ಸುದ್ದಿವಿಜಯ, ಜಗಳೂರು: ಆ ಗ್ರಾಮದಲ್ಲಿ ಭಾನುವಾರ ಸಂಜೆ ತೊಟ್ಟಿ ನಿರ್ಮಾಣಕ್ಕೆ ಜೆಸಿಬಿಯಿಂದ ಏಳು ಅಡಿ ಗುಂಡಿ ತೆಗೆಸಲಾಗುತ್ತಿತ್ತು. ಆ ವೇಳೆ ಟಣ್, ಟಣ್ ಎನ್ನುವ ಶಬ್ಧ ಇಡೀ ಊರಿನ ಜನರ ನಿದ್ದೆ ಗೆಡಿಸಿದ್ದಲ್ಲದೇ, ಪೊಲೀಸರು ಸರ್ಪಗಾಗಲು ಹಾಕಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡವರಂತೆ ಕಾದರು. ಆದರೆ ಬೆಳಿಗ್ಗೆ ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟಾಗ ಸತ್ಯ ಬಯಲಿಗೆ ಬಂತು!
ಘಟನೆ ವಿವರ: ತಾಲೂಕಿನ ಐತಿಹಾಸಿಕ ಮುಸ್ಟೂರು ಗ್ರಾಮದಲ್ಲಿರುವ ಮಠದ ಮುಖ್ಯ ಗೋಪುರ ಪಕ್ಕದಲ್ಲಿ ದೇವಸ್ಥಾನ ಕಮಿಟಿಯವರು ಭಾನುವಾರ ಸಂಜೆ ತೊಟ್ಟಿ ನಿರ್ಮಾಣಕ್ಕೆ ಜೆಸಿಬಿ ಮೂಲಕ ಗುಂಡಿ ತೆಗೆಸುತ್ತಿರುವಾಗ ಟಣ್ ಎನ್ನುವ ಶಬ್ಧ ಬಂದಿದೆ. ಆ ಶದ್ಧ ಕೇಳಿದ್ದೇ ತಡ ಜೆಸಿಬಿಯ ಕೆಲಸ ನಿಲ್ಲಿಸಿ ಸುಮ್ಮನಾಗಿದ್ದಾರೆ.
ಈ ವಿಷಯ ಹೇಗೋ ಊರಿನ ಗ್ರಾಮಸ್ಥರ ಕಿವಿಗೆ ಬೀಳುತ್ತಿದ್ದಂತೆ ಮಠಕ್ಕೆ ಸೇರಿದ ಬಂಗಾರ, ಬೆಳ್ಳಿ ನಾಣ್ಯಗಳು, ಬಂಗಾರದ ನಾಣ್ಯಗಳನ್ನು ಯಾವುದೋ ಕಾಲದಲ್ಲಿ ಹೂತಿಟ್ಟಿರಬೇಕು.
ಅದು ಈಗ ಸಿಕ್ಕಿದೆ ಎಂದು ಬಾಯಿಂದ ಬಾಯಿಗೆ ಹಬ್ಬಿತು. ದೇವಸ್ಥಾನದ ಕಮಿಟಿಯವರು ಅದನ್ನು ಕಬಳಿಸಲು ಜೆಸಿಬಿ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ ಎಂದು ಊಹೆ ಮಾಡಿಕೊಂಡು ಕೆಲವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.ಜಗಳೂರು ತಾಲೂಕಿನ ಮುಸ್ಟೂರು ಗ್ರಾಮದ ಐತಿಹಾಸಿಕ ಮಠದಲ್ಲಿರುವ ದೇವಸ್ಥಾನದ ಮುಖ್ಯ ಧ್ವಾರದಲ್ಲಿ ನಿಧಿ ಇದೆ ಎಂದು ಪೊಲೀಸರ ಕಾವಲು.
ತಕ್ಷಣ ಜಗಳೂರು ಪಟ್ಟಣದ ಪೊಲೀಸರ ದಂಡು ಬ್ಯಾರಿಕೇಡ್ ಹಾಕಿ, ನೋ ಎಂಟ್ರಿ ಟೇಪ್ ಕಟ್ಟಿ ರಾತ್ರಿಯಲ್ಲಾ ಕಾದರು. ಅಷ್ಟೇ ಅಲ್ಲ ಗ್ರಾಮದ ಅನೇಕ ಜನರು ಪೊಲೀಸರ ಜೊತೆ ಕಾದು ಕುಳಿತರು.
ಸೋಮವಾರ ಬೆಳಿಗ್ಗೆ ವಿಷಯ ಗೊತ್ತಾಗುತ್ತಿದ್ದಂತೆ ತಹಶೀಲ್ದಾರ್ ಸೈಯದ್ ಕಲೀಂಉಲ್ಲಾ ಮತ್ತು ಪಿಎಸ್ಐ ಎಸ್.ಡಿ.ಸಾಗರ್ ನೇತೃತ್ವದ ತಂಡ ಅಲ್ಲಿಗೆ ನೀಡಿತು. ಅವರ ಸಮ್ಮುಖದಲ್ಲಿ ಪುನಃ ಜೆಸಿಬಿಯಲ್ಲಿ ಕಾಮಗಾರಿ ಆರಂಭಿಸಿದ್ದಾರೆ.
ಇಡೀ ಊರಿನ ಜನರೆಲ್ಲಾ ಅಲ್ಲಿ ಸೇರಿ ಇಣುಕಿ ಇಣುಕಿ ನೋಡುತ್ತಿದ್ದಾಗ ಮುಚ್ಚಿದ್ದ ಬಂಡೆ ತೆಗೆಯುತ್ತಿದ್ದಂತೆ ಕಂಡಿದ್ದು ಪುರಾತನ ಕಾಲದ ಹಗೇವು (ಧಾನ್ಯಗಾರ) ಇದನ್ನು ನೋಡಿದ ಅಧಿಕಾರಿಗಳು, ಸಾರ್ವಜನಿಕರಲ್ಲಿ ಅಯ್ಯೋ… ಎನ್ನುವ ಉದ್ಗಾರ ಕೇಳಿಸಿತು.
ಮಠದ ಆವರಣದಲ್ಲಿ ನಿಧಿ ಇದೆ ಎನ್ನುವ ಆಸೆ ಕಮರಿ ಹೋಯ್ತು. ಆದರೆ ಪೊಲೀಸರು, ಸಾರ್ವಜನಿಕರು ಮಾತ್ರ ರಾತ್ರಿಯಲ್ಲಾ ಕಾದಿದ್ದು ವ್ಯರ್ಥವಾಯ್ತು.