ಸುದ್ದಿವಿಜಯ, ಜಗಳೂರು: ತಾಲೂಕು ಕೇಂದ್ರದಿಂದ ಕೂಗಳತೆಯ ದೂರದಲ್ಲಿರುವ ಗ್ರಾಮ ಎಂದರೆ ಅದು ಜಗಳೂರು ಗೊಲ್ಲರಹಟ್ಟಿ. ಈ ದೊಡ್ಡ ಗ್ರಾಮದಲ್ಲಿ ಸೊಳ್ಳೆ ಉತ್ಪಾದಿಸುವ ಫ್ಯಾಕ್ಟರಿ ಇದೆಯಾ ಎಂದು ಹೇಳಿದರೆ ನೀವು ನಂಬಲೇ ಬೇಕು.
ಹೌದು, ಜಗಳೂರು ಪಟ್ಟಣದಿಂದ ಕೇವಲ 500 ಮೀಟರ್ ದೂರದಲ್ಲಿರುವ ಈ ಗ್ರಾಮ ಹನುಮಂತಾಪುರ ಗ್ರಾಮ ಪಂಚಾಯಿತಿಗೆ ಸೇರುತ್ತದೆ. ಈ ಗ್ರಾಮದಲ್ಲಿ ಎಲ್ಲಿ ನೋಡಿದರೂ ಚರಂಡಿಗಳು ಕೊಳಚೆ ನೀರಿನಿಂದ ತುಂಬಿವೆ. ಮಣ್ಣು, ಕಡ್ಡಿ, ಕಸ ತುಂಬಿ ಸರಾಗವಾಗಿ ಕೊಳಚೆ ನೀರು ಹರಿಯದಂತ ಸ್ಥಿತಿ ನಿರ್ಮಾಣವಾಗಿದ್ದು ಗ್ರಾಪಂ ಅವ್ಯವಸ್ಥೆಯ ಕೈನ್ನಡಿಯಾಗಿದೆ.ಜಗಳೂರು ತಾಲೂಕಿನ ಗೊಲ್ಲರಹಟ್ಟಿ ಗ್ರಾಮದಲ್ಲಿ ಚರಂಡಿಗಳಲ್ಲಿ ಸೊಳ್ಳೆಗಳ ಉತ್ಪಾದನೆ
ಸುಮಾರು 500ಕ್ಕೂ ಹೆಚ್ಚು ಮನೆಗಳಿರುವ ಈ ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ರಸ್ತೆಯಲ್ಲಿ ಓಡಾಡಿದರೆ ಸಾಕು ಮೂಗು ಮುಚ್ಚಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಸಂಜೆಯಾದರೆ ಸೊಳ್ಳೆಗಳ ಝೇಂಕಾರ ತಾಳಲಾಗದೇ ಹೊತ್ತು ಮುಳುಗುವ ಮುನ್ನವೇ ಜನ ಬಾಗಿಲು ಹಾಕಿಕೊಂಡು ಅಡುಗೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಜಾನುವಾರುಗಳಿಗೆ ಸೊಳ್ಳೆಗಳ ಕಾಟ: ಮನುಷ್ಯರೇನೋ ಬೆಚ್ಚನೆಯ ಮನೆಯಲ್ಲಿ ಕಿಟಿಕಿ ಬಾಗಿಲು ಹಾಕಿ ಸೊಳ್ಳೆಗಳಿಂದ ರಕ್ಷಣೆ ಪಡೆಯಬಹುದು. ಆದರೆ ಕುರಿ, ಮೇಕೆ, ಎತ್ತು, ಎಮ್ಮೆಗಳಿಗೆ ಸೊಳ್ಳೆಗಳ ಕಾಟ ಸಹಿಸಲಾಗುತ್ತಿಲ್ಲ.ಕಾಲಿಡದ ಪಿಡಿಒ: ತಾಲೂಕು ಕೇಂದ್ರಕ್ಕೆ ಹತ್ತಿರವಾದ ಈ ಗ್ರಾಮ ಗ್ರಾಮ ಪಂಚಾಯಿತಿಗೆ ದೂರ. ಸುಮಾರು ನಾಲ್ಕು ಕಿ.ಮೀ ದೂರದಲ್ಲಿರುವ ಜಗಳೂರು ಗೊಲ್ಲರಹಟ್ಟಿ ಗ್ರಾಮಕ್ಕೆ ಇದುವರೆಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಪ್ರವೇಶವಾಗಿಲ್ಲ.
ಪ್ರಸ್ತುತ ಹನುಮಂತಾಪುರ ಗ್ರಾಪಂನಲ್ಲಿ ಕೊಟ್ರೇಶ್ ಎಂಬುವರು ಪಿಡಿಒ ಆಗಿ ಕೆಲಸ ಮಾಡುತ್ತಿದ್ದರೂ ಇತ್ತ ಕಡೆ ತಿರುಗಿಯೂ ನೋಡಿಲ್ಲ. ನಮ್ಮ ಸಮಸ್ಯೆ ಯಾರಿಗೆ ಹೇಳಲಿ. ಆಯ್ಕೆಯಾದ ಸದಸ್ಯರೂ ಕಿವಿಗೊಡುತ್ತಿಲ್ಲ. ಸೊಳ್ಳೆಗಳ ಕಾಟಕ್ಕೆ ಡೇಂಗಿ ಪ್ರಕರಣಗಳು ಹೆಚ್ಚುತ್ತಿವೆ. ಮಕ್ಕಳು ಮರಿಗಳ ಮೈಯಲ್ಲಿ ಸೊಳ್ಳೆ ಕಡಿತದ ದದ್ದುಗಳು ಹೆಚ್ಚಾಗಿವೆ ಎಂದು ಗ್ರಾಮದ ತಿಮ್ಮಕ್ಕ ನೋವು ತೋಡಿಕೊಂಡರು.