ಸುದ್ದಿವಿಜಯ,ಜಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ 2023-24ನೇ ಸಾಲಿನ ಬಜೆಟ್ ಅಭಿವೃದ್ಧಿಗೆ ಪೂರಕವಾದ ಬಜೆಟ್ ಆಗಿದೆ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಹೇಳಿದರು.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ಸಮಗ್ರ ಅಭಿವೃದ್ದಿಗೆ ಬಜೆಟ್‍ನಲ್ಲಿ ಗಮನ ನೀಡಲಾಗಿದೆ. ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಜೊತೆಗೆ ಪ್ರತಿ ಇಲಾಖೆಗೂ ಹಣ ಮೀಸಲಿಟ್ಟಿದ್ದಾರೆ.
ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ 37 ಸಾವರ ಕೋಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ 24 ಸಾವಿರ ಕೋಟಿ, ಇಂಧನ ಇಲಾಖೆಗೆ 22 ಸಾವಿರ ಕೋಟಿ, ನೀರಾವರಿ ಇಲಾಖೆಗೆ 19 ಸಾವಿರ ಕೋಟಿ, ಗ್ರಾಮೀಣಾಭಿವೃದ್ಧಿಗೆ 18 ಸಾವಿರ ಕೋಟಿ, ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ 16 ಸಾವಿರ ಕೋಟಿ,
ಕಂದಾಯ ಇಲಾಖೆ 16 ಸಾವಿರ ಕೋಟಿ, ಆರೋಗ್ಯ ಇಲಾಖೆಗೆ 14 ಸಾವಿರ ಕೋಟಿ, ಸಮಾಜ ಕಲ್ಯಾಣ ಇಲಾಖೆಗೆ 11.1 ಕೋಟಿ ರೂ, ಲೋಕೋಪಯೋಗಿ ಇಲಾಖೆಗೆ 10 ಸಾವಿರ ಕೋಟಿ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ 5860 ಕೋಟಿ, ಪಶುಸಂಗೋಪನಾ ಇಲಾಖೆ ಮೀನುಗಾರಿಕೆ ಇಲಾಖೆಗೆ 3024 ಮತ್ತು ಇತರೆ 1.09 ಕೋಟಿ ನೀಡಲಾಗಿದೆ ಎಂದರು.
ಕೃಷಿ, ಶಿಕ್ಷಣ, ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಜನ ಸಾಮಾನ್ಯರ ಬಜೆಟ್ ಇದಾಗಿದೆ. ಅತೀಮುಖ್ಯವಾಗಿ ಸಹಕಾರಿ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡಲಾಗಿದೆ. ಶೂನ್ಯ ಬಡ್ಡಿದರದ ಬೆಳೆ ಸಾಲವನ್ನು 3 ಲಕ್ಷದಿಂದ 5 ಲಕ್ಷದ ತನಕ ಸಾಲ ಹೆಚ್ಚಳ ಮಾಡಲಾಗಿದೆ.
ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲವನ್ನು 10 ರಿಂದ 15 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಇದಕ್ಕೆ ಶೇ.3 ರಷ್ಟು ವಾರ್ಷಿಕ ಬಡ್ಡಿ ವಿಧಿಸಿರುವುದು ಉತ್ತಮ ಬೆಳವಣಿಗೆಯಾಗಿದೆ.ಇದರ ಜೊತೆಗೆ ಎಪಿಎಂಸಿ ಕಾಯಿದೆ ವಾಪಾಸು ಪಡೆದಿರುವುದು ಒಳ್ಳೆಯದು ಎಂದು ಅವರು ಹೇಳಿದರು.