ಸುದ್ದಿವಿಜಯ, ಜಗಳೂರು: ತಾಲ್ಲೂಕಿನ ಬಿದರಕೆರೆ, ಸಂತೆಮುದ್ದಾಪುರ ಗ್ರಾಮಗಳ ಮಧ್ಯೆಯಿರುವ ಬೇಡಿ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗದಲ್ಲಿರುವ ಬಸವಣ್ಣ ದೇವಸ್ಥಾನದ ಬಸವಣ್ಣನ ಮೂರ್ತಿಯನ್ನು ಕಿತ್ತು ನಿಧಿಗಾಗಿ ಶೋಧನೆ ಮಾಡುತ್ತಿದ್ದ ದರೋಡೆ ಕೋರರನ್ನು ಜಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯ ವಿವರ:
ಶನಿವಾರ ಮಧ್ಯರಾತ್ರಿ ದೇವಸ್ಥಾನದಲ್ಲಿರುವ ಮೂರ್ತಿಯ ಕೆಳಗೆ ನಿಧಿ ಇದೆ ಎಂದು ಮೂರ್ತಿ ಕಿತ್ತು ಶೋಧಿಸಿ ವಾಪಾಸ್ ಬರುತ್ತಿರುವಾಗ ಸಬ್‍ಇನ್‍ಸ್ಪೆಕ್ಟರ್ ಎಸ್.ಡಿ.ಸಾಗರ್ ಅವರಿಗೆ ಸಿಕ್ಕಿಬಿದ್ದಿದ್ದಾರೆ. ಸಬ್ ಇನ್‍ಸ್ಪೆಕ್ಟರ್ ನೈಟ್ ರೌಂಡ್ಸ್‍ನಲ್ಲಿದ್ದಾಗ ಬೆಳಗಿನ ಜಾವ 3.30ರ ವೇಳೆಗೆ ಲಿಂಗಣ್ಣನಹಳ್ಳಿ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಇಬ್ಬರು ಕಾರಿನ ಮುಂದೆ ನಿಂತಿದ್ದರು.
ಪೊಲೀಸ್ ಜೀಪ್ ನೋಡುತ್ತಿದ್ದಂತೆ ಓಡಿ ಹೋಗಲು ಪ್ರಯತ್ನಿಸಿದ್ದು ಅವರನ್ನು ಪೊಲೀಸ್ ಸಿಬ್ಬಂದಿ ಬೆನ್ನುಹತ್ತಿ ಹಿಡಿದ್ದಾರೆ. ಹಿಡಿದು ತಂದಾಗ ಕಾರಿನಲ್ಲಿ ಇನ್ನು ನಾಲ್ವರು ಅಡಗಿ ಕುಳಿತಿದ್ದು ಪರಾರಿಯಾಗಲು ಯತ್ನಿಸುತ್ತಿದ್ದರು.
ಬಂಧಿತರನ್ನು ಜಗಳೂರು ಪಟ್ಟಣದ ಪಿ.ಕಲ್ಲೇಶ್, ದಾವಣಗೆರೆಯ ಅಜಾದ್ ನಗರದ ದಿವಾನ್‍ಸಾಬ್ ಜಾವೀದ್, ಹುಬ್ಬಳ್ಳಿಯ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲೇಶಿ, ಹುಬ್ಬಳ್ಳಿ ನಗರದ ಹುನುಮಂತ ಸೋಪಾನಿ ಪವರ್, ಹುಬ್ಬಳ್ಳಿಯ ಅಮೀರ್ ಖಾನ್ ಪಠಾಣ್, ಇಳಕಲ್ ಪಟ್ಟಣದ ಮುರ್ತಾಜಾಸಾಬ್ ಎಂದು ತಿಳಿದು ಬಂದಿದೆ.
ಆರೋಪಿಗಳಿಂದ ಕಬ್ಬಿಣದ ಸುತ್ತಿಗೆ, ಹ್ಯಾಂಡ್‍ಗ್ಲೌಸ್, ಕಟ್ಟಿಂಗ್ ಪ್ಲೇಯರ್, ಪಟಾಕಿ, ಪ್ಲಾಸ್ಟಿಕ್ ಹಗ್ಗ, ಎರಡು ಖಾರದ ಪುಡಿ ಪ್ಯಾಕೇಟ್, ನಿಧಿ ಶೋಧಕ್ಕೆ ಬಳಕೆಯಾಗಿದ್ದ ಬಿಳಿ ಬಣ್ಣದ ಕಾರು, ಮೂರು ಮೊಬೈಲ್, ಎರಡು ಸಾವಿರ ಹಣ, ರೇಡಿಯಂ ಕಟ್ಟರ್ ಚಾಕು ಸೇರಿದಂತೆ ಅನೇಕ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಆರೋಪಿಗಳಿಗೆ ಐಪಿಸಿ ಸೆಕ್ಷನ್ 399, 402 ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಇನ್‍ಸ್ಪೆಕ್ಟರ್ ಎಂ.ಶ್ರೀನಿವಾಸ್‍ರಾವ್, ಸಬ್‍ಇನ್‍ಸ್ಪೆಕ್ಟರ್ ಎಸ್.ಡಿ.ಸಾಗರ್, ಸಿಬ್ಬಂದಿಗಳಾದ ಆರ್.ನಾಗಭೂಷಣ್, ಪಂಪಾನಾಯ್ಕ್, ಬಸವಂತಪ್ಪ, ಮಾರೆಪ್ಪ, ಬಸವರಾಜ್, ದಿನೇಶ್, ಚಂದ್ರಶೇಖರ್, ರಾಜಪ್ಪ, ನಾಗರಾಜ್, ಗಿರೀಶ್ ಅವರ ಕಾರ್ಯಕ್ಕೆ ಎಸ್‍ಪಿ ಡಾ.ಕೆ.ಅರುಣ್ ಮತ್ತು ಎಎಸ್‍ಪಿ ಆರ್.ಬಸರಗಿ, ಗ್ರಾಮಾಂತರ ಉಪವಿಭಾಗದ ಎಎಸ್‍ಪಿ ಕನ್ನಿಕಾಸಕ್ರಿವಾಲ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.