ವರದಿ ಮಂಡಿಸುವಾಗ ಶಾಸಕ ಬಿ.ದೇವೇಂದ್ರಪ್ಪ ಅಧಿಕಾರಿಗಳಿಗೆ ಏನು ಹೇಳಿದ್ರು ಗೊತ್ತಾ?

Suddivijaya
Suddivijaya June 2, 2023
Updated 2023/06/02 at 1:12 PM

ಸುದ್ದಿವಿಜಯ, ಜಗಳೂರು: ನನಗೆ ಕ್ಷೇತ್ರದ ಅಭಿವೃದ್ಧಿಯಾಗಬೇಕು ಅಷ್ಟೇ. ಅದಕ್ಕೆ ನೀವು ಹೇಗೆ ಸ್ಪಂದಿಸುತ್ತೀರಾ ಎಂಬುದು ಮುಖ್ಯ. ನಾನು ಮಡ್ಡು ಹಿಡಿತದವನು ಎಂದು ಮಾತಿನಲ್ಲೇ ಅಧಿಕಾರಿಗಳಿಗೆ ನೂತನ ಶಾಸಕ ಬಿ.ದೇವೇಂದ್ರಪ್ಪ ಎಚ್ಚರಿಕೆ ನೀಡಿದರು.

ವೇದಿಕೆ ಕಾರ್ಯಕ್ರಮದ ನಂತರ ಇಲಾಖಾವಾರು ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿ ಮುನ್ನೋಟದ ಬಗ್ಗೆ ವರದಿ ಮಂಡಿಸಿದರು. ಮೊದಲಿಗೆ ಕೃಷಿ ಇಲಾಖೆಯ ಎಡಿಎ ಮಿಥುನ್ ಕಿಮಾವತ್ ವರದಿ ಮಂಡಿಸಿದರು.

ಕ್ಷೇತ್ರದಲ್ಲಿ ಮೂರು ರೈತ ಸಂಪರ್ಕ ಕೇಂದ್ರಗಳಿವೆ. ಮಧ್ಯಮ ಮತ್ತು ಒಣ ಭೂಮಿ ಹೆಚ್ಚಿದೆ. ವಾರ್ಷಿಕ ಸರಾಸರಿ 529 ಮಿಮೀ ಮಳೆಯಾಗುತ್ತದೆ. ಈ ಬಾರಿ ಜೂನ 1ರವರೆಗೆ 69 ಮಿ.ಮೀ ಮಳೆಯಾಗಿದೆ. 90567 ಒಟ್ಟು ಭೂ ಪ್ರದೇಶವಿದ್ದು.

ಅದರಲ್ಲಿ ಕೃಷಿ ಇಲಾಖೆ ವ್ಯಾಪ್ತಿಗೆ ಸಂಬಂಧಿಸಿದಂತೆ 52 ಸಾವಿರ ಹೆಕ್ಟೇರ್ ಬಿತ್ತನೆಯಾಗುತ್ತದೆ. ಈಗಾಗಲೇ ಪೂರ್ವ ಮುಂಗಾರಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಗೊಬ್ಬರ, ಬಿತ್ತನೆ ಬೀಜ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಅದಕ್ಕೆ ಶಾಸಕರು, ಬೇಡಿಕೆ ಮತ್ತು ಲಭ್ಯತೆಗೆ ಸಾಕಷ್ಟು ಅಂತರವಿದೆ. ಬೇಡಿಕೆಗಳನ್ನು ನಮಗೆ ತಿಳಿಸಿದರೆ ಸರಕಾರದ ಗಮನಕ್ಕೆ ತಂದು ಈಡೇರಿಸುವ ಕೆಲಸ ಮಾಡುತ್ತೇನೆ. ಏಜೆನ್ಸಿಗಳ ಬಗ್ಗೆ ಎಚ್ಚರವಿರಲಿ ಎಂದು ಸೂಚಿಸಿದರು.

ತೋಟಗಾರಿಕೆ ಇಲಾಖೆ ತಾಂತ್ರಿಕ ಸಹಾಯಕ ಅರುಣ್ ಸಭೆಯಲ್ಲಿ ಇಲಾಖೆಯ ಅಭಿವೃದ್ಧಿಯ ಬಗ್ಗೆ ವರದಿ ಮಂಡಿಸಿದರು. ಹನಿ ನೀರಾವರಿಗೆ ಸಂಬಂಧಿಸಿದಂತೆ ಸಬ್ಸಿಡಿ ನೀಡುವಾಗ ಏಜೆನ್ಸಿಗಳ ಬಗ್ಗೆ ರೈತರಿಗೆ ತಿಳಿಸಿ.

ಅನುಮೋದನೆ ಇಲ್ಲದ ಕಂಪನಿಗಳಿಂದ ರೈತರು ಸಮಸ್ಯೆ ಅನುಭವಿಸಬಾರದು. ಬಿರುಗಾಳಿ ಸಹಿತ ಮಳೆಯಿಂದ ಕ್ಷೇತ್ರದಲ್ಲಿ 114 ಎಕೆರೆ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ. ಹಾನಿಗೊಳಗಾದ ರೈತರ ಹೊಲಗಳಿಗೆ ಭೇಟಿ ಕೊಟ್ಟು ಪರಿಹಾರ ನೀಡಲು ಕ್ರಮ ಕೈಗೊಳ್ಳಿ ಎಂದು ಶಾಸಕರು ಸೂಚಿಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಸಾದೀಕ್ ಉಲ್ಲ ವರದಿ ಮಂಡಿಸಿದರು. ಆಗ ಶಾಸಕರು ಕ್ಷೇತ್ರದಲ್ಲಿ ಶುದ್ಧಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿವೆ ಎಂದು ತಿಳಿದು ಬಂದಿದೆ. ಜನರಿಗೆ ಬೇಕಾಗಿರುವುದು ನೀರು. ಅದನ್ನು ತಕ್ಷಣ ಸರಿ ಪಡಿಸಿ ಸುಮ್ಮನೆ ಕೂರಬೇಡಿ ಎಂದು ಎಚ್ಚರಿಸಿದರು.

