ಜಗಳೂರು: ಪಪಂ ಸಾಮಾನ್ಯ ಸಭೆಯಲ್ಲಿ ಅಭಿವೃದ್ಧಿಯ ಗದ್ಧಲ, ಕಾಂಗ್ರೆಸ್ ಬಿಜೆಪಿ ಸದಸ್ಯರ ಜಟಾಪಟಿ!

Suddivijaya
Suddivijaya January 9, 2023
Updated 2023/01/09 at 1:54 PM

ಸುದ್ದಿವಿಜಯ, ಜಗಳೂರು: ಪಪಂನಲ್ಲಿ ಅಭಿವೃದ್ಧಿ ಕೆಲಸಗಳಾಗ್ತಿಲ್ಲ. ಅಧಿಕಾರಿಗಳಿಂದ ಹಣವಿಲ್ಲ ಎನ್ನುವ ಉತ್ತರ ಬಿಟ್ಟರೆ ಮತ್ತ್ಯಾವುದೇ ಉತ್ತರವಿಲ್ಲ ಎಂದು ಆಡಳಿತ ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್‍ನ ಸದಸ್ಯರು ಆಡಳಿತ ವ್ಯವಸ್ಥೆಯ ವಿರುದ್ಧ ಸಿಡಿದೆದ್ದಿದ್ದರು.

ಪಟ್ಟಣದ ಪಪಂ ನಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರ ಕೋಲಾಹಲ ತಾರರಕ್ಕೇರುತ್ತಿದ್ದಂತೆ ಶಾಸಕ ಎಸ್.ವಿ.ರಾಮಚಂದ್ರ ಮಧ್ಯ ಪ್ರವೇಶಿಸಿದರು. ಪಟ್ಟಣದ 18 ವಾರ್ಡ್‍ಗಳಲ್ಲೂ ಅಭಿವೃದ್ದಿ ಕೆಲಸಗಳಾಗಬೇಕಾಗಿದ್ದು, ಹೆಚ್ಚುವರಿ ಅನುದಾನಕ್ಕಾಗಿ ಜ.19ರಂದು ಸರ್ವಪಕ್ಷದ ನಿಯೋಗದೊಂದಿಗೆ ಸಿ.ಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಲಾಗುವುದು ಎಲ್ಲ ಸದಸ್ಯರು ಬನ್ನಿ ಎಂದು ಕರೆ ನೀಡಿದರು.

ಪಟ್ಟಣದಲ್ಲಿ ಒಳ ಚರಂಡಿ ವ್ಯವಸ್ಥೆ ಕಲ್ಪಿಸುವುದು ನಮ್ಮ ಉದ್ದೇಶವಾಗಿತ್ತು. ಆದರೆ ಅನುದಾನದ ಕೊರತೆಯಿಂದ ಕಾಮಗಾರಿಯನ್ನು ಕೈ ಬಿಡಲಾಗಿದೆ. ಮುಂದಿನ ಬಾರಿ ಮೊದಲ ಆದ್ಯತೆ ನೀಡಲಾಗುವುದು. ಸ್ವಚ್ಛತೆಗೆ ಒತ್ತು ನೀಡಬೇಕು, ಕುಡಿಯುವ ನೀರಿನ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಬೇಕು.

ಪಟ್ಟಣದಿಂದ ದೊಣೆಹಳ್ಳಿ ರಸ್ತೆ, ನ್ಯಾಯಾಲಯದಿಂದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದವರೆಗೆ ರಸ್ತೆ ವಿಭಜನೆ ಮತ್ತು ವಿದ್ಯುತ್ ದೀಪ ಅಳವಡಿಸಲಾಗುವುದು ಎಂದರು.

ಕಾಂಗ್ರೆಸ್ ಸದಸ್ಯ ರಮೇಶ್ ಮಾತನಾಡಿ, ನನ್ನ ವಾರ್ಡ್‍ನಲ್ಲಿ ಒಂದೇ ಒಂದು ರೂ. ಅನುದಾನ ನೀಡಿಲ್ಲ. ಬಿಜೆಪಿ ವಾರ್ಡ್‍ಗಳಲ್ಲಿ 12 ಲಕ್ಷದ ವರೆಗೆ ಅನುದಾನ ನೀಡಲಾಗಿದೆ. ಅದರ ಅರ್ಧದಷ್ಟಾದರೂ ನೀಡಲಿಲ್ಲ. ವಾರ್ಡ್ ಸದಸ್ಯರಿಗೆ ಮುಖ ತೋರಿಸುವುದು ಹೇಗೆ ಎಂದು ಪ್ರಶ್ನಿಸಿದರು. ಓವರ್ ಟ್ಯಾಂಕ್ ನಿರ್ಮಾಣವಾಗಿ ನಾಲ್ಕು ವರ್ಷಗಳಾಗಿವೆ ನೀರು ಬಿಟ್ಟಿಲ್ಲ. ಕಾಮಗಾರಿ ಕಳೆಪೆಯಾಗಿದೆ. ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 ಜಗಳೂರಿನ ಪಟ್ಟಣ ಪಂಚಾಯಿತಿಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕ ಎಸ್.ವಿ ರಾಮಚಂದ್ರ ಮಾತನಾಡಿದರು.
 ಜಗಳೂರಿನ ಪಟ್ಟಣ ಪಂಚಾಯಿತಿಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕ ಎಸ್.ವಿ ರಾಮಚಂದ್ರ ಮಾತನಾಡಿದರು.

