ಸುದ್ದಿವಿಜಯ, ಜಗಳೂರು: ರಾಜಕೀಯ ರಂಗ ಪ್ರವೇಶಕ್ಕೂ ಮುನ್ನ ನೂತನ ಶಾಸಕ ಬಿ.ದೇವೇಂದ್ರಪ್ಪ ತಮ್ಮ ಕರ್ಮಭೂಮಿ ಎಂದೇ ನಂಬಿದ್ದ ಪಟ್ಟಣದ ನಾಲಂದ ಪದವಿಪೂರ್ವ ಕಾಲೇಜಿನಲ್ಲಿ ಡಿ.ದರ್ಜೆ ನೌಕರರಾಗಿ ಸೇವೆ ಸಲ್ಲಿಸಿದ್ದರು.
‘ಕಾಯಕವೇ ಕೈಲಾಸ’ ಎಂಬ ಬಸವಣ್ಣನವರ ತತ್ವದಂತೆ ‘ವಿದ್ಯಾರತ್ನ’ ದಿವಂಗತ.ಟಿ.ತಿಪ್ಪೇಸ್ವಾಮಿ ಅವರ ಹಾದಿಯಲ್ಲೇ ಸಾಗಿ ಬಂದ ಬಿ.ದೇವೇಂದ್ರಪ್ಪ ಅವರಿಗೆ ಕರ್ಮಭೂಮಿ ಕಾಲೇಜಾಗಿತ್ತು.
ನಿತ್ಯ ಕಾಲೇಜು ಕೊಠಡಿಗಳ ಕಸ ಸ್ವಚ್ಛಗೊಳಿಸಿ, ಗಂಟೆ ಭಾರಿಸಿ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅವಕಾಶ ಮಾಡಿಕೊಡುತ್ತಿದ್ದರು. ನಿಷ್ಠೆ, ಕಾಯಕ ಮನುಷ್ಯನನ್ನು ಉತ್ತುಂಗಕ್ಕೇರಿಸುತ್ತದೆ ಎಂಬುದಕ್ಕೆ ಈಗಿನ ಶಾಸಕರಾದ ಬಿ.ದೇವೇಂದ್ರಪ್ಪ ಅವರೇ ಸಾಕ್ಷಿ.
ಸತತ 34 ವರ್ಷಗಳ ನಿರಂತರ ಸೇವೆ ಸಲ್ಲಿಸಿದ ನಂತರ ಸ್ವಯಂ ನಿವೃತ್ತಿ ಪಡೆದು ಸಮಾಜ ಸೇವಕರಾಗಿ ಸೇವೆಸಲ್ಲಿಸಿದರು ಎಂದರೆ ಅದು ಬಿ.ದೇವೇಂದ್ರಪ್ಪ. ಕೋವಿಡ್ ಸಮಯದಲ್ಲಿ ಕ್ಷೇತ್ರದ ಜನತೆಗೆ ತಮ್ಮ ಕೈಲಾದ ಮಟ್ಟಿಗೆ ಸಹಾಯ ಹಸ್ತ ಚಾಚಿದ್ದರು.
ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪ್ರಸ್ತುತ ನೂತನ ಶಾಸಕರಾಗಿ ಆಯ್ಕೆಯಾಗಿ ಕೇವಲ 17 ದಿನಗಳಷ್ಟೇ ಪೂರೈಸಿದ್ದಾರೆ. ವಿಧಾನ ಸಭೆಯಲ್ಲಿ ಪ್ರಮಾವಣವನ ಸ್ವೀಕರಿಸಿ ಬಂದ ನಂತರ ಕ್ಷೇತ್ರದ ಅಭಿವೃದ್ಧಿಗೆ ಸಿದ್ಧರಾಗುತ್ತಿದ್ದಾರೆ.
ಕಸಗುಡಿಸುವ ಮೂಲಕ ತಮ್ಮ ಕಾಯಕಕ್ಕೆ ಚಾಲನೆ:
ನೂತನ ಶಾಸಕ ದೇವೇಂದ್ರಪ್ಪ ಅವರು ಜೂನ್1 ರಂದು ಗುರುವಾರ ಬೆಳಿಗ್ಗೆ 9.30ಕ್ಕೆ ಪಟ್ಟಣದ ನಾಲಂದ ಕಾಲೇಜು ಆರಂಭವನ್ನು ಗೇಟಿನ ಬೀಗ ತೆಗೆದು, ಕೊಠಡಿಗಳಲ್ಲಿ ಕಸ ಗುಡಿಸಿ, ಸಿಬ್ಬಂದಿಗೆ ಟೀ-ಕಾಫಿ ಕೊಡುವ ಮೂಲಕ ತಮ್ಮ ಮೂಲ ಕಾಯಕ ಸ್ಮರಿಸಿ ಕ್ಷೇತ್ರದಲ್ಲಿ ಕಾಯಕಕ್ಕೆ ತಾವು ಸಿದ್ದರಾಗುವುದಾಗಿ ತಿಳಿಸಿದ್ದಾರೆ.
ನಾಲಂದ ಕಾಲೇಜಿನಲ್ಲಿ ರಾಷ್ಟ್ರಗೀತೆ ಮುಗಿಸಿದ ನಂತರ ಪಾದಯಾತ್ರೆ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಲಿದ್ದಾರೆ. ಅಲ್ಲಿಂದ ನೇರವಾಗಿ ಸಾರ್ವಜನಿಕರ ಆಸ್ಪತ್ರೆಗೆ ತೆರಳಿ ಸ್ವಚ್ಛತೆ ವೀಕ್ಷಿಸಿ ನಂತರ ರೋಗಿಗಳ ಆರೋಗ್ಯವಿಚಾರಿಸಲಿದ್ದಾರೆ.
ನಂತರ ಪಶುಸಂಗೋಪನೆ ಇಲಾಖೆ, ಪೊಲೀಸ್ ಠಾಣೆಗೆ ಭೇಟಿ ನೀಡಿದ ನಂತರ ಬಿದರಕೆರೆ ಗ್ರಾಮಕ್ಕೆ ತೆರಳಿ ‘ಬಿದರಕೆರೆ ಅಮೃತ ರೈತ ಉತ್ಪಾದಕ ಕಂಪನಿ’ ಉದ್ಘಾಟಿಸಲಿದ್ದಾರೆ.