ಸುದ್ದಿವಿಜಯ, ಜಗಳೂರು: ಬಸವ ಜಯಂತಿಯ ಅಂಗವಾಗಿ ಶುಕ್ರವಾರ ಸಂಜೆ ಪಟ್ಟಣದ ಪೇಟೆ ಬಸವೇಶ್ವರ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಪ್ರತಿವರ್ಷವು ಈ ರಥೋತ್ಸವ ನಡೆಯಲಿದ್ದು ಈ ಬಾರಿಯೂ ಬಿರು ಬಿಸಿಲಿನ ನಡುವೆಯೂ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡರು.
ನೆಹರು ರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ಯಾಂಕ್ ಮುಂಭಾಗದಲ್ಲಿ ತೇರಿಗೆ ವಿವಿಧ ಹೂವುಗಳು, ಬಣ್ಣದ ಬಾವುಗಳು ಸಿಂಗಾರಗೊಳಿಸಲಾಗಿತ್ತು.
ದೇವಸ್ಥಾನದಿಂದ ಪೇಟೆ ಬಸವೇಶ್ವರಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕರೆತಂದು ತೇರಿನ ಸುತ್ತಲು ಮೂರು ಬಾರಿ ಪ್ರದಕ್ಷಿಣೆ ಹಾಕಿದರು. ಸುತ್ತಲು ನೆರದಿದ್ದ ಭಕ್ತರು ಉತ್ಸವ ಮೂರ್ತಿಯನ್ನು ರಥೋತ್ಸವದಲ್ಲಿ ಕೂರಿಸುವಾಗ ಜಯಘೋಷಗಳನ್ನು ಕೂಗಿದರು.ಜಗಳೂರು ಪಟ್ಟಣದಲ್ಲಿ ಬಸವ ಜಯಂತಿಯ ಅಂಗವಾಗಿ ಶುಕ್ರವಾರ ಸಂಜೆ ಪೇಟೆ ಬಸವೇಶ್ವರ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಸ್ವಾಮಿಯ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ತೇರಿನ ಗಾಲಿಗಳಿಗೆ ತೆಂಗಿನಕಾಯಿ ಹೊಡೆದು, ಕಳಸಕ್ಕೆ ಬಾಳೆ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.
ತೇರನ್ನು ಒಂದು ಕಿ.ಮೀ ದೂರದ ಬಸವೇಶ್ವರ ದೇವಸ್ಥಾನದ ಆವರಣದ ಪಾದಗಟ್ಟೆಯವರೆಗೂ ಎಳೆಯಲಾಯಿತು. ವಿವಿಧ ಕಲಾ ವಾದ್ಯ ಮೇಳ, ಕೋಲು ಕುಣಿತ, ನಂದಿಕೋಲು ಕಣಿತದೊಂದಿಗೆ ಮೆರವಣಿಗೆ ಸಾಗಿತು.
ಈ ಸಂದರ್ಭದಲ್ಲಿ ವೀರಶೈವ ಸಮಾಜದ ಅಧ್ಯಕ್ಷ ಶಿವನಗೌಡ, ಕೆಪಿಸಿಸಿ ಎಸ್ಟಿ ಘಟಕದ ಅಧ್ಯಕ್ಷ ಕೆ.ಪಿ ಪಾಲಯ್ಯ, ಎಸ್ಸಿ ಘಟಕದ ಅಧ್ಯಕ್ಷ ಬಿ.ಮಹೇಶ್ವರಪ್ಪ, ಮಾಜಿ ಪ.ಪಂ ಅಧ್ಯಕ್ಷ ಮಂಜುನಾಥ್, ಎಂ.ಎಸ್ ಪಾಟೇಲ್ ಸೇರಿದಂತೆ ಮತ್ತಿತರರಿದ್ದರು.