suddivijaya/kannadanews/09/06/2023
ಸುದ್ದಿವಿಜಯ, ಜಗಳೂರು: ತಾಲೂಕಿನ ಹಾಲೇಕಲ್ಲು ಗ್ರಾಮದ 130 ವರ್ಷಗಳ ಹಳೆಯದಾದ ಶತಮಾನದ ಸರ್ಕಾರಿ ಶಾಲೆಯೂ ದುಸ್ಥಿತಿಯಲ್ಲಿದ್ದು, ನೂರಾರು ವಿದ್ಯಾರ್ಥಿಗಳು ಅಪಾಯದಲ್ಲಿರುವುದನ್ನು ಅರಿತ ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಅಭಿವೃದ್ದಿ ಸ್ಪರ್ಶ ನೀಡಲು ಜೂ.10ರಂದು ಅಧಿಕಾರಿಗಳ ಮತ್ತು ಗ್ರಾಮಸ್ಥರ ಸಭೆಯನ್ನು ಕರೆದು ಚರ್ಚಿಸಲಿದ್ದಾರೆ.
ಈ ಶಾಲೆ ಶಿಥಿಲಾವಸ್ಥೆಯ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರೂ ಕೂಡ ಹಿಂದಿನ ಶಾಸಕರಾಗಲೀ, ಅಧಿಕಾರಿಗಳಾಗಲೀ ಗಮನಹರಿಸಿದೇ ಮೌನಹಿಸಿದ್ದರು. ಆದರೂ ಶಾಲಾ ಶಿಕ್ಷಕರು ಮಕ್ಕಳನ್ನು ಜಾಗರುಕತೆಯಿಂದ ನೋಡಿಕೊಳ್ಳುತ್ತಿದ್ದರು. ಇದೀಗ ಮಳೆ ಆರಂಭವಾಗಿದ್ದು ಎಲ್ಲರಲ್ಲೂ ಆತಂಕ ಮನೆ ಮಾಡಿತ್ತು.
ಶಾಲೆಯ ಪರಿಸ್ಥಿತಿಯ ಬಗ್ಗೆ ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದಿದ್ದರು. ಕೂಡಲೇ ಶಾಲೆಗೆ ತೆರಳಿ ವಾಸ್ತವ ಸ್ಥಿತಿಯನ್ನು ಅರಿತು ಶಾಲಾ ಕೊಠಡಿ ವಿದ್ಯಾರ್ಥಿಗಳ ಸಂಖ್ಯೆ ಸೇರಿದಂತೆ ಶಾಲೆಯ ಸಂಪೂರ್ಣ ಮಾಹಿತಿ ಪಡೆದುಕೊಂಡರು.
1885ರಲ್ಲಿ ನಿರ್ಮಾಣಗೊಂಡ ಹಾಲೇಕಲ್ಲು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬ್ರಿಟಿಷರ ಕಾಲದ್ದಾಗಿದೆ.
ಶಾಲಾ ಕೊಠಡಿಗಳು ತುಂಬ ಶಿಥಿಲಗೊಂಡಿವೆ. ಗೋಡೆಗಳು ಬಿರುಕು ಬಿಟ್ಟಿವೆ, ಕಿಟಕಿ, ಬಾಗಿಲು ಹಾಳಾಗಿವೆ ಆದರೆ ಅಧಿಕಾರಿಗಳು ಇಂತಹ ಶಾಲೆಗಳ ಅಭಿವೃದ್ದಿಗೆ ಒತ್ತು ನೀಡಬೇಕಿತ್ತು.
ಇಂತಹ ಶಾಲೆಗಳ ಉಳಿವು ಅಗತ್ಯವಾಗಿದೆ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದರು. ಶಾಲೆಗಳ ಅಭಿವೃದ್ದಿಗೆ ಸಂಬಂಧಿಸಿದಂತೆ ಹಾಲೇಕಲ್ಲಿನಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ಶಿಕ್ಷಣ ಇಲಾಖೆ ವ್ಯಾಪ್ತಿಯ ಅಧಿಕಾರಿಗಳನ್ನು ಕರೆದು ಶತಮಾನ ಪೂರೈಸಿದ ಶಾಲೆಗಳ ಅಳಿವು-ಉಳಿವಿನ ಬಗ್ಗೆ ಚರ್ಚಿಸಿ ಉತ್ತಮವಾದ ಪರಿಹಾರವನ್ನು ಕಂಡಕೊಳ್ಳಲು ಸಭೆಯನ್ನು ಹಮ್ಮಕೊಳ್ಳಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.