ಸುದ್ದಿವಿಜಯ, ಜಗಳೂರು: ಪೊಲೀಸ್ ಠಾಣೆ ಎಂದರೆ ಅದು ಸಾರ್ವಜನಿಕರ ಆಸ್ತಿ. ಅನೇಕರಿಗೆ ಪೊಲೀಸ್ ಠಾಣೆಗೆ ಬಂದರೆ ಭಯ ಪಡುತ್ತಾರೆ. ಇಲ್ಲಿರುವ ಪೊಲೀಸರು ಮನುಷ್ಯರು. ಯಾವುದೇ ಮಾಹಿತಿ ಬೇಕಾದರೂ ಠಾಣೆಗೆ ಬಂದು ನಿರ್ಭಯವಾಗಿ ಸಿಬ್ಬಂದಿಯಲ್ಲಿ ಮಾಹಿತಿ ಪಡೆಯಿರಿ ಎಂದು ಇನ್‍ಸ್ಪೆಕ್ಟರ್ ಎಂ.ಶ್ರೀನಿವಾಸ್‍ರಾವ್ ವಿದ್ಯಾರ್ಥಿಗಳಿಗೆ ಅಭಯ ನೀಡಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಶುಕ್ರವಾರ ಇನ್‍ಸ್ಪೆಕ್ಟರ್ ಶ್ರೀನಿವಾಸ್‍ರಾವ್ ಅವರು ಕಾನೂನು ಮತ್ತು ಪೊಲೀಸ್ ನಿಯಮಾವಳಿಗಳ ಬಗ್ಗೆ ತಿಳಿ ಹೇಳಿದರು.ಜನ ಸ್ನೇಹಿ ಪೊಲೀಸ್ ಠಾಣೆಗಳಾಗಬೇಕು ಎನ್ನುವ ನಿಟ್ಟಿನಲ್ಲಿ ಕಿವ್‍ಆರ್ ಕೋಡ್ ಸ್ಕ್ಯಾನ್ ಅಳವಡಿಸಲಾಗಿದೆ. ಠಾಣೆಯಲ್ಲಿ ಪೊಲೀಸರ ವರ್ತನೆ ಮತ್ತು ವಿರುದ್ಧವೂ ತಂತ್ರಾಂಶದಲ್ಲಿ ದೂರು ದಾಖಲಿಸಬಹುದು. ಅಷ್ಟೇ ಅಲ್ಲ ಉತ್ತಮ ಸೇವೆ ದೊರೆತಲ್ಲಿ ಪ್ರಶಂಸಿಸಲು ಅದರಲ್ಲಿ ಅವಕಾಶವಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಸಿನಿಮಾದಲ್ಲಿ ನೋಡುವಂತೆ ಪೊಲೀಸ್ ಠಾಣೆಗಳೆಂದರೆ ಭಯ ಸೃಷ್ಟಿಸುವ ಕೇಂದ್ರಗಳಲ್ಲ. ಸಿನಿಮಾ ಎಂದರೆ ಅದೊಂದು ರಮ್ಯ ಕಲ್ಪನೆ ಅಷ್ಟೆ. ಇಲ್ಲಿಯ ವ್ಯವಸ್ಥೆಯೇ ಬೇರೆ.ಪ್ರತಿಯೊಂದು ಸಿಬ್ಬಂದಿ ಮೇಲೆ ಮತ್ತೊಬ್ಬ ಅಧಿಕಾರಿ ಇದ್ದೆ ಇರುತ್ತಾರೆ. ದೂರು ವಿಭಾಗ, ವಿಚಾರಣಾ ವಿಭಾಗ, ತಾಂತ್ರಿಕ ವಿಭಾಗ, ಸಬ್‍ಇನ್‍ಸ್ಪೆಕ್ಟರ್ ಮೇಲಾಧಿಕಾರಿಯಾಗಿ ಇನ್‍ಸ್ಪೆಕ್ಟರ್ ಹೀಗೆ ಎಲ್ಲಾ ಠಾಣೆಗಳಲ್ಲಿ ಶ್ರೇಣೀಕೃತ ವ್ಯವಸ್ಥೆ ಇರುತ್ತದೆ ಎಂದರು.ಮಹಿಳಾ ಆರೋಪಿ ಮತ್ತು ಪುರುಷ ಆರೋಪಿಗಳಿಗೆ ಪ್ರತ್ಯೇಕ ಬಂಧಿಖಾನೆಗಳಿರುತ್ತವೆ. ಬಂಧಿಸಿದ ವ್ಯಕ್ತಿಯನ್ನು 24 ಗಂಟೆಗಳ ಒಳಗೆ ಕೋರ್ಟ್‍ಗೆ ಕಳುಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.