ಸುದ್ದಿವಿಜಯ, ಜಗಳೂರು: ರಾಜ್ಯದಲ್ಲಿ ಬರಗಾಲ ಆವರಿಸಿದೆ ಇಂತಹ ಸಂದರ್ಭದಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಕೈ ತುಂಬಾ ಕೆಲಸ ಕೊಡಿ. ಕಾರ್ಮಿಕರಿಗೆ ಅನ್ಯಾಯವಾದರೆ ನಾನು ಸಹಿಸುವುದಿಲ್ಲ ಎಂದು ಶಾಸಕ ಬಿ.ದೇವೇಂದ್ರಪ್ಪ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪಟ್ಟಣದ ಶಾಸಕರ ಜನ ಸಂಪರ್ಕ ಕಚೇರಿ ಆವರಣದಲ್ಲಿ ಗುರುವಾರ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೂಸ್) ಪದಾಧಿಕಾರಿಗಳು ಮನವಿ ಸ್ವೀಕರಿಸಿ ಮಾತನಾಡಿದ ಅವರು, ಕಾರ್ಮಿಕರು ಒಟ್ಟಾಗಿ ಬಂದು ದುಡಿದ ಕೂಲಿ ಹಣವನ್ನು ಕೇಳುತ್ತಿದ್ದಾರೆ.
ಆದರೆ ಕೂಲಿ ಹಣ ಕೊಡಲು ಸತಾಯಿಸುತ್ತಿರುವುದು ಸರಿಯಲ್ಲ. ಬಡವರ ಜೊತೆ ಚಲ್ಲಾಟವಾಡಿದರೆ ನಾನು ಸಹಿಸುವುದಿಲ್ಲ. ಅಣಬೂರು ಸೇರಿದಂತೆ ಅನೇಕ ಗ್ರಾಪಂ ಪಿಡಿಒಗಳು ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ.
ಅಂತಹ ಪಿಡಿಒಗಳ ಸಭೆ ಕರೆದು ಕಾರ್ಮಿಕರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮಗಿಲ್ಲವೇ ಎಂದು ತಾಪಂ ಇಓ ಕೆ.ಟಿ.ಕರಿಬಸಪ್ಪ ಮತ್ತು ನರೇಗಾ ಎಡಿ ವೈ.ಎಚ್.ಚಂದ್ರೇಶಖರ್ ಅವರಿಗೆ ಪ್ರಶ್ನೆ ಮಾಡಿದರು.
ಕಾರ್ಮಿಕರ ಜೀವನದ ಜೊತೆ ಚಲ್ಲಾಟವಾಡಬೇಡಿ. ಅನಗತ್ಯವಾಗಿ ಕೂಲಿ ಕಾರ್ಮಿಕರಿಗೆ ತೊಂದರೆ ಕೊಡಬೇಡಿ. ತಾಂತ್ರಿಕ ಸಮಸ್ಯೆಗಳಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದಲ್ಲವೇ ಎಂದು ಪ್ರಶ್ನಿಸಿದರು.
ಬರದಲ್ಲಿ ಜನ ಸಾಮಾನ್ಯರ ಕಷ್ಟಗಳ ಬಗ್ಗೆ ಪ್ರಜ್ಞೆಯಿಂದ ಕಾರ್ಯನಿರ್ವಹಿಸಿ. ನಿಮಗೆ ಆಗದೇ ಇದ್ದರೆ ಹೇಳಿ ಜಿಪಂ ಸಿಇಒ ಜೊತೆ ಮಾತನಾಡುತ್ತೇನೆ. ತಾಂತ್ರಿಕ ಸಮಸ್ಯೆ ನೆಪವೊಡ್ಡಿ ನರೇಗಾ ಕಾರ್ಮಿಕರಿಗೆ ಅಡ್ಡಿ ಪಡಿಸಿದರೆ ನಾನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಗ್ರಾಕೋಸ್ ತಾಲೂಕು ಕಾರ್ಯದರ್ಶಿ ಪಿ.ಎಸ್.ಸುಧಾ ಮಾತನಾಡಿ, ಪಲ್ಲಾಗಟ್ಟೆ ಗ್ರಾಪಂ ಪಿಡಿಓ ಆಗಿದ್ದ ಶಿಶಿಧರ್ ಪಟೇಲ್ ಇದುವರೆಗೂ ನಿರುದ್ಯೋಗಿ ಭತ್ತೆ ಕೊಟ್ಟಿಲ್ಲ. ಅಷ್ಟೇ ಅಲ್ಲ ಅಣಬೂರು ಪಿಡಿಒ ಓಬಯ್ಯ ಸಹ ನಿರುದ್ಯೋಗಿ ಭತ್ಯೆ ಕೊಡದೇ ಕಾರ್ಮಿಕರಿಗೆ ಸತಾಯಿಸುತ್ತಿದ್ದಾರೆ.ಎನ್ಎಂಆರ್ ಝೀರೋ ಆದರೂ ಪಿಡಿಒಗಳಿಂದ ನಿರುದ್ಯೋಗಿ ಭತ್ತೆ ಕೊಡಬೇಕು. ಆದರೆ ಅಂತಹ ಪಿಡಿಒಗಳ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಹೊಸ ಜಾಬ್ ಕಾರ್ಡ್ ಕೊಡುತ್ತಿಲ್ಲ. ಚಾಲ್ತಿಯಲ್ಲಿರುವ ಜಾಬ್ ಕಾರ್ಡ್ಗಳಿಗೂ ಉದ್ಯೋಗ ಕೊಡುತ್ತಿಲ್ಲ. ಬರದಿಂದ ನಲುಗಿ ಹೋಗಿದ್ದೇವೆ.
