ಸುದ್ದಿವಿಜಯ, ಜಗಳೂರು: ಪಪಂ ವ್ಯಾಪ್ತಿಯಲ್ಲಿ ಬರುವ 53 ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ಗೊಂದಲ ಸೃಷ್ಟಿಯಾದ ಹಿನ್ನೆಲೆ ಗುರುವಾರ ಬಹಿರಂಗ ಹರಾಜು ಪ್ರಕ್ರಿಯೆಯನ್ನು ಮುಂದೂಡಲಾಯಿತು.
ಕಳೆದ ಅನೇಕ ವರ್ಷಗಳಿಂದ 53 ಮಳಿಗೆಗಳನ್ನು ಬಹಿರಂಗ ಹರಾಜು ಪ್ರಕ್ರಿಯೆ ಮಾಡಿರಲಿಲ್ಲ. ಹೊಸದಾಗಿ ಹರಾಜು ಪ್ರಕ್ರಿಯೆ ಆರಂಭಿಸಿ ಆಸಕ್ತರು ಅರ್ಜಿ ಸಲ್ಲಿಸಿ ಬ್ಯಾಂಕ್‍ನಲ್ಲಿ ನಿಗದಿ ಪಡಿಸಿದ ಹಣವನ್ನು ಡಿಡಿ ತೆಗೆಸಿ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿತ್ತು.
ಆದರೆ ಅನೇಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಸರಿಯಾದ ಪ್ರಚಾರ ಕೊಡದೇ ಗುಪ್ತವಾಗಿ ಅರ್ಜಿ ಸ್ವೀಕರಿಸಿ ತಮಗೆ ಬೇಕಾದವರಿಗೆ ಮಳಿಗೆ ಹರಾಜು ಮಾಡಿಕೊಡಲು ತೀರ್ಮಾನಿಸಿದ್ದಾರೆ ಎಂದು ಆರೋಪ ,ಆಕ್ಷೇಪಣೆಗಳು ಕೇಳಿಬಂದವು.
ಹೀಗಾಗಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನೋಡಲ್ ಅಧಿಕಾರಿಯಾಗಿ ಆಗಮಿಸಿದ್ದ ಜಿಲ್ಲಾ ಯೋಜನಾ ನಿರ್ದೇಶಕ ಡಾ.ಬಿ.ಮಹಾಂತೇಶ್ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆಯನ್ನು ಮುಂದೂಡಲಾಗಿದೆ ಎಂದು ಬಹಿರಂಗವಾಗಿ ತಿಳಿಸಿದರು.
ಆಕ್ಷೇಪ ವ್ಯಕ್ತಪಡಿಸಿದ ನಾಗರೀಕರು:
ನಿಯಮಾನುಸಾರ ನಾವು ಅರ್ಜಿ ಸಲ್ಲಿಸಿ, ಡಿಡಿ ತೆಗೆದು ಪಪಂ ನಿಗದಿ ಪಡಿಸಿದ ಸಮಯಕ್ಕೆ ಸರಿಯಾಗಿ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದೇವೆ.
ಪ್ರಚಾರ ಇಲ್ಲದಿದ್ದರೆ ಇಷ್ಟೊಂದು ಜನ ಸೇರುತ್ತಿರಲಿಲ್ಲ. ನಮ್ಮ ಸಮಯ, ಹಣವನ್ನು ವ್ಯರ್ಥ ಮಾಡಲಾಗಿದೆ. ಇದಕ್ಕೆ ಪಪಂ ಆಡಳಿತ ವ್ಯವಸ್ಥೆಯ ವೈಫಲ್ಯ ಕಾರಣ.
ಹಾಗಾಗಿ ಇಂದು ನಿಗದಿ ಪಡಿಸಿರುವ ಸಮಯದಲ್ಲೇ ಬಹಿರಂಗ ಹರಾಜು ಪ್ರಕ್ರಿಯೆ ನಡೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಜಿಲ್ಲಾ ಯೋಜನಾ ನಿರ್ದೇಶಕ ಡಾ.ಬಿ.ಮಹಾಂತೇಶ್ ಪಪಂ ಸದಸ್ಯರು ಮತ್ತು ಆಡಳಿತದ ಅನುಸಾರ ನಾವು ಈ ಕ್ರಮ ಕೈಗೊಂಡಿದ್ದು,
ಹೆಚ್ಚಿನ ಪ್ರಚಾರ ಮಾಡಿ ಶೀಘ್ರವೇ ಬಹಿರಂಗ ಹರಾಜು ಪ್ರಕ್ರಿಯೆಯ ದಿನಾಂಕವನ್ನು ಸಾರ್ವಜನಿಕರ ಗಮನಕ್ಕೆ ತಂದು, ವ್ಯಾಪಕ ಪ್ರಚಾರ ನೀಡಿದ ನಂತರ ದಿನಾಂಕ ನಿಗದಿಪಡಿಸಿ ಮತ್ತೆ ಬಹಿರಂಗ ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದು ಹೇಳಿ ಸಭೆಯನ್ನು ಮುಂದೂಡಿದರು.
ಈ ವೇಳೆ ತಹಶೀಲ್ದಾರ್, ಜಿ.ಸಂತೊಷಕ್‍ಕುಮಾರ್, ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್, ಪಪಂ ಅಧ್ಯಕ್ಷೆ ವಿಶಾಲಾಕ್ಷಿ, ಉಪಾಧ್ಯಕ್ಷೆ ನಿರ್ಮಲಾ ಕುಮಾರಿ ಸೇರಿದಂತೆ ನೂರಾರು ಸಾರ್ವಜನಿಕರು ಇದ್ದರು.