ಸುದ್ದಿವಿಜಯ, ಜಗಳೂರು: ತಾಲ್ಲೂಕಿನ ಕಾನನಕಟ್ಟೆ ಗ್ರಾಮದ ವೀರ ಯೋಧ ಸಿಆರ್‍ಪಿಎಫ್‍ನಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಮರಳಿ ತಾಯ್ನಾಡಿಗೆ ಬಂದ ಹಿನ್ನೆಲೆ ಶಾಸಕ ಬಿ.ದೇವೇಂದ್ರಪ್ಪ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು.
ಬುಧವಾರ ಪಟ್ಟಣದಕ್ಕೆ ಬಂದ ವಿರುಪಾಕ್ಷ ಅವರನ್ನು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಗಾಂಧಿ ವೃತ್ತದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಗಾಂಧಿವೃತ್ತ ತಲುಪುತ್ತಿದ್ದಂತೆ ವಿರುಪಾಕ್ಷ ಅವರನ್ನು ಹೂ ಮಾಲೆ ಹಾಕಿ ಸಿಹಿ ತಿನಿಸಿ ಶಾಸಕರು ಸ್ವಾಗತಿಸಿದರು.
ನಂತರ ಕಾನನಕಟ್ಟೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅದ್ಧೂರಿ ಸ್ವಾಗತ ಮತ್ತು ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, 20 ವರ್ಷಗಳ ಕಾಲ ಕಾಶ್ಮೀರ, ಛತ್ತಿಸ್‍ಗಡ ಸೇರಿದಂತೆ ವಿವಿಧ ಗಡಿಭಾಗದಲ್ಲಿ ಕಾರ್ಯನಿರ್ವಹಿಸಿ ಬರುವುದು ಯಮನ ಜೊತೆ ಸೆಣಸಾಟವಿದ್ದಂತೆ.
ಅವರು ‘ದ್ವಿಜ’ರಾಗಿದ್ದಾರೆ. ಅಂದರೆ ಎರಡು ಜನ್ಮ. ಯೋಧರಾಗಿ ನಿವೃತ್ತಿ ಹೊಂದಿ ತಾಯ್ನಾಡಿಗೆ ಮರಳಿ ಬಂದಿರುವುದು ಬಹಳ ಸಂತೋಷದ ವಿಷಯ ಎಂದರು.
ನಮ್ಮ ಪೋಷಕರು ಕತ್ತಲಾದರೆ ನಮ್ಮನ್ನು ಹೊರಗೆ ಕಳುಹಿಸಲು ಭಯ ಪಡುತ್ತಾರೆ. ಆದರೆ ವಿರುಪಾಕ್ಷ ಅವರ ಪೋಷಕರು ತಮ್ಮ ಮಗನನ್ನು ದೇಶ ಕಾಯಲು ಕಳುಹಿಸಿದ್ದು ದೇಶದ ಮೇಲಿನ ಅಭಿಮಾನ ಎದ್ದು ಕಾಣುತ್ತದೆ.
ವಿರುಪಾಕ್ಷ ಪತ್ನಿ ಸಾವಿತ್ರಮ್ಮ ತ್ಯಾಗಮಯಿ ಎಂದರು. ವೀರ ಯೋಧರು ಯುದ್ಧ ಭೂಮಿಯಲ್ಲಿ ವೀರಮರಣ ಹೊಂದಿದರೆ ಅವರನ್ನು ಭಾರತ ಧ್ವಜ ಹೊದ್ದಿಸಿ ಅಂತ್ಯಕ್ರಿಯೆ ನೆರವೇರಿಸುತ್ತಾರೆ ಅಂತಹ ಭಾಗ್ಯ ಯಾರಿಗೂ ಸಿಗುವುದಿಲ್ಲ ಎಂದರು.
ವೀರಯೋಧ ವಿರುಪಾಕ್ಷ ಮಾತನಾಡಿ, ಕಿತ್ತು ತಿನ್ನುವ ಬಡತನದ ಕಾರಣಕ್ಕಾಗಿ ಆರ್ಮಿಗೆ ಸೇರುವ ಮುನ್ನ ಕೂಲಿ ಮಾಡುತ್ತಿದ್ದೆ. ಟ್ರ್ಯಾಕ್ಟರ್ ಕೆಲಸ, ಕೂಲಿ ಕೆಲಸ ಮಾಡುತ್ತಿದ್ದೆ. 2002ರಲ್ಲಿ ಸೈನ್ಯಕ್ಕೆ ಸೇರಲು ನಡೆದೇ ಹೋಗಿದ್ದೆ.
ಆದರೆ ಕೆಲಸ ಸಿಕ್ಕಾಗ ನನ್ನಷ್ಟು ಖುಷಿ ಪಟ್ಟವರು ಮತ್ತೊಬ್ಬರಿಲ್ಲ. ಕಾಶ್ಮೀರ ಛತ್ತೀಸ್‍ಗಡ, ಚನ್ನೈ, ಅಂಡಮಾನ್ ನಿಕೋಬಾರ್ ದ್ವೀಪ, ಆಫ್ರಿಕಾದಲ್ಲೂ ಕಾರ್ಯನಿರ್ವಹಿಸಿದ್ದೇನೆ. ಯುವಕರು ಸ್ವಾರ್ಥಬಿಟ್ಟು ಸೇನೆ ಸೇರಿ ದೇಶ ಸೇವೆ ಮಾಡಿದರೆ ಮಾತ್ರ ದೇಶ ರಕ್ಷಣೆ ಆಗುತ್ತದೆ.ಕೆಲವರಿಗೆ ಮಾತ್ರ ಆಭಾಗ್ಯ ಸಿಗುತ್ತದೆ. ನಾನು ಭಾಗ್ಯವಂತ ಎಂದರು.
ಖಾನಾಮಡುಗು ಶರಣಬಸವೇಶ್ವರ ಮಠದ ಪೀಠಾಧಿಪತಿ ಐಮಡಿ ಶರಣಾರ್ಯ ಮಾತನಾಡಿದರು. ಕಾರ್ಯಕ್ರಮದಲ್ಲಿ ಸೇನೆಯಿಂದ ನಿವೃತ್ತರಾದ ಯೋಧರಾದ ವಿರುಪಾಕ್ಷ, ರಂಗಸ್ವಾಮಿ, ಪ್ರಹ್ಲಾದ್ ರೆಡ್ಡಿ, ಕಲ್ಲಹಳ್ಳಿ ಹಾಲೇಶ್, ಮುರಿಗೇಶ್, ಮಹಾಂತೇಶ್, ರಮೇಶ್ ಅವರನ್ನು ಶಾಸಕ ದೇವೇಂದ್ರಪ್ಪ ಸನ್ಮಾನಿಸಿದರು.
ಈ ವೇಳೆ ಕೆಪಿಸಿಸಿ ಎಸ್‍ಟಿ ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ, ಕೆಪಿಸಿಸಿ ಸದಸ್ಯ ಕಲ್ಲೇಶ್‍ರಾಜ್ ಪಟೇಲ್, ಪಲ್ಲಾಗಟ್ಟೆ ಶೇಖರಪ್ಪ, ಮಹಮದ್ ಗೌಸ್, ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಬಿ.ಮಹೇಶ್ವರಪ್ಪ, ಲುಖ್ಮಾನ್ ವುಲ್ಲಾಖಾನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.