ಜಗಳೂರು ಜನತೆಯ ನೂನತ ಗ್ರಂಥಾಲಯ ಕನಸು ನನಸು, ಇಂದು ಲೋಕಾರ್ಪಣೆ

Suddivijaya
Suddivijaya September 5, 2023
Updated 2023/09/05 at 1:57 AM

ಸುದ್ದಿವಿಜಯ, ಜಗಳೂರು: ದಾವಣಗೆರೆ ಜಿಲ್ಲೆಯಲ್ಲೇ ಅತ್ಯಂತ ಹಿಂದುಳಿದ ತಾಲೂಕು ಜಗಳೂರಿನಲ್ಲಿ ಉಣಲು ,ಉಡಲು ಇರುವ ಬಡತನದ ಜೊತೆಗೆ ನಾವು ಬದಲಾಗಬೇಕು ಎನ್ನುವ ಭಾವನೆಯೇ ಇಲ್ಲದ ಮಾನಸಿಕ ಬರ ಇದ್ದರೂ ಅದೃಷ್ಟವಶಾತ್ ಈಗ ಬದಲಾವಣೆಯ ಗಾಳಿ ಬೀಸುವಂತಾಗಿ ಒಂದಿಷ್ಟು ಆಶಾ ಭಾವನೆ, ಹೊಸತನ, ಹೊಸ ಆಶಾ ಕಿರಣಗಳು ಮೂಡುವಂತಾಗಿದೆ!

ಹೌದು, ಶಾಸಕರ ಜನ ಸಂಪರ್ಕ ಕಚೇರಿಯ ಆವರಣದಲ್ಲಿ ಸುಸಜ್ಜಿತವಾದ ಬೃಹತ್ ಗ್ರಂಥಾಲಯ ಸೆ.5 ರಂದು ಶಿಕ್ಷಕರ ದಿನಾಚರಣೆ ದಿನ ಉದ್ಘಾಟನೆಗೆ ಸಿದ್ಧವಾಗಿದೆ. 1965ರ ಸಾರ್ವಜನಿಕ ಗ್ರಂಥಾಲಯ ಕಾಯ್ದೆ ಪ್ರಕಾರ 1973ರಲ್ಲಿಯೇ ಜಗಳೂರಿನಲ್ಲಿ ಸಾರ್ವಜನಿಕ ಗ್ರಂಥಾಲಯ ಪ್ರಾರಂಭವಾಗುತ್ತು. ಆದರೆ ಸುಸಜ್ಜಿತವಾದ ಸಾರ್ವಜನಿಕ ಗ್ರಂಥಾಲಯವಿಲ್ಲದೇ ಕೊರಗುವ ಸ್ಥಿತಿ ನಿರ್ಮಾಣವಾಗಿತ್ತು.

ಗ್ರಂಥಾಲಯಕ್ಕೆ ಸ್ವಂತ, ಸೂಕ್ತ ಕಟ್ಟಡವಿಲ್ಲದೆ ಅದು ಮೂಲೆಯಲ್ಲಿ ನೆಲೆಸಿ ಅರೆ ಜೀವದಲ್ಲಿಯೇ ಕೊಸರಿಕೊಂಡು ಸಾಗಿ ಬಂದದ್ದು ಅದರ ಪರಿಣಾಮ ಗ್ರಂಥಾಲಯದಲ್ಲಿ ಪುಸ್ತಕಗಳ ಇಳಿಕೆ ಮತ್ತು ಇರುವ ಗ್ರಂಥಗಳು ಸುಲಲಿತವಾಗಿ ಓದುಗರಿಗೆ ದೊರಕದೆ ಧೂಳು ಹಿಡಿದಿದ್ದವು.ಗ್ರಹಣ ಹಿಡಿದ ಗ್ರಂಥಾಲಯಕ್ಕೆ ಪುನಶ್ಚೇತನ ನೀಡಬೇಕೆಂಬ ಸಂಕಲ್ಪ ದಶಕಗಳು ಸಂದರೂ ಕೂಡ ಯಾರಿಗೂ ಬಾರದೆ ಹೋಗಿದ್ದು ಮಾತ್ರ ನೋವಿನ ಸಂಗತಿ.

ಸಾಹಿತಿಗಳು, ಕನ್ನಡಾಸಕ್ತರಾದ ನಿವೃತ್ತ ಲೀಡ್ ಬ್ಯಾಂಕ್ ಮ್ಯಾನೇಜರ್ ಎನ್.ಟಿ.ಎರ್ರಿಸ್ವಾಮಿ ಅವರಂತಹ ಹೋರಾಟಗಾರರ ಫಲವಾಗಿ ಸುಸಜ್ಜಿತವಾದ ಗ್ರಂಥಾಲಯ ತಲೆ ಎತ್ತಿದೆ. ಗ್ರಂಥಾಲಯ ಸಮಸ್ಯೆಗೆ ಸಂಘಟನಾತ್ಮಕ ಪರಿಹಾರ ಕಂಡುಕೊಳ್ಳಬೇಕೆಂದು ನಿರ್ಧರಿಸಿದ ಅವರು, ಎಲ್ಲಾ ಸಂಘಟನೆಗಳನ್ನು ಒಗ್ಗೂಡಿಸಿ ಹೋರಾಟದ ಫಲವಾಗಿ 2022ರ ಜುಲೈ 18ರಂದು ಜಿಲ್ಲಾಧಿಕಾರಿಗಳಿಗೆ, ಅಂದಿನ ಶಾಸಕರಿಗೆ, ಸಂಸದರಿಗೆ ಪತ್ರಗಳನ್ನು ಬರೆದು ಒತ್ತಾಯಿಸಿದ್ದರು. ಆದರೂ ಫಲಿತಾಂಶ ಮಾತ್ರ ಶೂನ್ಯವಾಗಿತ್ತು.

