ಸುದ್ದಿವಿಜಯ,ಜಗಳೂರು: ಕಾಡು ಹಂದಿಗಳು ರೈತರ ಹೊಲಗಳಲ್ಲಿ ಬಿತ್ತನೆ ಮಾಡಿರುವ ಮೆಕ್ಕೆಜೋಳ, ಶೇಂಗಾ ಹೊಲಗಳಿಗೆ ರಾತ್ರೋ ರಾತ್ರಿ ನುಗ್ಗಿ ಬಿತ್ತನೆ ಮಾಡಿದ ಬೀಜಗಳನ್ನು ಮುಕ್ಕಿ ರೈತರಿಗೆ ಬರೆ ಎಳೆಯುತ್ತಿವೆ.
ತಾಲೂಕಿನ ಗೋಡೆ ಗ್ರಾಮದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದ 22 ಎಕರೆ ಜಮೀನಿನಲ್ಲಿ ಬುಧವಾರ ರಾತ್ರಿ ಹಂದಿಗಳು ದಾಳಿ ಮಾಡಿ ಬೆಳೆಯನ್ನೆಲ್ಲಾ ಹಾಳು ಮಾಡಿವೆ.
ಗ್ರಾಮದ ಸಣ್ಣ ಮಂಜಪ್ಪ 8 ಎಕರೆ, ದೊಡ್ಡ ಮಂಜಪ್ಪ 8 ಎಕರೆ ರಾಜಣ್ಣ 2 ಎಕರೆ, ಶೇಖರಪ್ಪ 4 ಎಕರೆ ಜಮೀನಿನಲ್ಲಿ ಬಿತ್ತನೆ ಹಾನಿಯಾಗಿವೆ.
ರಂಗಯ್ಯನ ದುರ್ಗ ಕೊಂಡುಕುರಿ ವನ್ಯ ಜೀವಿ ಅಭಯಾರಣ್ಯದಂಚಿನಲ್ಲಿರುವ ಗೋಡೆ ಗ್ರಾಮದಲ್ಲಿ ಇತ್ತೀಚೆಗೆ ಮೆಕ್ಕೆಜೋಳ ಬಿತ್ತನೆ ಮಾಡಲಾಗಿತ್ತು. ಸುತ್ತಮುತ್ತಲು ಅರಣ್ಯವಿರುವುದರಿಂದ ಈ ಭಾಗದಲ್ಲಿ ಹಂದಿ, ಕರಡಿಗಳ ಹಾವಳಿ ಹೆಚ್ಚಾಗಿದೆ.
ಬುಧವಾರ ತಡ ರಾತ್ರಿ ಇಪ್ಪತ್ತಕ್ಕೂ ಹೆಚ್ಚು ಹಂದಿಗಳ ದಂಡು ಸಾಲು ಹಿಡಿದು ಮೆಕ್ಕೆಜೋಳ ಬೀಜಗಳನ್ನು ತಿಂದು ಹಾಕಿವೆ. ಬೆಳಗ್ಗೆ ಹೋಗಿ ನೋಡಿದ ರೈತರು ಜಮೀನಿನ ಸ್ಥಿತಿ ಕಂಡು ಆತಂಕಗೊಂಡಿದ್ದಾರೆ. ಪ್ರತಿ ವರ್ಷ ಕಾಡು ಪ್ರಾಣಿಗಳ ಹಾವಳಿಗೆ ಬೆಳೆಗಳೆಲ್ಲಾ ಹಾನಿಯಾಗುತ್ತಿವೆ.
ಸಾಲ ಸೂಲ ಮಾಡಿ ಬಿತ್ತನೆ ಬೀಜ, ಗೊಬ್ಬರ ಖರೀದಿಸಿ ಉಳುಮೆ ಮಾಡಲಾಗುತ್ತಿದೆ. ಫಲಕ್ಕೆ ಬರುವ ಮುನ್ನವೇ ನಾಶ ಮಾಡಿದರೇ ಬೆಳೆಯಲು ಹೇಗೆ ಸಾಧ್ಯ, ಮಾಡಿದ ಸಾಲ ಮೈಮೇಲೆ ಬರುತ್ತದೆ. ಕೊನೆ ಸಾಲಗಾರರಿಗೆ ಕಟ್ಟಲು ಆಗದೇ ಸಾಕಷ್ಟು ತೊಂದರೆ ಅನುಭವಿಸುತ್ತೇವೆ.
ಸರಕಾರ ರೈತರ ಪರವಾಗಿ ನಿಂತುಕೊಳ್ಳಬೇಕು. ಪ್ರಾಣಿಗಳ ಕಾಟದಿಂದ ಮುಕ್ತಿಗೊಳಿಸಬೇಕು. ಹಾನಿಯಾಗಿರುವ ಬೆಳೆಗೆ ನಷ್ಟ ತುಂಬಿಕೊಡಬೇಕು ಎಂದು ರೈತರಾದ ಸಂತೋಷ್, ರಾಜಣ್ಣ, ಶೇಖರಪ್ಪ ಒತ್ತಾಯಿಸಿದ್ದಾರೆ.