suddivijaya22/05/2024
ಸುದ್ದಿವಿಜಯ, ಜಗಳೂರು: ಕೂಲಿಕಾರರು ಪ್ರಾಮಾಣಿಕತೆಯಿಂದ ಕೆಲಸ ಮಾಡಿ ನರೇಗಾ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಾ.ಪಂ ನರೇಗಾ ಸಹಾಯಕ ನಿರ್ದೇಶಕ ಬೋರಯ್ಯ ಹೇಳಿದರು.
ತೋರಣಗಟ್ಟೆ ಗ್ರಾಪಂ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ನರೇಗಾ ಕೂಲಿಕಾರರ ಸಭೆಯಲ್ಲಿ ಮಾತನಾಡಿದರು.
ಮೇ. 18ರಂದು ಕೂಲಿ ಕೆಲಸಕ್ಕೆ ಪೂರ್ಣ ಪ್ರಮಾಣದಲ್ಲಿ ಹಣ ಪಾವತಿ ಮಾಡದೇ ಗ್ರಾ.ಪಂ ಅಧಿಕಾರಿಗಳು ಅನ್ಯಾಯ ಮಾಡುತ್ತಿದ್ದಾರೆ ಎಂದು ಪ್ರತಿಭಟನೆ ಮಾಡಲಾಗಿತ್ತು.
ಈ ಸುದ್ದಿ ಸುದ್ದಿವಿಜಯ ವೆಬ್‍ನ್ಯೂಸ್‍ನಲ್ಲಿ ಪ್ರಕಟವಾಗಿತ್ತು. ಹಾಗಾಗಿ ಏನೆ ಸಮಸ್ಯೆಗಳಿದ್ದರು ನಮ್ಮ ಗಮನಕ್ಕೆ ತನ್ನಿ ಪರಿಹರಿಸುವ ಕೆಲಸ ಮಾಡುತ್ತೇವೆ ಎಂದು ಸಲಹೆ ನೀಡಿದರು.
ಕೆರೆಯಲ್ಲಿ ಹೂಳೆತ್ತುವ ಕಾಮಗಾರಿಯಲ್ಲಿ ನೂರಾರು ಜನ ಕೆಲಸ ಮಾಡುತ್ತಿದ್ದಾರೆ. ಪಿಡಿಒ, ಎಂಜಿನಿಯರ್ ಗುರುತಿಸಿಕೊಟ್ಟ ಅಳತೆಯಂತೆ ಕೆಲಸ ಮಾಡಿದರೆ ನಿತ್ಯ 349 ರೂ ಹಣ ಸಿಗುತ್ತದೆ.
ಆದರೆ ಕೆಲವರು ನಿಗದಿಪಡಿಸಿದ ಕೆಲಸವನ್ನು ಮಾಡದೇ ಅರ್ಧಕ್ಕೆ ಮನೆಗೆ ಹೋದರೆ ಪೂರ್ತಿ ಹಣ ಕೊಡಲು ಸಾಧ್ಯವಿಲ್ಲ. ಅಧಿಕಾರಿಗಳು ಮತ್ತು ಕೂಲಿಕಾರರು ಹೊಂದಾಣಿಕೆಯಿಂದ ಕೆಲಸ ಮಾಡಿದರೆ ಯಾವುದೇ ಸಮಸ್ಯೆಗಳು ಇರುವುದಿಲ್ಲ ಎಂದರು.
ನರೇಗಾದಲ್ಲಿ ಎಷ್ಟು ಜನ ಕೆಲಸ ಮಾಡಿದರು ತೊಂದರೆ ಇಲ್ಲ, ಗೊಂದಲ ಮಾಡಿಕೊಂಡು ಮತ್ತೊಬ್ಬರ ಮೇಲೆ ಆರೋಪ ಮಾಡುವುದು ಬೇಡ, ಸರಕಾರದಿಂದ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು, ಕುಡಿಯುವ ನೀರು, ನೆರಳಿನ ವ್ಯವಸ್ಥೆ ಮಾಡಲು ಅಧಿಕಾರಿಗೆ ಸೂಚನೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಪಿಡಿಒ ಬಸವರಾಜಯ್ಯ, ಕಾರ್ಯದರ್ಶಿ ಸತೀಶ್, ತಾಂತ್ರಿಕ ಸಂಯೋಜಕ ಪವನ್ ತಾಂತ್ರಿಕ ಸಹಾಯಕ ವೇದಮೂರ್ತಿ ಸೇರಿದಂತೆ ಮತ್ತಿತರರಿದ್ದರು.