ಸುದ್ದಿವಿಜಯ, ಜಗಳೂರು: ಉಸಿರಾಟದ ಸಮಸ್ಯೆಗೆ ಚಿಕಿತ್ಸೆಗೆಂದು ತಾಲೂಕಿನ ಸೊಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದ ವ್ಯಕ್ತಿಗೆ ವೈದ್ಯರ ಸೇವೆ ಹಾಗೂ ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದರಿಂದ ಆಕ್ರೋಶಗೊಂಡ ಸಂಬಂಧಿಕರು, ಗ್ರಾಮಸ್ಥರು ಬುಧವಾರ ಆರೋಗ್ಯ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಸೊಕ್ಕೆ ಗ್ರಾಮದ ಹುಸೇನ್ ಸಾಬ್(48) ಅವರಿಗೆ ಮಂಗಳವಾರ ಸಂಜೆ ಹೃದಯಘಾತ ಸಂಭವಿಸಿದೆ. ಕುಟುಂಬದವರು ತಕ್ಷಣವೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ವೈದ್ಯರಿಲ್ಲದೇ ನರ್ಸ್ ಒಬ್ಬರೇ ಕೆಲಸ ಮಾಡಿದ್ದಾರೆ. ಉಸಿರಾಟ ತೊಂದರೆಯಾದಾಗ ಆಕ್ಸಿಜನ್ ಪೂರೈಕೆ ಇಲ್ಲದೇ ಕೊನೆಗೆ ಪ್ರಾಣ ಕಳೆದುಕೊಂಡಿದ್ದಾರೆ.
ಇದರಿಂದ ಅಸಮಾಧಾನಗೊಂಡ ಕುಟುಂಬದವರು ಮತ್ತು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಬುಧವಾರ ಬೆಳಗ್ಗೆ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಮಹಿಳೆಯರು, ಮಕ್ಕಳು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಸೊಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ವ್ಯಕ್ತಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಗ್ಯ ಕೇಂದ್ರಕ್ಕೆ ಮುತ್ತಿಗೆ ಹಾಕಿ, ಬಾಗಿಲು ಮುಚ್ಚಿ ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿದರು.ತಾಲೂಕಿನ ಗಡಿ ಭಾಗದಲ್ಲಿರುವ ಸೊಕ್ಕೆಯೂ ಗ್ರಾಮ ಪಂಚಾಯಿತಿಯ ಕೇಂದ್ರ ಸ್ಥಾನವಾಗಿದೆ. ತಾಲೂಕು ಕೇಂದ್ರದಿಂದ 25 ಕಿ.ಮೀ ದೂರವಿರುವುದರಿಂದ ಆಸ್ಪತ್ರೆ ತುಂಬ ಅವಶ್ಯಕವಾಗಿದೆ. ಇಲ್ಲಿನ ವೈದ್ಯರು ಸೇರಿದಂತೆ 10 ಮಂದಿ ನೌಕರರ ಕೆಲಸ ಮಾಡಬೇಕು. ಆದರೆ ಕೇವಲ ಬೆರಳೆಣಿಕೆ ನೌಕರರು ಕೆಲಸ ಮಾಡುತ್ತಿದ್ದಾರೆ.
ಹಾಗಾಗಿ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಸಿಗದೆ ಹುಸೇನ್ ಸಾಬ್ ಅನೇಕರು ಸಾಯಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಡಿಟಿಒ ಡಾ. ಮುರುಳಿಧರ್, ಪಿಎಸ್‍ಐ ಸಾಗರ್ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು. ಸೊಕ್ಕೆ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ
ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದೆ. ಈ ಬಗ್ಗೆ ಅನೇಕ ಬಾರಿ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಇಲ್ಲಿ ಪ್ರಾಥಮಿಕ ಚಿಕಿತ್ಸೆಗೆ ಬೇಕಾದ ಸೌಲಭ್ಯಗಳ ಬಗ್ಗೆ ಕಿವಿಗೊಡುತ್ತಿಲ್ಲ. ವೈದ್ಯರು ಸರಿಯಾಗಿ ಸೇವೆ ಮಾಡುತ್ತಿಲ್ಲ.
ಸಮಸ್ಯೆಯಾದ ಮಾತ್ರ ಸ್ಥಳಕ್ಕೆ ಹೋಗುವ ಅಧಿಕಾರಿಗಳು ಎರಡು ತಿಂಗಳಿಗೊಮ್ಮೆಯಾದರೂ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು.ಈಗ ಬಂದು ಸಬೂಬು ಹೇಳಿದರೇ ಕೇಳುವುದಿಲ್ಲ.
ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲವೆಂದು ಪಟ್ಟು ಹಿಡಿದು ಕುಳಿತರು. ಡಿಟಿಒ ಡಾ. ಮುರುಳಿಧರ್ ಮಾತನಾಡಿ, ವೈದ್ಯರು ದೇವರಲ್ಲಾ, ಅವರು ನಿಮ್ಮಂತೆ ಮನುಷ್ಯರು ಅವರಿಗೂ ಕುಟುಂಬ, ಸುಖ, ದುಃಖಗಳಿರುತ್ತವೆ. ಅದಕ್ಕೆ ಗ್ರಾಮಸ್ಥರ ಸಹಕಾರ ಮುಖ್ಯವಾಗಿರುತ್ತದೆ.ಗ್ರಾಮಗಳಲ್ಲಿ ಉತ್ತಮವಾರ ವಾತವರಣಗಳು ಇದ್ದರೆ ವೈದ್ಯರು ಸೇವೆ ಮಾಡಲು ಮುಂದೆ
ಬರುತ್ತಾರೆ. ಗಲಾಟೆ , ಪ್ರತಿಭಟನೆ ಮಾಡಿದರೆ ಯಾರು ಕೂಡ ಇತ್ತ ಮುಖ ಮಾಡುವುದಿಲ್ಲ. ಗ್ರಾಮೀಣ ಪ್ರದೇಶಗಲ್ಲಿ ಸೇವೆ ಮಾಡುವ ವೈದ್ಯರೊಂದಿಗೆ ಪ್ರೀತಿ, ವಿಶ್ವಾಸದಿಂದ ನಡೆದುಕೊಳ್ಳಬೇಕು, ಇದು ನಮ್ಮ ಆಸ್ಪತ್ರೆ ಎಂಬ ಭಾವನೆ ತಮ್ಮಲ್ಲಿ ಬೆಳೆಯಬೇಕು ಎಂದು ಮನವರಿಕೆ ಮಾಡಿದರು.
ಈ ಸಂದರ್ಭದಲ್ಲಿ ಡಾ. ರೇಣುಕಾರಾಧ್ಯ, ಡಾ. ಉಮೇಶ್, ಡಾ. ಕಾವ್ಯ, ಬಿಪಿಎಂ ಮಂಜುನಾಥ್, ಗ್ರಾಮಸ್ಥರಾದ ಡಿ.ಸಿ ಹನುಮಂತಪ್ಪ, ಮಾರಪ್ಪನಾಯಕ, ರಾಜಪ್ಪ, ಹಾಲಪ್ಪ, ಮೂಗಬಸಪ್ಪ, ಸುರೇಶ್, ಪರಸಪ್ಪ, ಶಕುಂತಲಮ್ಮ, ಗಂಗಮ್ಮ, ಹುಲಿಗೆಮ್ಮ, ಭಾಗ್ಯಮ್ಮ ಸೇರಿದಂತೆ ಮತ್ತಿತರಿದ್ದರು.