ಕೆಲಸ ಕೊಡಬೇಕಾಗುತ್ತದೆ ಎಂದು ಇಲ್ಲಸಲ್ಲದ ತಾಂತ್ರಿಕ ಸಬೂಬು ಹೇಳುತ್ತಿದ್ದಾರೆ. ತಾಪಂ ಇಓ ಮತ್ತು ಸಿಇಓ ಸೇರಿ ಪಿಡಿಒಗಳಿಗೆ ನಿರುದ್ಯೋಗಿ ಭತ್ಯೆ ಶಿಫಾರಸ್ಸು ಮಾಡಬೇಕು ಎಂದು ಆಗ್ರಹಿಸಿದರು.
ಗ್ರಾಕೋಸ್ ಕಾರ್ಯದರ್ಶಿ ಶ್ರುತಿ, ನರೇಗಾ ಹಣ ತಕ್ಷಣ ಕಾರ್ಮಿಕರ ಖಾತೆಗಳಿಗೆ ಜಮಾ ಮಾಡಬೇಕು. ಬರ ಪರಿಹಾರಕ್ಕಾಗಿ ಹೆಚ್ಚುವರಿ 50 ಮಾನವ ದಿನಗಳ ಕೆಲಸವನ್ನು ಒದಗಿಸುವಂತೆ ಆದೇಶ ನೀಡಬೇಕು. ಕಾರ್ಮಿಕರು ಬಿರು ಬಿಸಿಲಿನಲ್ಲಿ ದಿನಕ್ಕೆ ಎರಡು ಸಮಯ ಹಾಜರಾತಿ ಮಾಡಿರುವುದರಿಂದ ಕೆಲಸ ಮುಗಿಸಿದರು ಹಾಜರಾತಿಗಾಗಿ ಕಾಯುವಂತಾಗಿದೆ ಎಂದು ಹೇಳಿದರು.
ಈ ವೇಳೆ ಗ್ರೇಟ್ -2 ತಹಶೀಲ್ದಾರ್ ಮಂಜಾನಂದ, ತಾಪಂ ಇಓ ಕೆ.ಟಿ.ಕರಿಬಸಪ್ಪ, ನರೇಗಾ ಎಡಿ ವೈ.ಎಚ್.ಚಂದ್ರಶೇಖರ್, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಬಿ.ಮಹೇಶ್ವರಪ್ಪ, ಹರಪನಹಳ್ಳಿ ತಾಲೂಕು ಗ್ರಾಕೋಸ್ ಕಾರ್ಯದರ್ಶಿ ಶ್ರುತಿ, ಅಣಬೂರು ಮಹಾಲಕ್ಷ್ಮಿ,
ಅನಸೂಯಮ್ಮ, ಯಲ್ಲಮ್ಮ, ಮರೀಕುಂಟೆ ಹನುಮಂತಪ್ಪ, ನಾಗರಾಜ್, ಮಾದೀಹಳ್ಳಿ ಪರಮೇಶ್ವರಪ್ಪ, ರೇಣುಕಮ್ಮ ಸೇರಿದಂತೆ ನೂರಾರು ಕೂಲಿ ಕಾರ್ಮಿಕರು ಇದ್ದರು.