್ರದಲ್ಲಿ ಕೈಗಾರಿಕೆಗಳಿಲ್ಲ. ಮಹಿಳೆಯರಿಗೆ ಗಾರ್ಮೆಂಟ್ಸ್ ಗಳಿಲ್ಲ. ದೂರ ದೃಷ್ಟಿಯ ಯೋಜನೆಗಳನ್ನು ಜಾರಿಗೆ ತಂದು ಉಳಿದ ನಾಲ್ಕು ವರ್ಷಗಳಲ್ಲಿ ಜಗಳೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಯಾಗಲಿ ಎಂಬುದು ಮತದಾರರ ಆಶಯವಾಗಿದೆ.