ಸುದ್ದಿವಿಜಯ, ಜಗಳೂರು: ಚುನಾವಣೆ ನಡೆದು ಮೂರು ತಿಂಗಳ ನಂತರ ಇದೇ ಮೊದಲ ಬಾರಿಗೆ ಹಾಲಿ ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಮತ್ತು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಉಭಯ ಕುಶಲೋಪರಿ ವಿಚಾರಿಸಿಕೊಂಡರು.
ಗುತ್ತಿದುರ್ಗ ಗ್ರಾಮದಲ್ಲಿ ಶುಕ್ರವಾರ ನಡೆದ ಡಿ.ದೇವರಾಜ ಅರಸು ಮೆಟ್ರಿಕ್ ಪೂರ್ವ ನೂತನ ಹಾಸ್ಟೆಲ್ ಉದ್ಘಾಟನೆ ಕಾರ್ಯಕ್ರಮ ಇನ್ನೇನು ಕಾರ್ಯಕ್ರಮ ಮುಗಿಯುವ ಹಂತದಲ್ಲಿದ್ದಾಗ ಶಾಸಕ ಬಿ.ದೇವೇಂದ್ರಪ್ಪ ಮಾತು ಮುಗಿಸುವ ಹಂತದಲ್ಲಿತ್ತು.
ಆ ವೇಳೆ ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಶಾಲಾ ಆವರಣಕ್ಕೆ ಎಂಟ್ರಿ ಕೊಟ್ಟರು. ತಕ್ಷಣ ಮುಂದೆ ಬಂದು ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿ ಎಂದು ಶಾಸಕ ದೇವೇಂದ್ರಪ್ಪ ಅವರು ಎಸ್‍ವಿಆರ್ ಅವರನ್ನು ಸ್ವಾಗತಿಸಿದರು.
ಈವೇಳೆ ಮಾತನಾಡಿದ ಶಾಸಕ ದೇವೇಂದ್ರಪ್ಪ ಪ್ರೊಟೋಕಾಲ್ ಎಂಬುದು ವಿಜ್ಞಾನವೇನಲ್ಲ. ಕಾರ್ಯಕ್ರಮಕ್ಕೆ ಬನ್ನಿ ಎಂದು ವೇದಿಕೆ ಮೇಲೆ ಕರೆದು ಪಕ್ಕದಲ್ಲೇ ಕುಳ್ಳಿರಿಸಿಕೊಂಡರು.
ಈ ವೇಳೆ ಹಾಲಿ ಮತ್ತು ಮಾಜಿ ಶಾಸಕರು ಚುನಾವಣೆ ನಂತರ ಮೊದಲ ಬಾರಿಗೆ ಭೇಟಿಯಾಗಿದ್ದರಿಂದ ಪಿಸು ಮಾತಿನಲ್ಲಿ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡರು.
ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್.ವಿ.ರಾಮಚಂದ್ರ, ಕ್ಷೇತ್ರದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ನೀರಾವರಿ ಯೋಜನೆಗಳು ಪೂರ್ಣಗೊಂಡು ಕ್ಷೇತ್ರದ ಜನರಿಗೆ ಒಳ್ಳೆಯದಾದರೆ ಸಾಕು. ಶಾಸಕ ಸ್ಥಾನ ಯಾರಪ್ಪನ ಆಸ್ತಿಯಲ್ಲ. ಈ ಬಾರಿ ಜನ ದೇವೇಂದ್ರಪ್ಪ ಅವರಿಗೆ ಆಶೀರ್ವಾದ ಮಾಡಿದ್ದಾರೆ ಎಂದು ಶುಭಕೋರಿದರು.