ಜಗಳೂರು: ಕೌನ್ಸಿಲರ್ ಬಿ.ಟಿ.ರವಿಕುಮಾರ್ ಸದಸ್ಯತ್ವ ವಜಾಗೊಳಿಸಿ ಹೈಕೋರ್ಟ್ ಆದೇಶ!

Suddivijaya
Suddivijaya July 31, 2024
Updated 2024/07/31 at 4:03 PM

suddivijayanews31/07/2024

ಸುದ್ದಿವಿಜಯ, ಜಗಳೂರು: ಸುಳ್ಳು ಮಾಹಿತಿ ನೀಡಿ ಬಿಸಿಎಂ’ಬಿ’ ಪ್ರಮಾಣ ಪತ್ರ ಪಡೆದಿದ್ದನ್ನು ರದ್ದುಗೊಳಿಸಿ ಆದೇಶಿಸಿದ್ದ ಹರಪಹಳ್ಳಿ ಉಪ ವಿಭಾಗಾಧಿಕಾರಿಗಳ ಆದೇಶವನ್ನು ಎತ್ತಿ ಹಿಡಿದಿರುವ ರಾಜ್ಯ ಹೈಕೋರ್ಟ್ ಪಟ್ಟಣದ ವಾರ್ಡ್-9 ರ ಸದಸ್ಯ ಬಿ.ಟಿ.ರವಿಕುಮಾರ್ ಸದಸ್ಯತ್ವವನ್ನು ವಜಾಗೊಳಿಸಿ ಆದೇಶಿಸಿದೆ.

ಪಟ್ಟಣ ಪಂಚಾಯಿತಿಗೆ 2018ರಲ್ಲಿ ನಡೆದ ಚುನಾವಣೆಯಲ್ಲಿ ಬಿಸಿಎಂ ‘ಬಿ’ ಮೀಸಲು ಕ್ಷೇತ್ರವಾದ 9ನೇ ವಾರ್ಡ್ನಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಬಿ.ಟಿ.ರವಿಕುಮಾರ್ ಬಿಸಿಎಂ’ಬಿ’ ಪ್ರಮಾಣ ಪತ್ರ ಸಲ್ಲಿಸಿ ಆಯ್ಕೆಯಾಗಿದ್ದರು.

ಇವರ ವಿರುದ್ಧ ಪರಾಜಿತ ಬಿಜೆಪಿ ಅಭ್ಯರ್ಥಿ ರುದ್ರಮುನಿ ಅವರು ರವಿಕುಮಾರ್ ಅವರು ಹೆಚ್ಚು ಜಮೀನು ಹೊಂದಿದ್ದು ಬಿಸಿಎಂ ‘ಬಿ’ ಪ್ರಮಾಣ ಪತ್ರ ನೀಡಿರುವುದು ತಪ್ಪು ಎಂದು ಹರಪನಹಳ್ಳಿ ಉಪವಿಭಾಗಾಧಿಕಾರಿಗಿಗೆ ದೂರು ಸಲ್ಲಿಸಿದ್ದರು.

ಇದರ ಬಗ್ಗೆ ಪರಿಶೀಲನೆ ನಡೆಸಿದ ಉಪವಿಭಾಗಾಧಿಕಾರಿಗಳು ಆಯ್ಕೆಗೊಂಡ ಬಿ.ಟಿ.ರವಿಕುಮಾರ್ ಅವರು ಎಂಟು ಹೆಕ್ಟೇರ್‌ಗಿಂತಲೂ ಹೆಚ್ಚು ಜಮೀನು ಹೊಂದಿರುವ (ಒಟ್ಟು 26.20 ಎಕರೆ) ದಾಖಲೆ ಇರುವುದರಿಂದ ತಹಶೀಲ್ದಾರ್ ನೀಡಿರುವ ಪ್ರಮಾಣ ಪತ್ರವನ್ನು ರದ್ದುಗೊಳಿಸಿ ಡಿಸೆಂಬರ್ 15.2018 ರಂದು ಆದೇಶ ಹೊರಡಿಸಿದ್ದರು.

ಈ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ಸದಸ್ಯ ಬಿ.ಟಿ.ರವಿಕುಮಾರ್ ರಾಜ್ಯ ಹೈಕೋರ್ಟ್ನಲ್ಲಿ ರಿಟ್ ಪಿಟಿಷನ್ ಸಲ್ಲಿಸಿದ್ದರು.

ಹೈಕೋರ್ಟ್ನಲ್ಲಿ ಸುಧೀರ್ಘ ನಾಲ್ಕೂವರೆ ವರ್ಷಗಳ ಕಾಲ ವಿಚಾರಣೆ ನಡೆದು ನಂತರ ಜುಲೈ 3,2024 ರಂದು ಪ್ರಮಾಣ ಪತ್ರವನ್ನು ರದ್ದುಪಡಿಸಿದ ಉಪವಿಭಾಗಾಧಿಕಾರಿಗಳ ಆದೇಶವನ್ನು ಎತ್ತಿ ಹಿಡಿದಿರುವ ಹೈಕೋರ್ಟ್ ಪರಾಜಿತ ಅಭ್ಯರ್ಥಿಯಾಗಿದ್ದ ರುದ್ರಮುನಿ ಅವರನ್ನು ಪಟ್ಟಣ ಪಂಚಾಯಿತಿಯ 9ನೇ ವಾರ್ಡ್ ಕೌನ್ಸಿಲರ್ ಎಂದು ಘೋಷಣೆ ಮಾಡಿ ಆದೇಶ ನೀಡಿದೆ.

ಕೋರ್ಟ್ ಆದೇಶದ ಅನ್ವಯ ರವಿಕುಮಾರ್ ಸದಸ್ಯತ್ವವನ್ನು ವಜಾಗೊಳಿಸಿ ಎರಡೇ ಹೆಚ್ಚು ಮತ ಪಡೆದಿರುವ ನನ್ನನ್ನು ಸದಸ್ಯನೆಂದು ಘೋಷಿಸಬೇಕು ಎಂದು ಜುಲೈ.26ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವುದಾಗಿ ಪರಾಜಿತ ಅಭ್ಯರ್ಥಿ ರುದ್ರಮುನಿ ತಿಳಿಸಿದ್ದಾರೆ.

ಆ.31,2018 ರಂದು ನಡೆದ ಚುನಾವಣೆಯಲ್ಲಿ ವಾರ್ಡ್.ನಂ-9 ರ ಬಿಜೆಪಿ ಅಭ್ಯರ್ಥಿ ರುದ್ರಮುನಿ 127 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ ಅಭ್ಯರ್ಥಿ ಬಿ.ಟಿ.ರವಿಕುಮಾರ್ 193 ಮತಗಳನ್ನು ಪಡೆದಿದ್ದರು. ಕೆ.ಸಿ.ಶಂಭುಲಿಂಗಪ್ಪ ಎಂಬುವವರು ನಾಲ್ಕು ಮತಗಳನ್ನು ಪಡೆದಿದ್ದರು. 2 ಮತಗಳು ನೋಟಕ್ಕೆ ಚಲಾವಣೆಯಾಗಿದ್ದವು. ಹಾಗಾಗಿ ಬಿ.ಟಿ.ರವಿಕುಮಾರ್ ಅವರನ್ನು ವಾರ್ಡ್-9ರ ಕೌನ್ಸಿಲರ್ ಎಂದೇ ಘೋಷಣೆ ಮಾಡಲಾಗಿತ್ತು.

Share this Article
Leave a comment

Leave a Reply

Your email address will not be published. Required fields are marked *

error: Content is protected !!