ರೇಷ್ಮೆ ಇಲಾಖೆ ಅಧಿಕಾರಿ ಬಾಲಸುಬ್ರಹ್ಮಣ್ಯ ಜೋಯಿಸಾ, ಇಲಾಖೆಯಲ್ಲಿ ಅಧಿಕಾರಿಗಳ ಕೊರತೆಯಿದೆ ಎಂದರು. ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ರೆಡ್ಡಿ, ಪಠ್ಯಪುಸ್ತಕ, ಸಮವಸ್ತ್ರ ವಿತರಣೆ ಮಾಡಲಾಗಿದೆ. ಬೈಸಿಕಲ್ ಸರಬರಾಜು ಆಗಿರುವುದಿಲ್ಲ ಎಂದರು.

ಜಗಳೂರು ಗೊಲ್ಲರಹಟ್ಟಿ ಗ್ರಾಮದ ಸರಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು 3.45ಕ್ಕೆ ಶಾಲೆ ಬೀಗ ಹಾಕಿಕೊಂಡು ಹೋಗಿದ್ದರು. ನಾನೇ ಖುದ್ದು ಪರಿಶೀಲಿಸಿದ್ದೇನೆ. ಶಿಕ್ಷಕರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಅವರಿಗೆ ಸೂಚ್ಯವಾಗಿ ಹೇಳಿ ಎಂದು ಶಾಸಕರು ಎಚ್ಚರಿಸಿದರು.

ಪಶುಸಂಗೋಪನಾ ಇಲಾಖೆ ನಿರ್ದೇಶಕ ಲಿಂಗರಾಜ್, ಅಕ್ಷರ ದಾಸೋಹ ಕಾರ್ಯಕ್ರಮದ ಅಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನೆ ನಿರ್ದೇಶಕ ಬೀರೇಂದ್ರ, ಪಂಚಾಯಿತ್ ರಾಜ್ ಉಪ ವಿಭಾಗದ ಎಇಇ ತಿಪ್ಪೇಶಪ್ಪ, ಪಿಡ್ಲ್ಯೂಡಿ ಎಇ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ಬಿಸಿಎಂ ಇಲಾಖೆ ನಿರ್ದೇಶಕರಾದ ಆಸ್ಮಾಬಾನು, ಅರಣ್ಯ ಇಲಾಖೆ ಆರ್ ಎಫ್‍ಒ ಗಳಾದ ಶ್ರೀನಿವಾಸ್, ಮಹೇಶ್‍ನಾಯ್ಕ್,

ಮೀನುಗಾರಿಕೆ ಇಲಾಖೆ ಅಧಿಕಾರಿ ಮಂಜುನಾಥ್, ಬೆಸ್ಕಾಂ ಎಇಇ ರಾಮಚಂದ್ರಪ್ಪ, ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆ ಮತ್ತು ಪ್ರಗತಿ ಬಗ್ಗೆ ವಿವರಿಸಿದರು. ಅದಕ್ಕೆ ಶಾಸಕರು ಪ್ರಗತಿ ಕಾಮಗಾರಿಗಳ ಪಟ್ಟಿ ಮತ್ತು ಸಮಸ್ಯೆಗಳ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಿದರು.

ಈ ವೇಳೆ ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್, ತಾಪಂ ಇಓ ವೈ.ಎಚ್.ಚಂದ್ರಶೇಖರ್, ಹರಪನಹಳ್ಳಿ ತಹಶೀಲ್ದಾರ್ ಶಿವಕುಮಾರ್, ಹರಪನಹಳ್ಳಿ ಇಒ ಶಿವಪ್ರಕಾಶ್ ನಾಯ್ಕ್ ಸಭೆಯಲ್ಲಿ ಉಪಸ್ಥಿತರಿದ್ದರು.

ಪೊಲೀಸರು ರೌಂಡ್ಸ್ ಮಾಡಬೇಕು

ಪಟ್ಟಣದಲ್ಲಿರುವ ಬಯಲು ರಂಗಮಂದಿರ, ಜೂನಿಯರ್ ಕಾಲೇಜು ಆವರಣ ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿದೆ. ಎಲ್ಲೆಂದರಲ್ಲಿ ಬಾಟಲ್‍ಗಳು ಬಿದ್ದಿವೆ. ಪೊಲೀಸ್ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದೀರಿ. ನಿತ್ಯ ಅಲ್ಲಿ ಪೊಲೀಸರು ರೌಂಡ್ಸ್ ಮಾಡಬೇಕು. ಸಾರ್ವಜನಿಕರು ಓಡಾಡುವಂತಿಲ್ಲ ಎಂದು ಪಿಎಸ್‍ಐ ಸಾಗರ್ ಅವರಿಗೆ ಶಾಸಕ ದೇವೇಂದ್ರಪ್ಪ ಸೂಚನೆ ನೀಡಿದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!