ಸುದ್ದಿವಿಜಯ, ಜಗಳೂರು: ನಾನು ಸಹ ಹಾಸ್ಟೆಲ್‍ನಲ್ಲೇ ಓದಿದವನು. ಆಗ ಗೋಣಿ ಚೀಲ ಹೊದ್ದು ಮಲಗಿದ್ದೇನೆ. ಆದರೆ ನಿಮಗೆ ಸರಕಾರ ಪಂಚತಾರ ಹೋಟೆಲ್ ಮಾದರಿಯ ಹಾಸ್ಟೆಲ್ ವ್ಯವಸ್ಥೆ ಮಾಡಿದೆ. ತಂದೆ ತಾಯಿಗೆ ಹೆಸರು ತರುವಂತೆ ಓದಿ ಎಂದು ಶಾಸಕ ಬಿ.ದೇವೇಂದ್ರಪ್ಪ ವಿದ್ಯಾರ್ಥಿನಿಯರಿಗೆ ಬುದ್ಧಿಮಾತು ಹೇಳಿದರು.
ಪಟ್ಟಣದ ಓಂಕಾರೇಶ್ವರ ಬಡವಾವಣೆಯಲ್ಲಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕೀಯರ ವಿದ್ಯಾರ್ಥಿನಿಲಯಕ್ಕೆ ಬುಧವಾರ ದಿಢೀರ್ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಶುಚಿ, ರುಚಿ ಬಗ್ಗೆ ವಿಚಾರಿಸಿದರು.
ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಹಾಸ್ಟೆಲ್‍ನಲ್ಲಿ ಹೆಚ್ಚು ಮೊಬೈಲ್ ಬಳಕೆ ಮಾಡುತ್ತೀರಿ ಎನ್ನುವ ಆರೋಪ ವಿದ್ಯಾರ್ಥಿನಿಯರ ಮೇಲಿದೆ. ಮೊಬೈಲ್ ಬಳಕೆ ಎಷ್ಟು ಬೇಕೋ ಅಷ್ಟು ಮಾಡಿ. ಕೆಟ್ಟದ್ದನ್ನು ಡಿಲಿಟ್ ಮಾಡಿ, ಒಳ್ಳೆಯದನ್ನು ಸೇವ್ ಮಾಡಿ ಮತ್ತು ಮಾಹಿತಿಯನ್ನು ಶೇರ್ ಮಾಡಿ ಎಂದು ಸೂಚ್ಯವಾಗಿ ತಿಳಿಸಿದರು.
ವಿದ್ಯಾರ್ಥಿನಿಯರ ಮನಸ್ಸೆಳೆದ ಶಾಸ್ತ್ರದವನ ಕಥೆ!
ಒಬ್ಬ ಶಾಸ್ತ್ರದವನಿದ್ದನಂತೆ. ಅವನು ಹೇಳಿದ್ದೆಲ್ಲವೂ ನಿಜವಾಗುತ್ತಿತ್ತು ಎಂದು ಜನರು ಅವನ ಬಳಿ ತಮ್ಮ ತಮ್ಮ ಭವಿಷ್ಯ ತಿಳಿದುಕೊಳ್ಳಲು ಹೋಗುತ್ತಿದ್ದರಂತೆ. ಒಬ್ಬ ವಿದ್ಯಾವಂತ ಶಾಸ್ತ್ರದವನನ್ನು ಪರೀಕ್ಷಿಸಲು ಒಂದು ಪಾರಿವಾಳ ಹಿಡಿದು ಕೈ ಹಿಂದೆ ಕಟ್ಟಿಕೊಂಡು ನಿಂತನಂತೆ.
ಶಾಸ್ತ್ರಿಗಳೇ ನನ್ನ ಕೈಲಿ ಏನಿದೆ ಹೇಳಿ ಎಂದು ವ್ಯಕ್ತಿ ಕೇಳಿದನಂತೆ. ಆಗ ಶಾಸ್ತ್ರಿ ನಿನ್ನ ಕೈಲಿ ಪಾರಿವಾಳವಿದೆ ಎಂದನಂತೆ. ಯಾವ ಬಣ್ಣದ್ದು ಎಂದು ಹೇಳಿ ಎಂದು ವ್ಯಕ್ತಿ ಕೇಳಿದನಂತೆ. ಬಿಳಿ ಬಣ್ಣದ ಪಾರಿವಾಳ ನಿಮ್ಮ ಬಳಿಯಿದೆ ಎಂದನಂತೆ. ನಂತರ ಮತ್ತೊಂದು ಪ್ರಶ್ನೆ ಕೇಳಿದನಂತೆ ಪಾರಿವಾಳ ಸತ್ತಿದೆಯೋ ಬದುಕಿದೆಯೋ ಎಂದಾಗ ಶಾಸ್ತ್ರಿಗಳಿಗೆ ಉತ್ತರ ಕೊಡಲು ಸ್ವಲ್ಪ ಯೋಚಿಸಿ ‘ಅದರ ಪ್ರಾಣ ನಿನ್ನ ಕೈಲಿದೆ’ ಎಂದರಂತೆ.
ಅದರ ಅರ್ಥ ಪಾರಿವಾಳ ಬದುಕಿದ್ದರೆ ಆ ವ್ಯಕ್ತಿ ಕೊಂದು ಬಿಡುತ್ತಿದ್ದ, ಸತ್ತಿದೆ ಎಂದರೆ ಹಾರಿ ಬಿಡುತ್ತಿದ್ದ. ಎಲ್ಲಿ ನನ್ನ ಶಾಸ್ತ್ರ ಸುಳ್ಳಾಗತ್ತೊ ಎಂದು ಯೋಚಿಸಿ ‘ಅದರ ಪ್ರಾಣ ನಿನ್ನ ಕೈಲಿದೆ’ ಎಂದು ಬುದ್ದಿವಂತಿಕೆಯ ಉತ್ತರ ಕೊಟ್ಟನಂತೆ. ಹಾಗೆ ನಿಮ್ಮ ಜೀವನ ನಿಮ್ಮ ಬುದ್ಧಿ ನಿಮ್ಮ ಕೈಲಿದೆ ಎಂದು ಶಾಸಕರು ಬುದ್ಧ ಮಾತುಗಳನ್ನು ಹೇಳಿ ವಿದ್ಯಾರ್ಥಿನಿಯರಿಗೆ ಜೀವನದ ಪಾಠ ಹೇಳಿದರು.
ನಂತರ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.