ಮುಕ್ತಿ ವಾಹನ ಆದ್ಯತೆ ಇಲ್ಲ:
ಪಟ್ಟಣದಲ್ಲಿ ಯಾರದೂ ಮೃತಪಟ್ಟರೇ ಅವರ ದೇಹ ಸಾಗಿಸಲು ಮುಕ್ತಿ ವಾಹನದ ಅವಶ್ಯಕತೆ ಇದೆ. ಹಾಗಾಗಿ ಪಪಂ ನಿಂದಲೇ ವಾಹನ ಖರೀದಿಸಿ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ವಾಹನ ನೀಡಬೇಕು. ಇದರಿಂದ ಬಡ ಕುಟುಂಬಗಳಿಗೆ ತುಂಬ ಸಹಕಾರಿಯಾಗುತ್ತದೆ ಎಂದು ಮಂಜಮ್ಮ, ರಮೇಶ್, ರವಿಕುಮಾರ್ ಧ್ವನಿ ಎತ್ತಿದರು. ಇದಕ್ಕೆ ಪ್ರತಿಕ್ರಿಯಿಸಿ ಶಾಸಕರು ಕೂಡಲೇ ಸಂಸದರನ್ನು ಭೇಟಿ ನೀಡಿ ವಾಹನ ಖರೀದಿಗೆ ಅಗತ್ಯ ಅನುದಾನವನ್ನು ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ಬೇರೆ ಜಾಗ ನೋಡಿಕೊಳ್ಳಿ:
ಸಭೆಯ ಆರಂಭದಿಂದಲೂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್ ವಿರುದ್ದ ಸದಸ್ಯರು ಆರೋಪ ಮಾಡಿದ್ದರಿಂದ ನಿಮ್ಮ ಆರೋಗ್ಯ ಸರಿ ಇಲ್ಲ. ಸರಿಯಾಗಿ ಕೆಲಸ ಮಾಡುತ್ತಿಲ್ಲ ಹಾಗಾಗಿ ನೀವೂ ಬೇರೆ ಕಡೆ ಜಾಗ ನೋಡಿಕೊಳ್ಳಿ, ಮತ್ತೊಬ್ಬರಿಗೆ ಅವಕಾಶ ಕೊಡಲಾಗುವುದು ಎಂದು ಶಾಸಕ ಎಸ್.ವಿ ರಾಮಚಂದ್ರ ಸೂಚನೆ ನೀಡಿದರು.

ತರಕಾರಿ ಮಾರುಕಟ್ಟೆ ಮೇಲ್ಚಾವಣಿ ಸಂಪೂರ್ಣ ಹಾಳಾಗಿದ್ದು ದುಸ್ಥಿತಿಗೆ ತಲುಪಿದೆ ಮಳೆಗಾಲದಲ್ಲಿ ಎಲ್ಲಾ ಕಡೆ ನೀರು ಸೋರುತ್ತಿದ್ದು ವ್ಯಾಪಾರಸ್ಥರಿಗೆ ತುಂಬ ತೊಂದರೆಯಾಗುತ್ತಿದೆ. ಈ ಬಗ್ಗೆ ಅನೇಕ ಬಾರಿ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಪ್ರತಿ ಸಭೆಯಲ್ಲೂ ಧ್ವನಿ ಎತ್ತಿದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸದಸ್ಯ ಮಂಜಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಸಾರ್ವಜನಿಕರ ಉಪಯೋಗಕ್ಕಾಗಿ ಮಾರುಕಟ್ಟೆ ಪಕ್ಕದಲ್ಲಿ ನಿರ್ಮಿಸಿರುವ ಸಾಮೂಹಿಕ ಶೌಚಗೃಹ ಹತ್ತಾರು ವರ್ಷಗಳಿಂದಲೂ ಬಾಗಿಲು ತೆರೆಯದೇ ಮುಚ್ಚಲಾಗಿದೆ. ಇದರಿಂದ ಸಾರ್ವಜನಿಕರು ಎಲ್ಲಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದು ಕೆಟ್ಟ ದುರ್ವಾಸನೇ ಬೀರುತ್ತದೆ. ಸುತ್ತಮುತ್ತಲಿನ ಅಂಗಡಿಗಳಲ್ಲಿ ಕೂತುಕೊಂಡು ವ್ಯಾಪಾರ ಮಾಡಲು ಸಾದ್ಯವಾಗುತ್ತಿಲ್ಲ. ಕೂಡಲೇ ಕ್ರಮಕೈಗೊಂಡು ಶೌಚಗೃಹ ತೆರೆಯಬೇಕು ಎಂದು ಒತ್ತಾಯಿಸಿದರು.

