ಸುದ್ದಿವಿಜಯ, ಜಗಳೂರು: ಪಟ್ಟಣದ ಎನ್‍ಎಂಕೆ ಶಾಲೆಯ ಮಕ್ಕಳಾದ ಕೆ.ಎಂ.ಪ್ರಜ್ವಲ್ ಕಟ್ಟಿಗೆಹಳ್ಳಿ ಮಠ ಮತ್ತು ಯು.ಜಿ.ಪ್ರವೀಣ್‍ಕುಮಾರ್ ಅವರಿಗೆ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಜಿಲ್ಲಾ ಪ್ರಶಸ್ತಿಯಲ್ಲಿ ಪ್ರಥಮ ಬಹುಮಾನ ಲಭ್ಯವಾಗಿದೆ ಎಂದು ಶಾಲೆಯ ಮುಖ್ಯ ಶಿಕ್ಷಕ ಅಹಮದ್ ತಿಳಿಸಿದರು.
ಪಟ್ಟಣದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಪರಿಸರ ವ್ಯವಸ್ಥೆ ಅರ್ಥಮಾಡಿಕೊಳ್ಳೋಣ, ನಮ್ಮ ಪರಿಸರ ವ್ಯವಸ್ಥೆ ಉಳಿಸೋಣ’ ಎಂಬ ವಿಷಯದಲ್ಲಿ ‘ನೈಸರ್ಗಿಕ ಬೇಲಿಯು ಕೃತಕ ಬೇಲಿಗಿಂತ ಉತ್ತಮ’ ಎಂಬ ವಿಷಯ ಮಂಡಿಸಿದ್ದಕ್ಕೆ ಈ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
7ನೇ ತರಗತಿ ವಿದ್ಯಾರ್ಥಿಗಳಾದ ಕೆ.ಎಂ.ಪ್ರಜ್ವಲ್ ಕಟ್ಟಿಗೆಹಳ್ಳಿ ಮಠ ಮತ್ತು ಯು.ಜಿ.ಪ್ರವೀಣ್‍ಕುಮಾರ್ ಅವರಿಗೆ ಜಿಲ್ಲಾ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಪ್ರಥಮ ಸ್ಥಾನ ಲಭ್ಯವಾಗಿದೆ.ಕಳೆದ ಡಿ.16 ರಂದು ಆನಗೋಡು ಗ್ರಾಮದಲ್ಲಿ ಈ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಆಯ್ಕೆಯಾಗಿರುವ ಇಬ್ಬರು ವಿದ್ಯಾರ್ಥಿಗಳು ಕೊಪ್ಪಳದಲ್ಲಿ ನಡೆಯಲಿರುವ ರಾಜ್ಯಮಟ್ಟದ ವಿಜ್ಞಾನ ಸಮಾವೇಶಕ್ಕೆ ಆಯ್ಕೆಯಾಗಿರುವುದು ಶಾಲೆಯ ಗೌರವವನ್ನು ರಾಜ್ಯಮಟ್ಟಕ್ಕೆ ಕೊಂಡೊಯ್ದಿರುವುದು ಖುಷಿ ತಂದಿದೆ ಎಂದರು.
ಪ್ರಥಮ ಪ್ರಶಸ್ತಿ ಪಡೆದ ಕೆ.ಎಂ.ಪ್ರಜ್ವಲ್ ಕಟ್ಟಿಗೆಹಳ್ಳಿ ಮಠ ಮಾತನಾಡಿ, ನಮ್ಮ ಶಾಲೆಯ ಪ್ರಧಾನ ಕಾರ್ಯದರ್ಶಿ ಎನ್.ಎಂ.ಲೋಕೇಶ್ ಮತ್ತು ಮುಖ್ಯ ಶಿಕ್ಷಕರಾದ ಅಹಮದ್, ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜಪ್ಪ ಮತ್ತು ವಿಜ್ಞಾನ ಶಿಕ್ಷಕಿ ಶಶಿಕಲಾ ಮಾರ್ಗ ದರ್ಶನದಲ್ಲಿ ಕೃತಕ ಬೇಲಿಯಿಂದ ಪರಿಸರದ ಮೇಲೆ ಆಗುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ವಿಷಯ ಮಂಡಿಸಿದ್ದಕ್ಕೆ ಈ ಪ್ರಶಸ್ತಿ ಲಭ್ಯವಾಗಿದೆ. ಎಲ್ಲರಿಗೂ ಅಭಿನಂದನೆಗಳು ಎಂದರು.