ಸುದ್ದಿವಿಜಯ, ಜಗಳೂರು: ತಾಲೂಕಿನಲ್ಲಿ ಶಾಂತಿಯುತ ಮತದಾನಕ್ಕಾಗಿ ಸೆಂಟ್ರಲ್ ಪ್ಯಾರಾ ಮಿಲಿಟರಿ ಫೋರ್ಸ್(ಸಿಆರ್ ಪಿಎಫ್) ಮತ್ತು ಪೊಲೀಸ್ ಸಿಬ್ಬಂದಿಯಿಂದ ಶುಕ್ರವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ಸಾರ್ವಜನಿಕರ ಗಮನ ಸೆಳೆಯಿತು.
ಪಟ್ಟಣದ ಕೊಟ್ಟೂರು ರಸ್ತೆಯಿಂದ ಪ್ರಾರಂಭವಾದ ಪಥಸಂಚಲನದಲ್ಲಿ ಸಿಆರ್ ಪಿ ಎಫ್ ಮತ್ತು ಪೊಲೀಸ್ ಸಿಬ್ಬಂದಿ ಸೇರಿ ಒಟ್ಟು 435 ಸಿಬ್ಬಂದಿ ನೆಹರೂ ರಸ್ತೆ, ಮುಸ್ಲಿಂ ಕಾಲೋನಿ, ಜೆಸಿಆರ್ ಬಡಾವಣೆ, ಸಾರ್ವಜನಿಕ ಆಸ್ಪತ್ರೆ, ಮರೇನಹಳ್ಳಿ ರಸ್ತೆ, ಇಂದಿರಾ ಬಡಾವಣೆ, ಅಂಬೇಡ್ಕರ್ ಕಾಲೋನಿ, ಭುವನೇಶ್ವರಿ ವೃತ್ತ, ಗಾಂಧಿವೃತ್ತದ ಮೂಲಕ ಮಹಾತ್ಮಗಾಂಧಿ ಬಸ್ ನಿಲ್ದಾಣದಲ್ಲಿ ಪಥ ಸಂಚಲನ ಸಮಾಪ್ತಿಯಾಯಿತು.
ಪಥಸಂಚಲನದ ನೇತೃತ್ವವನ್ನು ಹೆಚ್ಚುವರಿ ಎಸ್‍ಪಿ ಆರ್.ಬಿ.ಬಸರಗಿ ವಹಿಸಿದ್ದರು. ನಂತರ ಪತ್ರಕರ್ತರಿಗೆ ಮಾತನಾಡಿದ ಎಎಸ್‍ಪಿ ಆರ್.ಬಿ. ಬಸರಗಿ, ದಾವಣಗೆರೆ ಉತ್ತರ ಮತ್ತು ದಕ್ಷಿಣದಲ್ಲಿ ಎಸ್‍ಪಿ ಸಿ.ಬಿ.ರಿಷ್ಯಂತ್ ಅವರು ಗುರುವಾರ ಸಿಆರ್‍ಪಿಎಫ್ ಸಿಬ್ಬಂದಿ ಪಥಸಂಚಲನಕ್ಕೆ ಚಾಲನೆ ನೀಡಿದರು.
ಇಂದು ಜಗಳೂರಿನಲ್ಲಿ ಒಟ್ಟು ಐದು ಕಂಪನಿಗಳ ಮುಖ್ಯಸ್ಥರು ಮತ್ತು ಸಿಪಿಐ ಶ್ರೀನಿವಾಸ್‍ರಾವ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಪಥಸಂಚಲನದಲ್ಲಿ ಭಾಗಿಯಾಗಿದ್ದರು.
ಶನಿವಾರ ಚನ್ನಗಿರಿ ಮತ್ತು ಹೊನ್ನಾಳಿಯಲ್ಲಿ ಇದೇ ರೀತಿಯಲ್ಲಿ ಪಥಸಂಚಲನ ನಡೆಯಲಿದೆ. ಜಗಳೂರಿನಲ್ಲಿ ನೂರು ಜನ ಸಿಆರ್‍ಪಿಎಫ್ ಸಿಬ್ಬಂದಿ ಚುನಾವಣೆ ಮುಗಿಯುವವರೆಗೂ ಕಾರ್ಯನಿರ್ವಹಿಸಲಿದ್ದಾರೆ. ಅಹಿತರಕ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಸೂಕ್ಷ ಪ್ರದೇಶಗಳು ಮತ್ತು ದೊಡ್ಡ ಗ್ರಾಮಾಂತರ ಪ್ರದೇಶಗಳಲ್ಲಿ ಸಿಆರ್ ಪಿಎಫ್ ಸಿಬ್ಬಂದಿ ಪಥಸಂಚಲ ಮಾಡಲಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ಗಲಾಟೆಗಳಿಗೆ ಅವಕಾಶ ನೀಡುವುದಿಲ್ಲ. ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಿದರಕೆರೆ, ಅಣಬೂರು, ಗಡಿಮಾಕುಂಟೆ ಸೇರಿದಂತೆ ನಾಲ್ಕು ಕಡೆ ಚಕ್‍ಪೋಸ್ಟ್‍ಗಳನ್ನು ರಚಿಸಲಾಗಿದೆ ಎಂದರು.
ತಂಪು ಪಾನಿಯ ವಿತರಣೆ
ಪಥಸಂಚಲನ ಮುಗಿಸಿ ಬಿಸಿಲಿನಲ್ಲಿ ದಣಿವರಿದ ಸಿಆರ್ ಪಿ ಎಫ್ ಮತ್ತು ಪೊಲೀಸ್ ಸಿಬ್ಬಂದಿಗೆ ಮಹಾತ್ಮಾಗಾಂಧಿ ಬಸ್‍ನಿಲ್ದಾಣದಲ್ಲಿ ಜಗಳೂರಿನ ಶಿವ ಮೆಡಿಕಲ್ಸ್ ಮಾಲೀಕ ಶಿವು, ವಿಶ್ವನಾಥ್ ಮೆಡಿಕಲ್ಸ್‍ನ ನಿರಂಜನ್,ಎಸ್‍ಆರ್ ಇ ಟ್ರ್ಯಾವಲ್ಸ್‍ನ ಮಧುಸೂದನ್ ಜ್ಯೂಸ್, ನೀರು ಮತ್ತು ಮಜ್ಜಿಗೆ ನೀಡಿ ಸ್ವಾಗತಿಸಿದರು.
ಆಗ ಸಿಬ್ಬಂದಿ ಧನ್ಯವಾದ ಅರ್ಪಿಸಿದರು. ಜಗಳೂರು ಪೊಲೀಸರಿಂದ ಎಲ್ಲ ಸಿಬ್ಬಂದಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.