ಸೂಳೆ ಕೆರೆ ನೀರು ಪೂರೈಕೆ ನಿಲ್ಲಿಸಿ:
ಚನ್ನಗಿರಿಯ ಶಾಂತಿಸಾಗರದಿಂದ ಜಗಳೂರು ಪಟ್ಟಣಕ್ಕೆ ಪೂರೈಕೆಯಾಗುತ್ತಿರುವ ಕುಡಿಯುವ ನೀರು ಸಮರ್ಪಕವಾಗಿ ಜನರಿಗೆ ತಲುಪುತ್ತಿಲ್ಲ, ವಾರವಾದರು ವಾರ್ಡ್‍ಗಳಿಗೆ ಬರುತ್ತಿಲ್ಲ. ಆದರೆ ಪಪಂಗೆ ಲಕ್ಷಾಂತರ ರೂಪಾಯಿಗಳು ಖರ್ಚಾಗುತ್ತಿದೆ ಎಂದು ಸದಸ್ಯ ದೇವರಾಜ್ ದೂರಿದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಆರ್ ತಿಪ್ಪೇಸ್ವಾಮಿ, ಸೂಳೆ ಕೆರೆ ನೀರು ಪಟ್ಟಣದ ಜನತೆಗೆ ಉಪಯೋಗವಾಗುತ್ತಿಲ್ಲ. ಆದರೆ ಪೈಪ್‍ಲೈನ್ ಬಂದಿರುವ ಗ್ರಾಮಗಳಿಗೆ ಅನುಕೂಲವಾಗಿದೆ. ಸಣ್ಣ ಪೈಪ್ ಹೊಡೆದು ಪ.ಪಂ ಖರ್ಚು ಮಾಡಬೇಕು. ಪ್ರತಿ ತಿಂಗಳು 5ರಿಂದ 6 ಲಕ್ಷ ವೆಚ್ಚವಾಗುತ್ತಿದೆ ಆದ್ದರಿಂದ ಇದನ್ನು ರದ್ದುಗೊಳಿಸಿ, ಪಟ್ಟಣದ ಪಂಪ್‍ಹೌಸ್‍ನಲ್ಲಿ ನೀರಿನ ತೊಟ್ಟಿ ನಿರ್ಮಿಸಿ ಆರ್‍ಒ ಘಟಕ ಅಳವಡಿಸಿದರೇ 18 ವಾರ್ಡ್‍ಗಳಿಗೂ ಶುದ್ದ ನೀರು ಒದಗಿಸಬಹುದು ಎಂದು ಸಲಹೆ ನೀಡಿದರು.

ಶಾಸಕ ಎಸ್.ವಿ ರಾಮಚಂದ್ರ ಮಾತನಾಡಿ, ಶೀಘ್ರವೇ ಜಗಳೂರು ಕೆರೆಗೆ ನೀರು ತುಂಬಿಸಲಾಗುವುದು, ಒಂದು ಟ್ಯಾಂಕ್ ಮೂಲಕ ನೀರು ಸಂಗ್ರಹಿಸಿ ಜನರಿಗೆ ನೀರು ಕೊಡುವ ಚಿಂತನೆ ಮಾಡಿದ್ದೇವೆ ಎಂದರು.

