ಸುದ್ದಿವಿಜಯ, ಜಗಳೂರು: ಕಳೆದ ಏ.23 ರಂದು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಗೊನೆ ಬಿಟ್ಟ ಬಾಳೆ ತೋಟಗಳು ನೆಲಸಮವಾಗಿದ್ದವು.
ಹೀಗಾಗಿ ಮಂಗಳವಾರ ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಡಿ.ಎಚ್.ಪ್ರಭುಶಂಕರ್ ಮತ್ತು ಸಹಾಯಕ ಅಧಿಕಾರಿ ಎಚ್.ಟಿ.ಸುನಿಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನ ಕಟ್ಟಿಗೆಹಳ್ಳಿ, ಸಿದ್ದಮ್ಮನಹಳ್ಳಿ ಗೌರಮ್ಮನಹಳ್ಳಿ, ಭರಮಸಮುದ್ರ, ದೊಣೆಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಏ.23 ರಂದು ಭಾರಿ ಮಳೆಯಿಂದ ಬಾಳೆ ಗಿಡಗಳು ಧರೆಗುರುಳಿದ್ದವು.ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮಕ್ಕೆ ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಪ್ರಭುಶಂಕರ್ ಭೇಟಿ ನೀಡಿ ಬಾಳೆ ಹಾನಿ ಬಗ್ಗೆ ಪರಿಶೀಲನೆ ನಡೆಸಿದರು.
ಹಾನಿಯಾದ ರೈತರು ತಹಶೀಲ್ದಾರ್ ಕಚೇರಿಗೆ ಎನ್‍ಡಿಆರ್‍ಎಫ್ ನಿಯಮಗಳ ಅನುಸಾರ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದರು. ತಹಶೀಲ್ದಾರ್ ಕಚೇರಿಯಿಂದ ಅರ್ಜಿಗಳು ತೋಟಗಾರಿಕಾ ಇಲಾಖೆಗೆ ರವಾನೆಯಾಗಿದ್ದು ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಪ್ರಭುಶಂಕರ್ ಖುದ್ಧ ಸ್ಥಳಕ್ಕೆ ಭೇಟಿ ನೀಡಿ ಹಾನಿಯ ಬಗ್ಗೆ ಮಾಹಿತಿ ಪಡೆದರು.
ತಾಲೂಕಿನಲ್ಲಿ ಒಟ್ಟು 15 ಹೆಕ್ಟೇರ್ ಬಾಳೆ ನಾಶವಾಗಿದ್ದು ಒಟ್ಟು 36 ರೈತರು ಬಾಳೆ ಬೆಳೆ ನಷ್ಟ ಪರಿಹಾರ ನೀಡುವಂತೆ ಅರ್ಜಿ ಸಲ್ಲಿಸಿದ್ದರು.
ತೋಟಗಾರಿಕಾ ಅಧಿಕಾರಿಗಳು ಪರಿಶೀಲಿಸಿದ ವರದಿಯನ್ನು ತಹಶೀಲ್ದಾರ್ ಕಚೇರಿಗೆ ನೀಡಿ ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ಕಟ್ಟಿಗೆಹಳ್ಳಿ ಗ್ರಾಮದ ರೈತರಾದ ಬಸವರಾಜ್, ಸಿದ್ದಮ್ಮ, ರವಿಕುಮಾರ್ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ರೈತರು ಒತ್ತಾಯಿಸಿದ್ದಾರೆ.