ಸಮಸ್ಯೆಗಳ ಸಾಗರದಲ್ಲಿ ನೂತನ ಶಾಸಕರಿಗೆ ಅಭಿವೃದ್ಧಿ ಮಂಕಾಗದಿರಲಿ!

Suddivijaya
Suddivijaya May 15, 2023
Updated 2023/05/16 at 2:57 AM

ಸುದ್ದಿವಿಜಯ,ಜಗಳೂರು(ವಿಶೇಷ): ಚುನಾವಣಾ ರಣರಂಗದಲ್ಲಿ ಕಟ್ಟಕಡೆಯ ಗೆಲುವು ಕಾಂಗ್ರೆಸ್ ಅಭ್ಯರ್ಥಿ ಬಿ.ದೇವೇಂದ್ರಪ್ಪ ಅವರಿಗೆ ಸಂದಿದೆ. ಜನರು ಅವರ ಮೇಲೆ ಬೆಟ್ಟದಷ್ಟು ನಿರೀಕ್ಷೆ ಹೊಂದಿದ್ದಾರೆ.

ಕ್ಷೇತ್ರದಲ್ಲೇ ಹುಟ್ಟಿ ಬೆಳೆದು, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಡಿ ದರ್ಜೆಯ ನೌಕರರಾಗಿ 34 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿಯಾದ ನೂತನ ಶಾಸಕರಿಗೆ ಈ ಜಗಳೂರು ಕ್ಷೇತ್ರ ಹೊಸದಲ್ಲ. ಆಡಳಿತವೂ ಹೊಸದಲ್ಲ.

ಎಲ್ಲ ಸಮಸ್ಯೆಗಳನ್ನು, ಕಷ್ಟಗಳನ್ನು ಅನುಭವಿಸಿದ ನೂತನ ಶಾಸಕರಿಗೆ ರಾಜಕೀಯದ ಹಾವು ಏಣಿ ಆಟದಲ್ಲಿ ಪಳಗಿದ ಅನುಭವಿ ರಾಜಕಾರಣಿ. ಅವರು ಜನರ ಕಷ್ಟಗಳ ಮಧ್ಯೆ ಬೆಳೆದಿದ್ದಾರೆ.

ಸೋತಿದ್ದಾಗಲೂ ಸಮಾಜ ಸೇವಕರಾಗಿ ಅವರು ಮಾಡಿದ ಕೆಲಸಕ್ಕೆ ಜನರು ಮತಹಾಕಿ ಗೆಲ್ಲಿಸಿದ್ದಾರೆ. ಅವರನ್ನು ಶಾಸಕರನ್ನಾಗಿ ಮಾಡಿದ್ದಾರೆ. ಕಾರಣ ಇಷ್ಟೇ ಕಳೆದ ಅವಧಿಯಲ್ಲಿ ಆಡಳಿತ ನಡೆಸಿದ ಜನಪ್ರತಿನಿಧಿಯ ಆಡಳಿತ ವಿರೋಧಿ ಅಲೆಯಿಂದ ರೋಸಿ ಹೋಗಿದ್ದ ಮತದಾರ ಹೊಸತನ ಬಯಸಿ ದೇವೇಂದ್ರಪ್ಪ ಅವರಿಗೆ ಆಡಳಿತ ನಡೆಸಲು ಅವಕಾಶ ಕೊಟ್ಟಿದ್ದಾರೆ.

ಕ್ಷೇತ್ರದ ಸಮಸ್ಯೆಗಳಿಗೆ ಶೀಘ್ರವೇ ಕಾಯಕಲ್ಪ ಸಿಗಲಿ!

ಜಗಳೂರು ಇಡೀ ರಾಜ್ಯದಲ್ಲೇ ಅತ್ಯಂತ ಹಿಂದುಳಿದ ಪ್ರದೇಶ. ಜಿಲ್ಲಾ ಕೇಂದ್ರದಿಂದ 50 ಕಿಮೀ ದೂರವಿರುವ ಜಗಳೂರು ಕ್ಷೇತ್ರದಲ್ಲಿ ಸಾಗರದಷ್ಟು ಸಮಸ್ಯೆಗಳಿವೆ. ತುಂಗಭದ್ರೆ ಹರಿದು ಆಂಧ್ರಪ್ರದೇಶ ತಲುಪಿದರೂ ಇಲ್ಲಿನ 57 ಕೆರೆ ತುಂಬಿಸಲು ಐದು ವರ್ಷಗಳಾದರೂ ಸಾಧ್ಯವಾಗಿಲ್ಲ.

