‘ನನ್ನನ್ನು ಕೆಣಕಿದರೆ ಸುಮ್ಮನೆ ಬಿಡುವುದಿಲ್ಲ’: ಶಾಸಕ ಬಿ.ದೇವೇಂದ್ರಪ್ಪ ಎಚ್ಚರಿಕೆ!

Suddivijaya
Suddivijaya September 5, 2023
Updated 2023/09/05 at 2:41 PM

ಸುದ್ದಿವಿಜಯ, ಜಗಳೂರು: ‘ಕೆಲವರು ನನ್ನನ್ನು ಹುಚ್ಚ, ರೌಡಿ ಎಂದು ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ನನ್ನನ್ನು ಕೆಣಕಿದವರನ್ನು ನಾನು ಸುಮ್ಮನೆ ಬಿಡುವುದಿಲ್ಲ’ ನನ್ನನ್ನು ಕಣಕ ಬೇಡಿ, ಕೆಣಕಿ ತಿಣುಕಬೇಡಿ ಎಂದು ಶಾಸಕ ಬಿ.ದೇವೇಂದ್ರಪ್ಪ ರಾಜಕೀಯ ವಿರೋಧಿಗಳಿಗೆ ಎಚ್ಚರಿಕೆ ನೀಡಿದರು.

ಪಟ್ಟಣದ ಶಾಸಕರ ಜನ ಸಂಪರ್ಕ ಕಚೇರಿ ಆವರಣದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಮಂಗಳವಾರ ಸಾರ್ವಜನಿಕ ಗ್ರಂಥಾಲಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಅವರ ದೃಷ್ಟಿಯಲ್ಲಿ ಮಂಗನೇ ಇರಬಹುದು, ಹುಚ್ಚನಿರಬಹುದು.

ಈ ಮಂಗನನ್ನು ಕೆಣಕುವ ಮುನ್ನ ಯೋಚಿಸಿ. ಮಂಗ ಕಲ್ಲು ಎಸೆದವರನ್ನು ಸುಮ್ಮನೆ ಬಿಡುವುದಿಲ್ಲ ಎಚ್ಚರವಿರಲಿ. ಇನ್ನು ಐದು ವರ್ಷಗಳ ಕಾಲ ನಾನೇ ಶಾಸಕನಾಗಿರತ್ತೇನೆ. ನನ್ನನ್ನು ಕೆಣಕುವ ಕೆಲವರ ಆಟ ನನ್ನ ಮುಂದೆ ನಡೆಯುವುದಿಲ್ಲ. ಎಲ್ಲರಿಗೂ ನನ್ನ ಈ ಮಾತು ಅನ್ವಯವಾಗುವುದಿಲ್ಲ. ಯಾರು ನನ್ನ ವ್ಯಕ್ತಿತ್ವವನ್ನು ಟೀಕಿಸುತ್ತಾರೋ ಅವರಿಗೆ ಈ ಮಾತು ಅನ್ವಯವಾಗುತ್ತದೆ ಎಂದು ವಿರೋಧಿಗಳಿಗೆ ಎಚ್ಚರಿಕೆ ನೀಡಿದರು.ನನಗೆ ಪ್ರೀತಿಸುವವರು, ಹೊಗಳುವವರು ನನ್ನ ಬಂಧುಗಳಲ್ಲ. ನನ್ನನ್ನು ರೌಡಿ ಎಂದವರೇ ನನ್ನ ನಿಜವಾದ ಬಂಧುಗಳು. ನನ್ನ ತಪ್ಪುಗಳೇನೆ ಇದ್ದರೂ ಮಾಧ್ಯಮದವರು ಲೇಖನಗಳ ಮೂಲಕ ತಿದ್ದಲಿ. ವೈಯಕ್ತಿವಾಗಿ ಬೋರ್‍ವೆಲ್, ಮನೆ, ರಸ್ತೆ ಹೀಗೆ ಮೂಲಸೌಕರ್ಯ ಕೇಳುವ ಮಂದಿ ಅನೇಕರಿದ್ದಾರೆ.

ಆದರೆ ಇದುವರೆಗೂ ಒಂದು ಸುಸಜ್ಜಿತವಾದ ಗ್ರಂಥಾಲಯವನ್ನು ಯಾರೂ ಕೇಳಿರಲಿಲ್ಲ. ನಾನು ಶಾಸಕನಾಗಿ 103 ದಿನಗಳಾಗಿವೆ. ಈ ಸಂದರ್ಭದಲ್ಲಿ ಮೂರು ಮುಖ್ಯವಾದ ಕೆಲಸ ಮಾಡಬೇಕು ಎಂದು ಪಣತೊಟ್ಟಿದ್ದೇನೆ. ಮೊದಲನೆಯದು ಗ್ರಂಥಾಲಯಕ್ಕೆ ಹೊಸ ರೂಪು ಕೊಟ್ಟಿದ್ದೇನೆ.

ಇನ್ನು ಶವ ಸಂಸ್ಕಾರಕ್ಕೆ ಮುಕ್ತಿವಾಹನ ಮತ್ತು ಅಪಘಾತವಾದ ತಕ್ಷಣ ಬಡವರಿಗೆ ನೆರವಾಗಲು ಉಚಿತ ವಾಹನ ವ್ಯವಸ್ಥೆ ಕಲ್ಪಿಸುವ ಎರಡು ಕೆಲಸಗಳು ಬಾಕಿ ಉಳಿದಿದ್ದು ಮುಂದಿನ ದಿನಗಳಲ್ಲಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಕೇಂದ್ರ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶ್‍ಕುಮಾರ್ ಎಸ್. ನಿಕಟಪೂರ್ವ ಸಭಾಪತಿಗಳ ಆಪ್ತಕಾರ್ಯದರ್ಶಿ ತಿಪ್ಪೇಸ್ವಾಮಿ ಮಾತನಾಡಿದರು.

ಈ ವೇಳೆ ಕೆಪಿಸಿಸಿ ಸದಸ್ಯ ಕಲ್ಲೇಶ್‍ರಾಜ್ ಪಟೇಲ್, ಕೆಪಿಸಿಸಿ ಎಸ್‍ಟಿ ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ, ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್, ಸಾಹಿತಿ ಎನ್.ಟಿ.ಎರ್ರಿಸ್ವಾಮಿ, ಕಸಾಪಾ ಅಧ್ಯಕ್ಷರಾದ ಸುಜಾತಮ್ಮ, ಲಯನ್ಸ್ ಕ್ಲಬ್ ಶಾಹಿನಾ, ಕರವೇ ಅಧ್ಯಕ್ಷ ಮಹಾಂತೇಶ್, ಹಿರಿಯನಾಗರಾಗರೀಕ ವೇದಿಕೆ ಅಧ್ಯಕ್ಷ ಸಿ.ತಿಪ್ಪೇಸ್ವಾಮಿ,

ಎನ್‍ಜಿಒ ಅಧ್ಯಕ್ಷ ಬಿ.ಆರ್.ಚಂದ್ರಪ್ಪ, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ನಿರ್ದೇಶಕ ಬಿ,ಮಹೇಶ್ವರಪ್ಪ, ಜಿಲ್ಲಾ ಮುಖ್ಯಗ್ರಂಥಾಲಯ ಅಧಿಕಾರಿ ಪಿ.ಆರ್.ತಿಪ್ಪೇಸ್ವಾಮಿ ಮತ್ತು 22 ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರು ಭಾಗವಹಿಸಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!