ಅಂಗನವಾಡಿಗೆ ಜಾಗ ಕೊಡಿ:
ತುಮಾಟಿ ಲೇಔಟ್‍ನಲ್ಲಿ ಅಂಗನವಾಡಿ ಕೇಂದ್ರ ಬಾಡಿಗೆಯಲ್ಲಿ ನಡೆಯುತ್ತಿದೆ. ಒಂದು ಕಡೆ ಖಾಲಿ ಜಾಗ ನೀಡುವಂತೆ ಹತ್ತಾರು ಬಾರಿ ತಿಳಿಸಿದರು ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಸೇತುವೆ ಕುಸಿದು ಬಿದ್ದಿದೆ ದುರಸ್ಥಿಗೂ ಕ್ರಮಕೈಗೊಂಡಿಲ್ಲ. ಅಧಿಕಾರಿಗಳಿಗೆ ಸದಸ್ಯರೇ ಲೆಕ್ಕಕ್ಕಿಲ್ಲ ಎಂದು ಸದಸ್ಯ ಟಿ. ಲಿಲೀತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಬಿಜೆಪಿ ಸದಸ್ಯರ ಜಟಾಪಟಿ: ಪಟ್ಟಣ ಪಂಚಾಯಿತಿಯ 15ನೇ ಹಣಕಾಸು ಯೋಜನೆಯಡಿ ಸದಸ್ಯರುಗಳಿಗೆ ಸಮರ್ಪಕವಾಗಿ ಹಂಚಿಕೆಯಾಗಿಲ್ಲ. ಕಾಂಗ್ರೆಸ್ ಸದಸ್ಯರಿಗೆ 6 ಲಕ್ಷ ಕೊಟ್ಟು, ಬಿಜೆಪಿಯವರು 12 ಲಕ್ಷ ಅನುದಾನ ಪಡೆದಿದ್ದಾರೆ.

ಇದು ತಾರತ್ಮವಾಗಿದೆ. ಅಲ್ಲದೇ ಅನುದಾನ ಬಿಡುಗಡೆಯಾದರೆ ಬಹುತೇಕ ಕಡೆ ಕೆಲಸ ಮಾಡಿಲ್ಲ. ಒಂದು ವಾರ್ಡ್‍ನಲ್ಲಿ ಅಭಿವೃದ್ದಿ ಕೆಲಸವಾಗಿರುವುದು ತೋರಿಸಲಿ ಈ ಕ್ಷಣವೇ ರಾಜೀನಾಮೆ ನೀಡುತ್ತೇನೆ ಎಂದು ಸದಸ್ಯ ರಮೇಶ್ ಸವಾಲಾಕಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರಾದ ರವಿಕುಮಾರ್. ಶಕೀಲ್, ಮಹಮದ್ ಧ್ವನಿಗೂಡಿಸಿದರು. ಇದರಿಂದಾಗಿ ಬಿಜೆಪಿ ಸದಸ್ಯರಾದ ಸಿದ್ದೇಶ್, ತಿಪ್ಪೇಸ್ವಾಮಿ, ಪಾಪಲಿಂಗಪ್ಪ ಪ್ರತಿಧ್ವನಿಸಿದ್ದರಿಂದ ಎರಡು ಪಕ್ಷಗಳ ಸದಸ್ಯರು ಜಟಾಪಟಿಗೆ ಬಿದ್ದರು.

ಹೈಮಾಸ್ಟ್ ದೀಪ ದುರಸ್ಥಿಪಡಿಸಿ:
ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿರುವ ಹೈಮಾಸ್ಟ್ ದೀಪ ಸುಮಾರು ವರ್ಷಗಳಿಂದಲೂ ಬೆಳಗುತ್ತಿಲ್ಲ. ಅಲ್ಲದೇ ದೀಪಗಳ ವೈರ್‍ಗಳು ಕಟ್ ಆಗಿದ್ದು ಯಾವ ಕ್ಷಣದಲ್ಲಾದರೂ ಕೆಳಗೆ ಬೀಳಬಹುದು, ಇದನ್ನು ದುರಸ್ಥಿ ಪಡಿಸಿ ಇಲ್ಲವೇ ಕೆಳಗೆ ಇಳಿಸಿ ಎಂದು ಹೇಳಿದರೂ ಯಾವುದೇ ಕ್ರಮಕೈಗೊಂಡಿಲ್ಲ. ಒಂದು ವೇಳೆ ಕೆಳಗೆ ಬಿದ್ದರೆ ದೊಡ್ಡ ಅನಾಹುತ ಸಂಭವಿಸುತ್ತದೆ ಎಂದು ಸದಸ್ಯ ಲುಕ್ಮಾನ್ ಸಭೆಯ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷೆ ವಿಶಾಲಾಕ್ಷಿ, ಉಪಾಧ್ಯಕ್ಷೆ ನಿರ್ಮಲ ಕುಮಾರ್, ಮುಖ್ಯಾಧಿಕಾರಿ ಲೋಕ್ಯನಾಯ್ಕ, ಸದಸ್ಯರಾದ ನವೀನ್‍ಕುಮಾರ್, ಪಾಪಲಿಂಗಪ್ಪ, ಲೋಕಮ್ಮ ಸೇರಿದಂತೆ ಮತ್ತಿತರಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!