ಸುದ್ದಿವಿಜಯ, ಜಗಳೂರು: ನೂತನ ಶಾಸಕ ಬಿ.ದೇವೇಂದ್ರಪ್ಪ ತಾವು ಈ ಹಿಂದೆ ಜವಾನರಾಗಿ ಕಾರ್ಯನಿರ್ವಹಿಸುತ್ತಿದ್ದ ಪಟ್ಟಣದ ಅಮರಭಾರತಿ ವಿದ್ಯಾ ಕೇಂದ್ರದಲ್ಲಿ ಗುರುವಾರ ಕಸ ಗುಡಿಸಿ, ಗಂಟೆ ಭಾರಿಸುವ ಮೂಲಕ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಚಾಲನೆ ನೀಡಿದರು.
ಕಾಲೇಜು ಆರಂಭಕ್ಕೂ ಮುನ್ನ 9.40ಕ್ಕೆ ಕಾಲೇಜು ಪ್ರವೇಶಿಸಿದ ಅವರು ಸಂಸ್ಥೆಯ ಕಾರ್ಯದರ್ಶಿ ಮಧು ಅವರ ಕೊಠಡಿಯಲ್ಲಿ ಹಾಜರಿ ಪುಸ್ತಕಕ್ಕೆ ಸಹಿ ಮಾಡಿ, ಸಂಸ್ಥಾಪಕ ವಿದ್ಯಾರತ್ನ ಡಾ.ತಿಪ್ಪೇಸ್ವಾಮಿ ಭಾವ ಚಿತ್ರಕ್ಕೆ ನಮಿಸಿದ ನಂತರ ಜವಾನನ ಖುರ್ಚಿಯಲ್ಲಿ ಕುಳಿತರು. ನಂತರ ಪೊರಕೆ ಹಿಡಿದು ಕಸ ಗುಡಿಸಿದರು. ಕಾಲೇಜಿನ ಬೆಲ್ ಭಾರಿಸಿದ ಅವರು ಅಲ್ಲಿಂದ ರಾಷ್ಟ್ರಗೀತೆ ಮೊಳಗಿತು.
ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನಗೆ ಮಾರ್ಗದರ್ಶಕರಾದ ಹಾಗೂ ಜೀವನ ರೂಪಿಸಿಕೊಟ್ಟ ವಿದ್ಯಾರತ್ನ ಡಾ.ಟಿ.ತಿಪ್ಪೇಸ್ವಾಮಿ ಇಲ್ಲದೇ ಇದ್ದಿದ್ದರೆ ನಾನು ಶಾಸಕನಾಗುತ್ತಿರಲಿಲ್ಲ. ನಾನು ಗುರುವಿನ ಗುಲಾಮ. ಬಡತನದಲ್ಲಿ ಬೆಂದು ಒಂದೊತ್ತಿನ ಊಟಕ್ಕೂ ಗತಿಯಿಲ್ಲದಾಗ ಕಾಲದಲ್ಲಿ ಎಲ್ಲೋ ಓದುತ್ತಿದ್ದ ನನ್ನನ್ನು ತಮ್ಮ ಕಾಲೇಜಿಗೆ ಕರೆಸಿ ಡಿ ದರ್ಜೆಯ ನೌಕರನಾಗಿ ಸೇರಿಸಿಕೊಂಡು 380 ರೂ. ವೇತನ ನೀಡುತ್ತಿದ್ದರು.
