ಸುದ್ದಿವಿಜಯ, ಜಗಳೂರು: ಪ್ರಧಾನಿ ನರೇಂದ್ರ ಮೋದಿ ಒಬ್ಬ ಮಹಾನ್ ನಾಯಕ. ಸರ್ವ ಶ್ರೇಷ್ಠ ಭಾರತಕ್ಕಾಗಿ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಲೇ ಬೇಕು ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಪಟ್ಟಣದ ತರಳಬಾಳು ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ನಮೋ ಭಾರತ ಕಾರ್ಯಕ್ರಮದಲ್ಲಿ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಭಾರತ ಮಾತೆಯ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರದ ಉದ್ದಗಲಕ್ಕೂ ಮಾಡಿರುವ ಕಾರ್ಯಗಳು ಅವಿಸ್ಮರಣೀಯ. ವಿಶ್ವವೇ ಭಾರತ ಕಡೆ ತಿರುಗಿ ನೋಡುವಂತ ಅದ್ಭುತ ಕಾರ್ಯ ಮಾಡುವಲ್ಲಿ ಅವರ ಸಾಧನೆ ಅನನ್ಯ ಎಂದು ಸ್ಮರಿಸಿದರು.
ಎಂಪಿ ಅಭ್ಯರ್ಥಿ ಯಾರೇ ಆಗಲಿ ನಮ್ಮ ಗುರಿ ಮಾತ್ರ ಮೋದಿ ಅವರನ್ನು ಗೆಲ್ಲಿಸುವುದು. ಅಟಲ್ ಬಿಹಾರಿ ವಾಜಿಪೇಯಿ ಅವರಿಗೆ ಮಾಡಿದ ಮೋಸ ನಮೋ ಅವರಿಗೆ ಆಗದಂತೆ ಜಾಗೃತರಾಗೋಣ.ಜಗಳೂರು ಪಟ್ಟಣದ ತರಳಬಾಳು ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಿದ್ದ ನಮೋ ಭಾರತ ಕಾರ್ಯಕ್ರಮದಲ್ಲಿ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು.
ರಾಹುಲ್ ಗಾಂಧಿ ಅವರು ಚುನಾವಣೆ ವೇಳೆ ಹಿಂದುತ್ವದ ಪೋಷಾಕು ಧರಿಸಿ ಲಿಂಗಕ್ಕೆ ಪೂಜೆ ಸಲ್ಲಿಸಿ ಡ್ರಾಮಾ ಮಾಡುತ್ತಿದ್ದಾರೆ. ಲಿಂಗಕ್ಕೆ ಹೂವಿನ ಹಾರ ಹಾಕುವುದು ಹೇಗೆ ಎಂಬುದು ಅವರಿಗೆ ಗೊತ್ತಿಲ್ಲ ಇಂತಹ ನಾಯಕರು ಭಾರತವನ್ನು ಹೇಗೆ ಮುನ್ನಡೆಸುತ್ತಾರೆ ಎಂದು ಪ್ರಶ್ನಿಸಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ‘ಭಾರತ ರತ್ನ’ ಕೊಡದೇ ಅಗೌರವ ತೋರಿಸಿದ್ದು ಕಾಂಗ್ರೆಸ್‍ನವರು. ಆದರೆ ನಮೋ ಅವರು ಹಿಂದುಳಿದ ವರ್ಗಕ್ಕೆ ಸೇರಿದ ರಾಮನಾಥ್ ಕೋವಿಂದ್ ಮತ್ತು ಬುಡಕಟ್ಟು ಸಮುದಾಯದ ಹಾಗೂ ಮಹಿಳೆಯರಿಗೆ ಪ್ರಾಧಾನ್ಯತೆ ನೀಡುವ ಉದ್ದೇಶದಿಂದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿ ತಮ್ಮ ಬದ್ಧತೆಯನ್ನು ತೋರಿಸಿದ್ದಾರೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾರತ ದೇಶದ ಜನರ ಜೀವನವನ್ನು ಬದಲಾವಣೆ ಮಾಡಿದ್ದಾರೆ.
ಭಾರತ ಜಗತ್ತಿನಲ್ಲಿ ಐದನೇ ದೊಡ್ಡ ಆರ್ಥಿಕ ಶಕ್ತಿ ರಾಷ್ಟ್ರವಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಅನ್ಯ ದೇಶಗಳಿಗೆ ವ್ಯಾಕ್ಸಿನ್ ನೆರವು ನೀಡಿದ್ದಾರೆ.
ನಾನು ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಹತ್ತು ಜನಕ್ಕೆ ಹೇಳುತ್ತೇನೆ. ಅಷ್ಟಕ್ಕೆ ನನ್ನ ಕೆಲಸ ಮುಗಿಯಿತು. ನೀವು ಕನಿಷ್ಟ ಎರಡು ಮೂರು ಜನರಿಗೆ ಹೇಳಿದರೆ ಸಾರ್ಥಕವಾಗುತ್ತದೆ.
ಕಾಂಗ್ರೆಸ್‍ನವರು ನನ್ನ ಮೇಲೆ ಎಸೆಯುವ ಟೀಕೆಯ ಕಲ್ಲುಗಳನ್ನೇ ಸಂಗ್ರಹಿಸಿ ಸುಂದರ ಅರಮನೆಯನ್ನೇ ಕಟ್ಟುತ್ತೇನೆ ಎಂದು ವಿರೋಧಿಗಳಿಗೆ ಪ್ರತ್ಯುತ್ತರ ನೀಡಿದರು.
ಈ ಸಂದರ್ಭದಲ್ಲಿ ಯುವ ಬ್ರಿಗೇಡ್ ಅಭಿಮಾನಿಗಳು. ರಾಜ್ಯ ಸಂಚಾಲಕರಾದ ಶಾರದಾ ಡೈಮಂಡ್ ,ತಾಲೂಕು ಸಂಚಾಲಕರಾದ ಅಶ್ವಿನಿ ಹಿರೇಮಠ್ ಸೇರಿದಂತೆ ಮೋದಿ ಅಭಿಮಾನಿಗಳು ಇದ್ದರು.