ಸುದ್ದಿವಿಜಯ,ಜಗಳೂರು: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರ ಸ್ವಗ್ರಾಮ ತಾಲೂಕಿನ ಹುಚ್ಚಂಗಿಪುರದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಸರಕಾರಿ ಶಾಲೆ ಮೂರು ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿದ್ದು ಗ್ರಾಮಸ್ಥರು ನಿರ್ಮಾಣ ಹಂತದ ಕಟ್ಟಡದ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ವಿಧಾನ ಪರಿಷತ್ ಸ್ಥಳೀಯ ಶಾಸಕರಾಭಿವೃದ್ದಿ ಅನುದಾನದಡಿಯಲ್ಲಿ ನಿರ್ಮಾಣವಾಗುತ್ತಿರುವ ಸರಕಾರಿ ಹಿರಿಯ ಮಾದರಿ ಶಾಲೆಯ ಕಟ್ಟಡ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ.
೩೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿರುವ ಈ ಮಾದರಿ ಶಾಲೆ ಕಟ್ಟಡವು ದುಸ್ಥಿತಿಯಲ್ಲಿದ್ದಿದ್ದರಿಂದ ಎಂಎಲ್‌ಸಿ ಎನ್. ರವಿಕುಮಾರ್ ಗ್ರಾಮದ ಶಾಲೆಯನ್ನು ದತ್ತು ತೆಗೆದುಕೊಂಡು ಅಭಿವೃದ್ದಿ ಪಡಿಸುವುದು ಭರವಸೆ ನೀಡಿದ್ದರು.
ಅದರಂತೆ 2020-21ನೇ ಸಾಲಿನಲ್ಲಿ ಶಾಲೆಯನ್ನು ತೆರವುಗೊಳಿಸಿ ಎಲ್ಲಾ ವಿದ್ಯಾರ್ಥಿಗಳನ್ನು ಗ್ರಾಮದಲ್ಲಿದ್ದ ವಿದ್ಯಾರ್ಥಿ ನಿಲಯಕ್ಕೆ ಸ್ಥಳಾಂತರಿಸಲಾಗಿತ್ತು.
ವರ್ಷದೊಳಗೆ ಕಾಮಗಾರಿ ಮುಗಿಸುವುದಾಗಿ ಭರವಸೆ ನೀಡಿದ್ದ ಗುತ್ತಿಗೆದಾರ ಮತ್ತು ರವಿಕುಮಾರ್ ಮೂರುವರೇ ವರ್ಷಗಳಾದರೂ ಕಾಮಗಾರಿ ಪೂರ್ಣಗೊಳಿಸಿಲ್ಲ.
ಆರಂಭದಲ್ಲಿ 1.75 ಕೋಟಿ ಬಿಡುಗಡೆ ಮಾಡಲಾಗಿತ್ತು. ನಂತರ ಹೆಚ್ಚುವರಿಯಾಗಿ 25 ಲಕ್ಷ ಒಟ್ಟು 2ಕೋಟಿಯಲ್ಲಿ ಶಾಲೆ ನಿರ್ಮಾಣವಾಗುತ್ತಿದೆ.
ಗುತ್ತಿಗೆದಾರ ಕಟ್ಟಡ ಕಾಮಗಾರಿ ಮುಗಿಸಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳ ಪೋಷಕರು ಅಸಮಾಧಾನ ವ್ಯಕ್ತಪಡಿಸಿದರು.
ವಿದ್ಯಾರ್ಥಿನಿಲಯದಲ್ಲಿ ಕೇವಲ 4 ಕೊಠಡಿಗಳಿದ್ದು 300 ಮಕ್ಕಳಿಗೆ ಸಾಕಾಗುತ್ತಿಲ್ಲ. ಹಾಗಾಗಿ ಶಿಕ್ಷಕರು ಮರದ ಕೆಳಗೆ ಕೂತು ತರಗತಿಗಳನ್ನು ಹೇಳಿಕೊಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮಳೆಗಾಲದಲ್ಲಂತೂ ಮಕ್ಕಳನ್ನು ನಿಭಾಯಿಸುವುದು ಶಿಕ್ಷಕರಿಗೆ ತುಂಬ ತಲೆ ನೋವಾಗಿದೆ.
ಇದರಿಂದ ಕೆಲ ಮಕ್ಕಳು ಶಾಲೆಗೆ ಬರುವುದನ್ನೇ ಬಿಟ್ಟಿದ್ದಾರೆ ಎಂದು ಹೋರಾಟಗಾರ ರವಿಕುಮಾರ್ ಎಂಎಲ್ ಸಿ ಎನ್.ರವಿ.ಕುಮಾರ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಶೀಘ್ರವೇ ಶಾಲಾ ಕಟ್ಟಡ ನಿರ್ಮಾಣವಾಗದಿದ್ದರೆ
ಅವರ ಮನೆಯ ಮುಂಭಾಗದಲ್ಲಿ ಮಕ್ಕಳೊಂದಿಗೆ ಪ್ರತಿಭಟನೆ ನಡೆಸಲಾಗುವುದು.
ಇಲ್ಲದಿದ್ದರೇ ಕಟ್ಟಡ ಮುಗಿಯುವವರೆಗೂ ಸುಸರ್ಜಿತವಾಗಿ ನಿರ್ಮಿಸಿಕೊಂಡಿರುವ ಅವರ ಸ್ವಃತ ಮನೆಯಲ್ಲಿ ಮಕ್ಕಳಿಗೆ ತರಗತಿ ನಡೆಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ವಿದ್ಯಾರ್ಥಿಗಳ ಪಾಲಕರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷರಾದ ಹೆಚ್ ಜಿ ನಾಗರಾಜ್, ಗ್ರಾಮ ಪಂಚಾಯತಿ ಸದಸ್ಯರಾದ ಬಿ.ಟಿ ವೆಂಕಟೇಶ್, ರವಿ ಯು.ಸಿ ಹುಚ್ಚಂಗಿಪುರ, ನಿಂಗರಾಜ್, ತಿಮ್ಮೇಶ್, ವಿರೇಶ್, ಗುರಪ್ಪ, ವೆಂಕಿ ಮೊದಲಾದ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.