ಶಾಸಕರಾಗಿ ಆಯ್ಕೆಯಾದ ಬಿ.ದೇವೇಂದ್ರಪ್ಪನವರನ್ನು ಸಾಹಿತಿ ಎನ್.ಟಿ.ಎರ್ರಿಸ್ವಾಮಿ ಸೇರಿದಂತೆ ಅನೇಕರು ಭೇಟಿ ಮಾಡಿ ಗ್ರಂಥಾಲಯ ಸಮಸ್ಯೆ ಬಗ್ಗೆ ಚರ್ಚಿಸಿದ್ದರು. ಹೀಗಾಗಿ ಐದು ದಶಕಗಳ ಸಮಸ್ಯೆಯ ಪರಿಹಾರಕ್ಕೆ ಪರಿಹಾರ ಸಿಕ್ಕಂತಾಗಿದೆ.ರಾಜ್ಯದಲ್ಲಿ ಡಿಜಿಟಲ್ ಗ್ರಂಥಾಲಯ ಚಳವಳಿಯ ಪಿತಾಮಹರೆಂದೇ ಹೆಸರು ಗಳಿಸಿರುವ ರಾಜ್ಯ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಸತೀಶ್ ಹೊಸಮನಿ ಉದ್ಘಾಟನೆಯಲ್ಲಿ ಭಾಗವಹಿಸಲಿದ್ದಾರೆ.
ನೂತನ ಗ್ರಂಥಾಲಯದಲ್ಲಿ ಸುಮಾರು 22 ಸಾವಿರ ಪುಸ್ತಕಗಳಿವೆ, ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಯಲ್ಲಿ ಸಾಹಿತ್ಯದ ಎಲ್ಲಾ ಪ್ರಕಾರಗಳಾದ ಜಾನಪದ, ಕಥೆ ,ಕವನ, ಲೇಖನ, ಕಾದಂಬರಿ, ಪ್ರವಾಸ ಕಥನ, ವ್ಯಕ್ತಿ ಚಿತ್ರಣ, ವೈಚಾರಿಕ ಸಾಹಿತ್ಯ, ವಚನ ಸಾಹಿತ್ಯ, ಧರ್ಮ ಗ್ರಂಥಗಳಲ್ಲದೆ ಯುವ ಜನತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೂಡಲು ಬೇಕಾದ ಎಲ್ಲಾ ಪುಸ್ತಕಗಳು ಲಭ್ಯವಿದೆ.

ವಿಶಾಲವಾದ ಕಟ್ಟಡದಲ್ಲಿ ಉತ್ತಮ ಪರಿಸರದಲ್ಲಿ ಗ್ರಂಥಾಲಯ ತಲೆಎತ್ತಿದ್ದು, ಗೋಡೆ ಚಿತ್ರಗಳ ಮೇಲೆ ಚಿತ್ರಗಳು ನೋಡುಗರನ್ನು ಮಂತ್ರಮುಗ್ದರನ್ನಾಗಿಸುತ್ತವೆ. ವಾಚನಾಲಯಕ್ಕೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ. ಡಿಜಿಟಲ್ ಗ್ರಂಥಾಲಯ ಸ್ಥಾಪಿಸಲಾಗಿದ್ದು ಅದರಲ್ಲಿ 10 ಲಕ್ಷ ಪುಸ್ತಕಗಳನ್ನು ಆಸಕ್ತರು ಉಚಿತವಾಗಿ ಓದಬಹುದಾಗಿದೆ.

ಶಾಸಕರಾದ ಬಿ. ದೇವೇಂದ್ರಪ್ಪನವರು ತೆಗೆದುಕೊಂಡ ದೃಢ, ಸೂಕ್ತ ಹಾಗೂ ತ್ವರಿತ ನಿರ್ಧಾರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಶಾಸಕರ ಚಿಂತನೆ ತಾಲೂಕಿನಲ್ಲಿ ಗ್ರಂಥಾಲಯಗಳ ಪುನಶ್ವೇತನ ಹಾಗೂ ಓದಿನ ಬಗ್ಗೆ ಹೊಸ ಚಳವಳಿಗೆ ನಾಂದಿಯಾಗಲಿದೆ ಎಂಬುದು ಸಾಹಿತ್ಯಾಸಕ್ತರ ಅಭಿಪ್ರಾಯವಾಗಿದೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!