ಸುದ್ದಿವಿಜಯ,ಜಗಳೂರು:ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರ ಏ.17 ರಂದು ಸೋಮವಾರ ನಾಮಪತ್ರ ಸಲ್ಲಿಸುವುದಾಗಿ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 11ಗಂಟೆಗೆ ಪಟ್ಟಣದ ಹೊರಕೆರೆಯ ಈಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಮೆರವಣಿಗೆ ಆರಂಭಿಸಲಾಗುವುದು.
ನೆಹರು ರಸ್ತೆ, ಹಳೇ ಮಹಾತ್ಮಗಾಂಧಿ ವೃತ್ತ, ದಾವಣಗೆರೆ ರಸ್ತೆ, ಡಾ.ಬಿ.ಆರ್ ಅಂಬೇಡ್ಕರ್ ವೃತ್ತದ ಮೂಲಕ ತಾಲೂಕು ಕಚೇರಿಗೆ ತೆರಳಿ ಮಧ್ಯಾಹ್ನ 12ಕ್ಕೆ ನಾಮ ಪತ್ರ ಸಲ್ಲಿಸಲಾಗುವುದು, ಸಾವಿರಾರು ಕಾರ್ಯಕರ್ತರು, ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಅಭಿವೃದ್ದಿ ಕಾರ್ಯಗಳೆ ಗೆಲುವಿಗೆ ಶ್ರೀ ರಕ್ಷೆ:
ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಪ್ರಗತಿ ಕಂಡ ಅಭಿವೃದ್ದಿ ಕೆಲಸಗಳೆ ನನ್ನ ಗೆಲುವಿಗೆ ಶ್ರೀ ರಕ್ಷೆಯಾಗಲಿದೆ. ಸಿರಿಗೆರೆಯ ಡಾ. ಶಿವಮೂರ್ತಿ ಶ್ರೀಗಳ ಆಶೀರ್ವಾದದಿಂದ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಅನುಷ್ಠಾನಗೊಳಿಸಿದ್ದರಿಂದ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಕಳೆದ ಚುನಾವಣೆಯಲ್ಲಿ ಘೋಷಣೆ ಮಾಡಿದಂತೆ ಭದ್ರಾ ಮೇಲ್ದಂಡೆ ಯೋಜನೆ ಮಂಜೂರಾಗಿದ್ದು, 46 ಸಾವಿರ ಎಕರೆ ಪ್ರದೇಶ ಹನಿನೀರಾವರಿ ಪ್ರದೇಶವಾಗಲಿದೆ.
ಬಹುಗ್ರಾಮ ಕುಡಿಯುವ ನೀರು ಯೋಜನೆ ಮಂಜೂರಾಗಿದೆ, ಜಲ ಜೀವನ್ ಮಿಷನ್ ಯೋಜನೆಯ ಮೂಲಕ ಪ್ರತಿ ಮನೆಗಳಿಗೂ ಕುಡಿಯುವ ನೀರು ಪೂರೈಕೆ ಮಾಡುತ್ತಿದೆ ಇದು ಬಿಜೆಪಿ ಸರ್ಕಾರದ ಸಾಧನೆಯಾಗಿದೆ ಎಂದರು.
ಗೆಲುವು ನನ್ನದೇ:
ಕ್ಷೇತ್ರದಲ್ಲಿ ಮತದಾರರ ಪ್ರೀತಿ- ವಿಶ್ವಾಸ, ಕಾರ್ಯಕರ್ತರ ಪರಿಶ್ರಮದಿಂದ ಕ್ಷೇತ್ರದಲ್ಲಿ ಮತ್ತೊಮ್ಮೆ ಶಾಸಕನಾಗಿ ಆಯ್ಕೆಯಾಗುವುದು ನಿಶ್ಚಿತ. ಕಾಂಗ್ರೆಸ್, ಪಕ್ಷೇತರ ಯಾರೇ ನನ್ನ ಎದುರಿಗೆ ನಿಂತರು ನನಗೆ ಭಯವಿಲ್ಲ ಗೆಲುವು ನನ್ನದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಮಚಂದ್ರನಿಗೆ ಆರೋಗ್ಯ ಸರಿ ಇಲ್ಲ ಅವರಿಗೆ ನನಗೆ ಟಿಕೆಟ್ ಸಿಗುವುದಿಲ್ಲವೆಂದು ಹೇಳಿದವರಿಗೆ ಪಕ್ಷ ಟಿಕೆಟ್ ನೀಡಿಲ್ಲ. ಅವರು ಮಾಡುವ ಟೀಕೆಗಳಿಗೆಲ್ಲಾ ಉತ್ತರ ಕೊಡುವ ಅವಶ್ಯಕತೆ ಇಲ್ಲ.
ಏನಿದ್ದರು ಚುನಾವಣೆಯಲ್ಲಿ ಉತ್ತರ ಕೊಡುತ್ತೇವೆ ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಅವರಿಗೆ ಟಾಂಗ್ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಎಚ್.ಸಿ ಮಹೇಶ್, ಮಾಜಿ ಜಿ.ಪಂ ಸದಸ್ಯರಾದ ಎಸ್.ಕೆ ಮಂಜುನಾಥ್, ಎಚ್. ನಾಗರಾಜ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಿ.ವಿ ನಾಗಪ್ಪ, ಶಶೀಧರ್ ಸೇರಿದಂತೆ ಮತ್ತಿತರಿದ್ದರು.
ರಾಜೇಶ್ ಅವರಿಗೆ ಟಿಕೆಟ್ ಕೈ ತಪ್ಪಿಲು ನಾನು ರಣ ತಂತ್ರ ಹೆಣೆದಿದ್ದೇನೆ ಎಂದು ಅವರು ಆರೋಪ ಮಾಡಿದ್ದಾರೆ. ಯಾವ ತಂತ್ರವನ್ನೂ ನಾನು ಮಾಡಿಲ್ಲ. ಅದು ಅವರ ಭ್ರಮೆ. ಕಾಂಗ್ರೆಸ್ ಪಕ್ಷದಲ್ಲಿ ಶಾಸಕರಾಗಿ ಈಗ ಕಾಂಗ್ರೆಸ್ ನಾಯಕರಿಗೆ ನೇರವಾಗ್ದಾಳಿ ಮಾಡಿರುವ ರಾಜೇಶ್ ಅವರಿಗೆ ಎಲ್ಲಿದೆ ಪಕ್ಷ ನಿಷ್ಠೆ ಎಂದು ಪ್ರಶ್ನಿಸಿದರು.