ಸುದ್ದಿವಿಜಯ,ಜಗಳೂರು: ಶಾಸಕ ಬಿ.ದೇವೇಂದ್ರಪ್ಪ ಭಾನುವಾರ ಬೆಳಿಗ್ಗೆ ಪಟ್ಟಣದ ಸಂತೆ ಮೈದಾನದಲ್ಲಿ ಪೌರ ಕಾರ್ಮಿಕರ ಜೊತೆ ಕಸ ಗುಡಿಸಿ ಸ್ವಚ್ಛಗೊಳಿಸಿ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಿದರು.
ಶನಿವಾರ ಸಂತೆ ನಡೆದಿತ್ತು. ಮೈದಾನದಲ್ಲಿ ಕೊಳೆತ ತರಕಾರಿ, ತೆಂಗಿನ ಸಿಪ್ಪೆ ಸೇರಿದಂತೆ ಅನೇಕ ತ್ಯಾಜ್ಯ ಲೋಡುಗಟ್ಟೆಲೆ ಬಿದ್ದಿತ್ತು.
ಬೆಳಗ್ಗೆ ಆರು ಗಂಟೆ ಸುಮಾರಿಗೆ ಆಗಮಿಸಿದ ಶಾಸಕರು ಪೌರ ಕಾರ್ಮಿಕರ ಪೊರಕೆ ಹಿಡಿದು ಕಸ ಗುಡಿಸಿದರು. ಅಲ್ಲದೇ ಸಲಿಕೆ, ಪುಟ್ಟಿ ಹಿಡಿದು ಕಸ ತುಂಬಿ ಅದನ್ನು ತಲೆ ಮೇಲೆ ಹೊತ್ತು ಕಸದ ಗಾಡಿಗೆ ಹಾಕುವ ಮೂಲಕ ಪೌರಕಾರ್ಮಿಕರಿಗೆ ನೆರವಾದರು.
ಈ ವೇಳೆ ಮಾತನಾಡಿದ ಅವರು, ನಮ್ಮ ಪಟ್ಟಣವನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರ ನೆರವಿಗೆ ಸದಾ ಸಿದ್ದನಿದ್ದೇನೆ.
ತಿಂಗಳಿಗೊಮ್ಮೆ ಅವರ ಜೊತೆ ಸೇರಿ ಕೆಲಸ ಮಾಡುತ್ತೇನೆ. ಚಳಿಗಾಲದಲ್ಲಿ ಸ್ವೆಟರ್, ಮಳೆಗಾಲದಲ್ಲಿ ಜರ್ಕೀನ್, ದಸರಾ, ಯುಗಾದಿ ವೇಳೆ ಹೊಸ ಬಟ್ಟೆ ಖರೀದಿಸಿ ಕೊಡುತ್ತೇನೆ.
ನನಗೆ ಎರಡು ಲಕ್ಷ ರೂ ವೇತನ ಬರುತ್ತದೆ. ಅದನ್ನು ಅವರ ಅಭಿವೃದ್ಧಿಗಾಗಿ ಬಳಸುತ್ತೇನೆ. ಇರುವ ಪೌರ ಕಾರ್ಮಿಕರನ್ನು ತೆಗೆಯುವಂತಿಲ್ಲ.
ನಿಮ್ಮ ಸ್ವಾರ್ಥಕ್ಕಾಗಿ ಅವರನ್ನು ಕೆಲಸದಿಂದ ಬಿಡಿಸಬೇಡಿ. ಏನೇ ಒತ್ತಡವಿದ್ದರೂ ನನ್ನ ಬಳಿ ಹಂಚಿಕೊಳ್ಳಿ ಎಂದು ಅಭಯ ನೀಡಿದರು.