ಅವರು ಕಾಲೇಜಿನಲ್ಲಿ ಕೆಲಸ ಕೊಟ್ಟಿದ್ದರಿಂದ ನನ್ನ ಇಬ್ಬರು ಪುತ್ರರಾದ ಕೀರ್ತಿಕುಮಾರ್, ವಿಜಯ್ ಕುಮಾರ್ ಉತ್ತಮ ವ್ಯಾಸಂಗ ಮಾಡಿದರು. ಸಣ್ಣ ಮಗ ಎಂಬಿಬಿಎಸ್ ಮುಗಿಸಿ ಐಆರ್ ಎಸ್ ಪರೀಕ್ಷೆಯಲ್ಲಿ ಪಾಸ್ ಮಾಡಲು ತಿಪ್ಪೇಸ್ವಾಮಿ ಅವರೇ ಕಾರಣ. ನನ್ನ ಮಕ್ಕಳ ಶಾಲಾ ಶುಲ್ಕ ಕಟ್ಟಿಸಿಕೊಳ್ಳದೇ ಓದಿಸಿದರು. ಅವರ ಋಣ ನನ್ನ ಮೇಲಿದೆ. ಅವರು ಕೊಟ್ಟ ಭಿಕ್ಷೆಯಿಂದಲೇ ನಾನು ಈ ಮಟ್ಟಕ್ಕೆ ಬೆಳೆದೆ. ತಿಪ್ಪೇಸ್ವಾಮಿ ಅವರ ಪುತ್ರ ಮಧು ಅವರು ತಿಪ್ಪೇಸ್ವಾಮಿ ಹಾದಿಯಲ್ಲೇ ಬೆಳೆಯುತ್ತಿದ್ದಾರೆ ಎಂದು ಸ್ಮರಿಸಿಕೊಂಡರು.
ಅಧಿಕಾರಿಗಳಿಂದ ಮುಲಾಜಿಲ್ಲದೇ ಕೆಲಸ ಮಾಡಿಸುವೆ
ಕ್ಷೇತ್ರದ ಅಭಿವೃದ್ಧಿಗೆ ಮುಲಾಜಿಲ್ಲದೆ, ಮರ್ಜಿಗೆ ಒಳಗಾದೇ ಅಧಿಕಾರಿಗಳಿಂದ ಕೆಲಸ ಮಾಡಿಸುವೆ. ಜನ ನನಗೆ ಕ್ಷೇತ್ರದ ಕಸ ಗುಡಿಸುವ ಅವಕಾಶ ಕೊಟ್ಟಿದ್ದಾರೆ. ನಾನು ಮಲಗಲ್ಲ, ಅಧಿಕಾರಿಗಳನ್ನು ಕಚೇರಿಯಲ್ಲಿ ಮಲಗಲು ಬಿಡಲ್ಲ ಎಂದು ದೇವೇಂದ್ರಪ್ಪ ಸೂಚ್ಯವಾಗಿ ನುಡಿದರು.
ಅಧಿಕಾರಿಗಳು ಹೃದಯ ತುಂಬಿ ಕೆಲಸ ಮಾಡಬೇಕು. ಕೆಲಸ ಮಾಡದ ಅಧಿಕಾರಿಗಳಿಂದ ಹೇಗೆ ಕೆಲಸ ಮಾಡಿಸಬೇಕು ಎಂಬುದು ನನಗೆ ಗೊತ್ತು. ಭಯ ಮುಕ್ತ ಆಡಳಿತ ನೀಡಿ, ಸರಕಾರದ ಸವಲತ್ತುಗಳನ್ನು ಜನತೆಗೆ ತಲುಪಿಸುತ್ತೇನೆ ಎಂದರು.
ಅಮರಭಾರತಿ ವಿದ್ಯಾಕೇಂದ್ರದ ಕಾರ್ಯದರ್ಶಿ ಮಧು ಮಾತನಾಡಿ, ನಮ್ಮ ಕಾಲೇಜಿನಲ್ಲಿ ಓದಿದ ಅನೇಕರು ಕೇವಲ ಎಂಜಿನಿಯರ್, ಡಾಕ್ಟರ್‍ಗಳಾಗದೇ ಆಡಳಿತ ವ್ಯವಸ್ಥೆ ಬದಲಿಸುವಂತಹ ಜನಪ್ರತಿನಿಧಿಗಳಾಗಿದ್ದಾರೆ. ಅದರಲ್ಲಿ ಶಾಸಕರಾದ ದೇವೇಂದ್ರಪ್ಪ ನಮ್ಮ ಕಾಲೇಜಿಗೆ ಗೌರವ ತರುವಂತಹ ಹುದ್ದೆ ಅಲಂಕರಿಸಿದ್ದಾರೆ.