ಈ ಯೋಜನೆ ಕಾಂಗ್ರೆಸ್ ಸರಕಾರದ ಕೂಸು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ 2018ರಲ್ಲಿ ಆರಂಭವಾದ ಯೋಜನೆ ಐದು ವರ್ಷಗಳಾದರೂ ನೆನೆಗುದಿಗೆ ಬಿದ್ದಿದೆ. ಅದಕ್ಕೆ ರಾಕೇಟ್ ವೇಗ ಕಲ್ಪಿಸಬೇಕಿದೆ.

ಅಪ್ಪರ್ ಭದ್ರಾ ಯೋಜನೆ ಹತ್ತಾರು ವರ್ಷಗಳ ಹೋರಾಟದ ಫಲ. ಕೇಂದ್ರಸರಕಾರ 1336 ಕೋಟಿ ರೂ ಮಂಜೂರು ಮಾಡಿದ್ದರೂ ಇನ್ನು ಪ್ಲಾನಿಂಗ್ ಆಗಿಲ್ಲ. ಈ ಯೋಜನೆ ರೈತರಿಗೆ ಜೀವ ನಾಡಿಯಾಗಬೇಕಾಗಿದೆ. ಅದನ್ನು ಪೂರ್ಣಗೊಳಿಸಬೇಕಿರುವುದು ನಿಮ್ಮ ನೈತಿಕ ಜವಾಬ್ದಾರಿ.

484 ಕೋಟಿ ರೂ ವೆಚ್ಚದ ಬಹುಗ್ರಾಮ ಕುಡಿಯುವ ನೀರು ಯೋಜನೆ ಮನೆ ಮನೆಗೆ ತಲುಪಬೇಕಿದೆ. ಇವು ಪ್ರಮುಖ ಯೋಜನೆಗಳಾಗಿದ್ದರಿಂದ ನಿರ್ಲಕ್ಷ್ಯ ಮಾಡುವಂತಿಲ್ಲ. ನಿರ್ಲಕ್ಷ್ಯ ಮಾಡಿದ ಜನಪ್ರತಿನಿಧಿಗೆ ಮತದಾರ ಈಗಾಗಲೇ ಪಾಠ ಕಲಿಸಿದ್ದಾನೆ.

ಜೊತೆಗೆ ಆಡಳಿತ ವ್ಯವಸ್ಥೆಯಲ್ಲಿ ಪರಿಣಾಮಕಾರಿಯಾಗಿ ಬದಲಾವಣೆಯಾಗಬೇಕಿದೆ. ಸ್ಥಳೀಯ ಸಂಸ್ಥೆಗಳ ಕಚೇರಿಯಿಂದ ಹಿಡಿದು ಎಲ್ಲ ಇಲಾಖಾ ಕಚೇರಿಗಳಲ್ಲೂ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಜನಪರ ಕೆಲಸ ಮಾಡುವ ಅಧಿಕಾರಿಗಳು ಬೇಕಾಗಿದೆ. ಜಡ್ಡುಗಟ್ಟಿದ ವ್ಯವಸ್ಥೆಯ ಸ್ವಚ್ಛತೆಗೆ ಕೈ ಹಾಕಿದರೆ ಮಾತ್ರ ಸುಧಾರಣೆ ಸಾಧ್ಯ. ಇಲ್ಲವಾದರೆ ಜನರ ಆಲೋಚನೆಗಳು ಬದಲಾಗಬಹುದು.

ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಪಟ್ಟಣದಲ್ಲಿ ಯುಜಿಡಿ ಇಲ್ಲ. ಸ್ವಚ್ಛತೆ ಮರೀಚಿಕೆಯಾಗಿದೆ. ಸಾರ್ವಕನಿಕರ ಆಸ್ಪತ್ರೆಯಲ್ಲಿ ಅನಾರೋಗ್ಯ ತಾಂಡವಾಡುತ್ತಿದೆ. ಹೈಟೆಕ್ ಆಸ್ಪತ್ರೆಯ ಅವಶ್ಯಕತೆಯಿದೆ. ಗ್ರಾಮೀಣ, ಪಟ್ಟಣದ ರಸ್ತೆಗಳು ಹದಗೆಟ್ಟಿವೆ. ರೈತರಿಗೆ ಸಿಗಬೇಕಾದ ನ್ಯಾಯ ಸಿಗುತ್ತಿಲ್ಲ. ಗ್ರಾಮೀಣ ಸಾರಿಗೆ ಇಲ್ಲದೇ ವಿದ್ಯಾರ್ಥಿಗಳ ನಿತ್ಯಪರದಾಟ ನಿಲ್ಲಬೇಕಾದರೆ ಗ್ರಾಮೀಣ ಸಾರಿಗೆ ವೃದ್ಧಿಯಾಗಬೇಕು.

ಪಟ್ಟಣದಲ್ಲಿ ಶೌಚಾಲಯಗಳಿಲ್ಲ. ಇರುವ ಶೌಚಗೃಹಗಳಲ್ಲಿ ಮೂಗುಮುಚ್ಚಿಕೊಂಡು ನಿತ್ಯ ಕರ್ಮ ಮುಗಿಸುವ ಶೋಚನೀಯ ಪರಿಸ್ಥಿತಿಯಿದೆ. ಮಹಿಳೆಯರಂತೂ ನಿತ್ಯವೂ ಈ ಸಮಸ್ಯೆ ಅನುಭವಿಸುತ್ತಿದ್ದಾರೆ.

ಸರಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯಗಳಿಲ್ಲ. ಮಳೆ ಬಂದರೆ ಕೊಠಡಿಗಳು ಸೋರುತ್ತಿವೆ. ಬೆಸಿಗೆ ಕಾಲದಲ್ಲಿ ಶಾಲೆಗಳಲ್ಲಿ ಹಗಲು ಹೊತ್ತು ಸೂರ್ಯ, ರಾತ್ರಿ ಹೊತ್ತು ಚಂದಿರನನ್ನು ನೋಡುವಷ್ಟು ಶಾಲೆಗಳು ಶೋಚನೀಯವಗಿವೆ.

ಶಿಕ್ಷಕರ ಕೊರತೆ. ಮೂಲಸೌಕರ್ಯಗಳ ಕೊರತೆ, ಹೈಟೆಕ್ ಲೈಬ್ರರಿಗಳ ಅವಶ್ಯತೆ ತುರ್ತಾಗಿ ಆಗಬೇಕಿದೆ. ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಟ್ರಾಫಿಕ್ ಸಿಗ್ನಲ್‍ಗಳ ಅಳವಡಿಕೆ, ಸಿಸಿಟಿವಿ ಅಳವಡಿಕೆ, ಪ್ರಮುಖ ರಸ್ತೆಗಳ ವಿಸ್ತರಣೆಗಳಾದರೆ ಸುಂದರ ನಗರವಾದೀತು.

ಗ್ರಾಮಪಂಚಾಯಿತಿಗಳಲ್ಲಿ ನೈರ್ಮಲ್ಯಗಳಿಲ್ಲ. ಮನೆಯಿಲ್ಲದ ವಸತಿರಹಿತರು ಸಂಖ್ಯೆ ಹೆಚ್ಚಿದೆ. ಮಾರುಕಟ್ಟೆ, ಎಪಿಎಂಸಿಗಳಲ್ಲಿ ವ್ಯವಸ್ಥೆ ಸುಧಾರಣೆಯಾಗಬೇಕಿದೆ. ಹೇಳುತ್ತಾ ಹೋದರೆ ಬೆಟ್ಟದಷ್ಟು ಸಮಸ್ಯೆಗಳಿವೆ. ಈ ಸಮಸ್ಯೆಗಳ ಮಧ್ಯೆ ನೂತನ ಶಾಸಕರಿಗೆ ಅಭಿವೃದ್ಧಿ ಮಂಕಾಗದಿರಲಿ ಎಂಬುದು ಸುದ್ದಿವಿಜಯ ವೆಬ್‍ನ್ಯೂಸ್ ಕಳಕಳಿ.

Share this Article
Leave a comment

Leave a Reply

Your email address will not be published. Required fields are marked *

error: Content is protected !!