ಸುದ್ದಿವಿಜಯ, ಜಗಳೂರು: ತಾಲೂಕಿನ ಸೊಕ್ಕೆ ಮತ್ತು ಬಿದರಕೆರೆ ಗ್ರಾಮಗಳಲ್ಲಿ ಕಳೆದ ಏ.15ರ ರಾತ್ರಿ ಲಿಕ್ಕರ್ ಶಾಪ್ಗಳಿಗೆ ನುಗ್ಗಿದ ಕಳ್ಳರು ಹಣ ಮತ್ತು ಲಿಕ್ಕರ್ ದೋಚಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ತಾಲೂಕಿನ ಗಡಿಗ್ರಾಮಗಳನ್ನೇ ಟಾರ್ಗೆಟ್ ಮಾಡಿರುವ ಖದೀಮರು ತಮ್ಮ ಕೈಚಳಕ ತೋರಿಸಿದ್ದಾರೆ.
ಘಟನೆ-1: ಜಗಳೂರು ಚಿತ್ರದುರ್ಗ ಗಡಿ ಗ್ರಾಮ ಬಿದರಕೆರೆ ಗ್ರಾಮದಲ್ಲಿರುವ ಪಾಲಯ್ಯ ಎಂಬುವರು ನಡೆಸುತ್ತಿದ್ದ ಎಂಎಸ್ಐಎಲ್ ಮದ್ಯದ ಅಂಗಡಿಗೆ ಬುಧವಾರ ರಾತ್ರಿ ನುಗ್ಗಿದ ಕಳ್ಳರು 73 ಸಾವಿರ ನಗದು, ಒಂದು ಡಿವಿಆರ್, ಎರಡು ಸಿಸಿಕ್ಯಾಮರಾ ಸೇರಿದಂತೆ ಅಂದಾಜು 5 ಸಾವಿರ ಮೌಲ್ಯದ ಮದ್ಯದ ಬಾಟಲ್ಗಳನ್ನು ದೋಚಿ ಪರಾರಿಯಾಗಿದ್ದಾರೆ.
ಅಂದು ರಾತ್ರಿ 10 ಗಂಟೆಗೆ ಮಾಲೀಕರು ಮತ್ತು ಕಾರ್ಮಿಕರು ಮದ್ಯದ ಅಂಗಡಿ ಬಂದ್ ಮಾಡಿ ಮನೆಗೆ ಹೋಗಿದ್ದರು. ಮರುದಿನ ಬೆಳಿಗ್ಗೆ 6 ಗಂಟೆಗೆ ಬಂದು ನೋಡಿದಾಗ ಕಳುವಾಗಿದ್ದು ಪ್ರಕರಣ ಸಂಬಂಧ ಅಬಕಾರಿ ಇಲಾಖೆ ಮತ್ತು ಜಗಳೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಾಲಯ್ಯ ಪ್ರಕರಣ ದಾಖಲಿಸಿದ್ದಾರೆ.
ಘಟನೆ-2:
ವಿಜಯನಗರ ಮತ್ತು ಜಗಳೂರು ಗಡಿ ಗ್ರಾಮವಾದ ಸೊಕ್ಕೆ ಗ್ರಾಮದಲ್ಲಿರುವ ಎಂಎಸ್ಐಎಲ್ ಮದ್ಯದ ಅಂಗಡಿ ಟಾರ್ಗೆಟ್ ಮಾಡಿದ ಕಳ್ಳರು ಎಸ್.ಎನ್.ವೀರೇಶ್ ನಡೆಸುತ್ತಿದ್ದ ಲಿಕ್ಕರ್ ಅಂಗಡಿ ಶೆಟರ್ ಮುರಿದು ಕಳ್ಳತನ ಮಾಡಿದ್ದಾರೆ.
ಏ.15 ರಂದು ರಾತ್ರಿ ಕಳ್ಳತನವಾಗಿದ್ದು ಮದ್ಯದ ಅಂಗಡಿಯಲ್ಲಿದ್ದ 94 ಸಾವಿರ ನಗದು, ಲಿಕ್ಕರ್ ಶಾಪ್ಗೆ ಅಳವಡಿಸಿದ್ದ ಸಿಸಿಟಿವಿ, ಡಿವಿಆರ್ ಮತ್ತು 11 ಸಾವಿರ ಬೆಲೆ ಬಾಳುವ ಮದ್ಯದ ಬಾಟಲ್ಗಳನ್ನು ದೋಚಿ ಕಳ್ಳರು ಪರಾರಿಯಾಗಿದ್ದಾರೆ.
ಈ ಪ್ರತ್ಯೇಕ ಪ್ರಕರಣ ಸಂಬಂಧ ಜಗಳೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ಸ್ಪೆಕ್ಟರ್ ಡಿ.ಶ್ರೀನಿವಾಸ್ರಾವ್, ಸಬ್ಇನ್ಸ್ಪೆಕ್ಟರ್ ಎಸ್.ಡಿ.ಸಾಗರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.