ಅವರೆ ನಮ್ಮೆಲ್ಲರಿಗೂ ಪ್ರೇರಣೆ. ಶಾಸಕರು ಹೊಗಳು ಬಟ್ಟರ ಮಾತು ಕೇಳದೇ ಇದ್ದರೆ ಒಳ್ಳೆಯದು. ಕ್ಷೇತ್ರದಲ್ಲಿ ಅಪ್ಪರ್ ಭದ್ರಾ ಮತ್ತು 57 ಕೆರೆ ತುಂಬಸುವ ಯೋಜನೆಗಳು ತ್ವರಿತವಾಗಿ ಪೂರ್ಣಗೊಳ್ಳಲಿ. ಶಾಲಾ ಕಾಲೇಜು, ರಸ್ತೆ, ನೀರು ಮೂಲಸೌಕರ್ಯಕ್ಕೆ ಹೆಚ್ಚು ಒತ್ತು ಕೊಡಲಿ. ಅಧಿಕಾರ ಶಾಶ್ವತವಲ್ಲ. ನೀವು ಮಾಡಿರುವ ಕೆಲಸಗಳು ಶಾಶ್ವತವಾಗಿ ಇರಲಿ ಎಂದು ಸಲಹೆ ನೀಡಿದರು.
ನಾನು ರೌಡಿಯಲ್ಲ ಜನಸೇವಕ
ಚುನಾವಣೆಯಲ್ಲಿ ಸಂದರ್ಭದಲ್ಲಿ ನನ್ನನ್ನು ರೌಡಿ ಎಂದು ಕೆಲವರು ಅಪಪ್ರಚಾರ ಮಾಡಿದರು. ನಾನು ರೌಡಿಯಾಗಿದ್ದರೆ ನನ್ನನ್ನು ಜನ ಗೆಲ್ಲಿಸುತ್ತಿದ್ದರೆ. ಜನ ಸೇವೆಯೇ ಜನಾರ್ಧನನ ಸೇವೆ ಎಂದು ನಂಬಿದ್ದೇನೆ. ರೌಡಿ ಎಂದು ಬಿಂಬಿಸಿದ ಅನೇಕರಿಗೆ ಇದು ಅರ್ಥವಾಗಲಿ. ನನಗೆ ಜನಪ್ರಿಯ ಶಾಸಕ ಎಂಬ ಬಿರುದು ಬೇಡ. ಐದು ವರ್ಷ ಪೂರೈಸಿದ ನಂತರ ಕೆಲಸ ನೋಡಿದ ನಂತರ ಜನಪ್ರಿಯ ಶಾಸಕ ಎಂಬ ಬಿರುದುಕೊಡಿ.
ನಿಮ್ಮ ಕೆಲಸ ಮಾಡಿಸಿಕೊಳ್ಳಲು ನನ್ನನ್ನು ಜನಪ್ರಿಯ ಎಂದು ಕರೆಯಬೇಡಿ. ನಾನು ಯಾರನ್ನೂ ದ್ವೇಷಿಸುವುದಿಲ್ಲ. ನನ್ನ ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಟೀಕಿಸುವವರಿಗೆ ಶಾಸಕ ದೇವೇಂದ್ರಪ್ಪ ಮಾತಿನ ಚಾಟಿ ಬೀಸಿದರು.
ಈ ವೇಳೆ ತಹಶಿಲ್ದಾರ್ ಜಿ.ಸಂತೋಷ್ ಕುಮಾರ್, ಕೆಪಿಸಿಸಿ ತಾಲೂಕು ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್, ಕೃಷ್ಣ ಮೂರ್ತಿ, ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್, ಸಿ.ತಿಪ್ಪೇಸ್ವಾಮಿ, ಲುಕ್ಮಾನ್‍ಉಲ್ಲಾಖಾನ್, ತೋರಣಗಟ್ಟೆ ಜೀವಣ್ಣ, ಕೆಚ್ಚೇನಹಳ್ಳಿ ಶಿವಣ್ಣ, ಚೌಡಪ್ಪ, ಎನ್.ಟಿ. ಎರ್ರಿಸ್ವಾಮಿ, ಶಕೀಲ್ ಅಹಮದ್, ಪಲ್ಲಾಗಟ್ಟೆ ಶೇಖರಪ್ಪ, ಎ.ಪಿ.ಪಾಲಯ್ಯ,ನಿವೃತ್ತ ಪ್ರಾಂಶುಪಾಲ ಪ್ರಭಾಕರ್ ಲಕ್ಕೋಳ್ ಸೇರಿದಂತೆ ಅನೇಕರು ಇದ್ದರು.