Suddivijaya|Kannada News|14-05-2023
ಸುದ್ದಿವಿಜಯ ಜಗಳೂರು.ತಾಲೂಕಿನಲ್ಲಿ ನೀರಾವರಿ, ಶಿಕ್ಷಣ, ಆರೋಗ್ಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿ,೫೭ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಂಗ್ರೆಸ್ ಸರ್ಕಾರದ ಕೂಸಾಗಿದೆ. ಆದರೆ ಹಿಂದಿನ ಸರ್ಕಾರ ಅದನ್ನು ಲಾಲನೆ, ಪಾಲನೆ ಮಾಡದೇ ನಿರ್ಲಕ್ಷ ತೋರಿದ್ದರಿಂದ ಯೋಜನೆ ಪೂರ್ಣ ಪ್ರಮಾಣದಲ್ಲಿ ಮುಗಿದಿಲ್ಲ. ಇದೀಗ ನಮ್ಮದೇ ಸರ್ಕಾರ ಬಂದಿರುವುದರಿಂದ ನಮ್ಮ ಕೂಸನ್ನು ಚನ್ನಾಗಿ ಬೆಳೆಸಿ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲಾಗುವುದು, ಭದ್ರಾ ಮೇಲ್ದಂಡೆ ಯೋಜನೆಯತ್ತಾ ಗಮನಹರಿಸಲಾಗುವುದು, ನೆನಗುದಿಗೆ ಬಿದ್ದಿರುವ ಎಲ್ಲಾ ಕಾಮಗಾರಿಗಳನ್ನುಪೂರ್ಣಗೊಳಿಸಲಾಗುವುದು ಎಂದರು.
ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ಕ್ಷೇತ್ರದ ಮತದಾರರು ಈ ಬಾರಿ ನನ್ನನ್ನು ಆಶೀರ್ವದಿಸಿ ವಿಧಾನಸೌಧಕ್ಕೆ ಕಳಿಸಿಕೊಟ್ಟಿದ್ದಾರೆ. ಐದು ವರ್ಷಗಳಲ್ಲಿ ಎಲ್ಲಾ ಧರ್ಮ, ಜಾತಿ, ಸಮುದಾಯಗಳ ಋಣ ತೀರಿಸುತ್ತೇನೆ ಎಂದರು.ತಾಲೂಕು ಕೇಂದ್ರದಲ್ಲಿರುವ ಸಾರ್ವಜನಿಕ ಆಸ್ಪತ್ರೆ ಇನ್ನೂರು ಹಾಸಿಗೆಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗುವುದು, ಶಿಕ್ಷಣಕ್ಕೆ ಒತ್ತು ನೀಡಲಾಗುವುದು, ಕೆಎಸ್‌ಆರ್‌ಟಿಸಿ ಡಿಪೋ ನಿರ್ಮಾಣ, ದ್ವಿಮುಖ ರಸ್ತೆ ಅಭಿವೃದ್ದಿ ಹೀಗೆ ಸಾಲು ಸಾಲು ಸವಾಲುಗಳು ನನ್ನೆದುರಲ್ಲಿವೆ, ಹಂತ ಹಂತವಾಗಿ ಸರ್ಕಾರದಿಂದ ಅನುದಾನ ತಂದು ಅಭಿವೃದ್ದಿ ಪಡಿಸಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದವರೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ನನ್ನೆದುರಿಗೆ ನಿಂತು ಹೋರಾಟ ನಡೆಸಿದರು ಆದರೆ ಕ್ಷೇತ್ರದ ಮತದಾರರು ನನ್ನ ಕೈ ಬಿಡಲಿಲ್ಲಿ, ಮುಂದೆ ನನ್ನ ಮತದಾರರನ್ನು ನಾನು ಕೈಬಿಡುವುದಿಲ್ಲ ಎಂದರು.
ಕೆ.ಪಿ ಪಾಲಯ್ಯ ಆರಂಭದಿಂದಲೂ ನನಗೆ ಜೋಡೆತ್ತಾಗಿ ಜತೆಯಾಗಿ ನಿಂತು ಗೆಲುವಿನ ದಡ ಸೇರಿಸಿದ್ದಾರೆ. ನಾನು ಪ್ರತಿಯೊಂದು ಕೆಲಸದಲ್ಲೂ ನನ್ನೊಂದಿಗೆ ಅವರಿರುತ್ತಾರೆ. ಸರ್ಕಾರ ಕೂಡ ಅವರಿಗೆ ಉತ್ತಮವಾದ ಸ್ಥಾನ ಮಾನ ನೀಡಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ವಿವಿಧ ಇಲಾಖೆಗಳಲ್ಲಿ ನಡೆಯುತ್ತಿರುವ ಭ್ರಷ್ಟಚಾರ, ಶೇ ೪೦ ಪರ್ಸಂಟೇಜ್ ಗೆ ಮೊದಲು ಕಡಿವಾಣ ಹಾಕಲಾಗುವುದು, ಸರ್ಕಾರ ಕೂಡ ಸುಮಾರು ೨೦ ಲಕ್ಷ ಮನೆ ನೀಡುವುದಾಗಿ ಭರವಸೆ ನೀಡಿದೆ. ವಸತಿ ರಹಿತರಿಗೆ ಸಾಧ್ಯವಾದಷ್ಟು ಮನೆ ಮಂಜೂರು ಮಾಡಿಸಿ ಸೂರು ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ ಪಾಲಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಷೀರ್ ಅಹಮದ್, ಮಾಜಿ ಅಧ್ಯಕ್ಷ ಸುರೇಶ್‌ಗೌಡ್ರು, ವಕೀಲ ಪ್ರಕಾಶ್, ಮುಖಂಡರಾದ ದಿದ್ದಿಗಿ ಪ್ರಕಾಶ್, ಮಹಮದ್‌ಶಫೀವುಲ್ಲಾ, ಗುರುಮೂರ್ತಿ, ಕಾನನಕಟ್ಟೆ ಪ್ರಭು, ಹೋಮಣ್ಣ, ವಿಜಯ್ ಕೆಂಚೋಳ್, ರಮೇಶ್ ಸರ್ಕಾರ್, ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರಿದ್ದರು.