suddivijaya22/5/2024
ಸುದ್ದಿವಿಜಯ, ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶ ಜೂ.4 ರಂದು ಹೊರ ಬೀಳಲಿದೆ. ಇನ್ನು ಎರಡು ಹಂತದ ಮತದಾನ ಬಾಕಿ ಉಳಿದಿದೆ. ಮೇ 25 ಮತ್ತು ಜೂನ್ 1ರಂದು 6ನೇ ಮತ್ತು ಕೊನೆಯ ಹಂತದ ಚುನಾವಣೆ ನಡೆಯಲಿದೆ.
ಬಿಹಾರ, ಹರ್ಯಾಣ, ದೆಹಲಿ, ಹಿಮಾಚಲ ಪ್ರದೇಶ, ಜಾರ್ಖಾಂಡ್, ಒಡಿಶಾ, ಪಂಜಾಬ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಚಂಡೀಗಢದಲ್ಲಿ ಚುನಾವಣೆ ನಡೆಯಲಿದೆ.
ಕೆಲವು ದಿನಗಳ ಹಿಂದೆ ರಾಜ್ಯದ ಚುನಾವಣೆಯ ಬಗ್ಗೆ ಗುಪ್ತಚರ ವರದಿ ಮುಖ್ಯಮಂತ್ರಿಗಳ ಕೈಸೇರಿದೆ. ಆ ವರದಿಯಿಂದ ಸಿಎಂ ಸಂತುಷ್ಟರಾಗಿದ್ದಾರೆ ಎನ್ನುವ ಅನಧಿಕೃತ ಮೂಲಗಳ ಸುದ್ದಿಗಳು ಸಾಕಷ್ಟು ವೈರಲ್ ಆಗಿದ್ದವು.
ಬಿಜೆಪಿ ಎರಡಂಕಿ ದಾಟುವುದಿಲ್ಲ, ಕಾಂಗ್ರೆಸ್ಸಿಗೆ ಅರ್ಥ, ಬಿಜೆಪಿಗೆ ಅರ್ಥ ಎಂದೆಲ್ಲಾ ವರದಿಯಾಗಿದ್ದವು. ಮತದಾನಕ್ಕೆ ಮುನ್ನ ಮತ್ತು ಗುಪ್ತಚರ ವರದಿ ಬಂದ ನಂತರ, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಧ್ವನಿಯಲ್ಲಿ ಅದೇ ಹಿಂದಿನ ವಿಶ್ವಾಸ ಕಾಣುತ್ತಿಲ್ಲ.
ಸಾರ್ವತ್ರಿಕ ಚುನಾವಣೆಯು ರಾಷ್ಟ್ರ ಮಟ್ಟದ ವಿಷಯದ ಮೇಲೆ ಸಾಮಾನ್ಯವಾಗಿ ನಡೆಯುವುದರಿಂದ, ಮತಾದಾರರ ನಾಡಿಮಿಡಿತ ಸರಿಯಾಗಿ ಅರಿಯುವಲ್ಲಿ ಹಿಂದೆ ಮುಂದೆ ಆಗಿರಬಹುದು.
ಮಾಜಿ ಮುಖ್ಯಮಂತ್ರಿ ಬಿಎಸ್‍ವೈ, ಬಿಜೆಪಿ 28ಕ್ಕೆ 28 ಗೆಲ್ಲುತ್ತೇವೆ ಎನ್ನುತ್ತಿದ್ದರು. ಮತದಾನದ ನಂತರ 24 ರಿಂದ25 ಸ್ಥಾನ ಗೆಲ್ಲುತ್ತೇವೆ ಎಂದು ತಮ್ಮ ಹಿಂದಿನ ಹೇಳಿಕೆಯನ್ನು ಬದಲಾಯಿಸಿದ್ದರು.
ಸಾಮಾನ್ಯವಾಗಿ ಯಾವುದೇ ಚುನಾವಣೆ ನಡೆದ ನಂತರ, ಬಹುತೇಕ ಮುಖ್ಯಮಂತ್ರಿಗಳ ಸುಪರ್ದಿಯಲ್ಲಿರುವ ಗುಪ್ತಚರ ಇಲಾಖೆ, ವರದಿಯನ್ನು ಸಿಎಂಗೆ ನೀಡುತ್ತದೆ. ಅತ್ಯಂತ ಗೌಪ್ಯವಾಗಿರುವ ಈ ವರದಿಗಳು ಲೀಕ್ ಆದರೆ ಮಾತ್ರ ಸಾರ್ವಜನಿಕವಾಗುತ್ತದೆ.
ಹಾಗಾಗಿ, ಇಂಟೆಲಿಜೆನ್ಸ್ ರಿಪೋರ್ಟ್ ನಲ್ಲಿ ಏನಿದೆ ಎನ್ನುವುದು ಅಂತೆಕಂತೆ ಸುದ್ದಿಗಳಾಗಿರುತ್ತವೇ ಹೊರತು, ಖಚಿತ ಸುದ್ದಿಗಳಾಗಿರುವುದಿಲ್ಲ.
ವಿಧಾನಸಭೆ ಚುನಾವಣೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ 136 ಸ್ಥಾನವನ್ನು ಗೆಲ್ಲುತ್ತೇವೆ ಎಂದು ಹೇಳಿದ್ದರು. ಅದರಂತೇ, ಕಾಂಗ್ರೆಸ್ 135 ಸ್ಥಾನವನ್ನು ಗೆದ್ದಿತ್ತು.ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಅಷ್ಟು ಕರಾರುವಕ್ಕಾಗಿ ಹೇಳಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್, 28 ಲೋಕಸಭಾ ಕ್ಷೇತ್ರದ ಫಲಿತಾಂಶವನ್ನು ಅದೇ ವಿಶ್ವಾಸದಿಂದ ಹೇಳುತ್ತಿಲ್ಲ.
ಸಿಎಂ ಆಗಲಿ ಡಿಸಿಎಂ ಆಗಲಿ ಎಷ್ಟು ಸ್ಥಾನ ಗೆಲ್ಲಬಹುದು ಎನ್ನುವ ವಿಚಾರದಲ್ಲಿ ಇಬ್ಬರಿಂದಲೂ ಖಚಿತತೆಯ ಮಾತು ಹೊರಬರುತ್ತಿಲ್ಲ.
ರಾಜ್ಯದಲ್ಲಿ 20 ಸ್ಥಾನ ಗೆಲ್ಲಲಿದ್ದೇವೆ, ಸ್ವಲ್ಪ ಆಕಡೆ ಈಕಡೆ ಆಗಬಹುದು” ಎಂದು ಡಿಕೆಶಿ ಹೇಳಿದ್ದಾರೆ. ಇನ್ನು ಇದೇ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರಂತೆ 28 ಗೆಲ್ತೀವಿ ಅಂತ ನಾನು ಹೇಳುವುದಿಲ್ಲ.
ರಾಜ್ಯದಲ್ಲಿ ಕನಿಷ್ಠ 15 ಸ್ಥಾನ ಗರಿಷ್ಠ 20 ಸ್ಥಾನ ಗೆಲ್ತೀವಿ” ಎಂದು ಮುಖ್ಯಮಂತ್ರಿಗಳು ಹೇಳಿದ್ದರು. ಗುಪ್ತಚರ ವರದಿ ವಾಸ್ತವಕ್ಕೆ ಹತ್ತಿರವಿದೆಯಾ ಅಥವಾ ದೂರವಿದೆಯಾ ಎಂಬುದು ಜೂನ್.4 ರಂದು ಬಹಿರಂಗವಾಗಲಿದೆ.