ಆಂತರೀಕ ವರದಿಯಲ್ಲಿ 28 ಕ್ಷೇತ್ರಗಳ ಭವಿಷ್ಯವೇನು?

Suddivijaya
Suddivijaya May 16, 2024
Updated 2024/05/16 at 2:12 PM

ಸುದ್ದಿವಿಜಯ, ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಮುಗಿದಿದ್ದು, ಎಲ್ಲರ ಚಿತ್ತ ಜೂನ್ 4ರ ಫಲಿತಾಂಶದ ಕಡೆ ನೆಟ್ಟಿದೆ.
ಇದರ ನಡುವೆ ಆಂತರಿಕ ವರದಿಯೊಂದು ಕಾಂಗ್ರೆಸ್ ಕೈ ಸೇರಿದ್ದು, ವರದಿಯಲ್ಲಿನ ಅಂಶಗಳು ರಾಜ್ಯ ಕಾಂಗ್ರೆಸ್ ನಾಯಕರ ಮಂದಹಾಸಕ್ಕೆ ಕಾರಣವಾಗಿವೆ.

ಆಂತರಿಕ ವರದಿ ಕೈ ಸೇರಿದ ಬೆನ್ನಲ್ಲೇ ಕರ್ನಾಟಕದಲ್ಲಿ ಬಿಜೆಪಿಗಿಂತಲೂ ಉತ್ತಮ ಸಾಧನೆ ಮಾಡುವ ವಿಶ್ವಾಸವನ್ನು ಕೈ ನಾಯಕರು ವ್ಯಕ್ತಪಡಿಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ತಲಾ 14 ಕ್ಷೇತ್ರಗಳಂತೆ ಎರಡು ಹಂತದಲ್ಲಿ ಏಪ್ರಿಲ್ 26 ಹಾಗೂ ಮೇ 7ರಂದು ಚುನಾವಣೆ ನಡೆದಿತ್ತು.

ಕಳೆದ ಬಾರಿ ಗೆದ್ದ ಒಂದು ಸ್ಥಾನಕ್ಕಿಂತ ಬಹಳಷ್ಟು ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ಕಾಂಗ್ರೆಸ್‍ಗೆ ಬಂದಿದ್ದು, ಕಳೆದ ಎರಡು ದಶಕಗಳಿಂದ ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನ ಕಳಪೆ ಸಾಧನೆಗೆ ಈ ಫಲಿತಾಂಶ ಅಂತ್ಯ ಹಾಡುವ ಸಾಧ್ಯತೆ ಇದೆ ಎಂದು ಆಂತರಿಕ ವರದಿಯಲ್ಲಿ ಉಲ್ಲೇಖವಾಗಿದೆ ಎಂದು ಮೂಲಗಳು ತಿಳಿಸಿವೆ.ಪಕ್ಷದ ಕೈ ಸೇರಿರುವ ಆಂತರಿಕ ವರದಿಯಂತೆ ರಾಜ್ಯದಲ್ಲಿ ಕಾಂಗ್ರೆಸ್ ಒಟ್ಟು 14 ಕ್ಷೇತ್ರಗಳನ್ನು ಗೆಲ್ಲಬಹುದು ಎಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್ ನಾಯಕರು ಇದ್ದಾರೆ.

ಮೊದಲ ಹಂತದಲ್ಲಿ ಆರು, ಎರಡನೇ ಹಂತದಲ್ಲಿ 8 ಕ್ಷೇತ್ರಗಳನ್ನು ನಾವು ಗೆಲ್ತೀವಿ ಎನ್ನುವುದು ಕಾಂಗ್ರೆಸ್‍ನ ಆಂತರಿಕ ವರದಿಯಲ್ಲಿದೆ.

ಎಲ್ಲ ಬೂತ್, ಬ್ಲಾಕ್, ತಾಲೂಕು, ಜಿಲ್ಲಾ ಹಾಗೂ ವಿಧಾನಸಭಾ ಕ್ಷೇತ್ರವಾರು ಕಾಂಗ್ರೆಸ್‍ನ ತಳಹಂತದ ಕಾರ್ಯಕರ್ತರು ಹಾಗೂ ಮುಖಂಡರು ಸಿದ್ಧಪಡಿಸಿದ ವರದಿಯನ್ನು ಕ್ರೋಢಿಕರಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ನೀಡಲಾಗಿದೆ.

ತಳಹಂತದಲ್ಲಿ ಬೂತ್ ಏಜೆಂಟ್‍ಗಳು ಕೊಟ್ಟಿರುವ ಅಂಕಿ – ಅಂಶಗಳು ವಾಸ್ತವಕ್ಕೆ ಹತ್ತಿರವಾಗಿರುತ್ತವೆ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್ ನಾಯಕರು ಇದ್ದಾರೆ. ಆದ್ದರಿಂದ 14 ಕ್ಷೇತ್ರಗಳಿಗಿಂತಲೂ ಹೆಚ್ಚು ಕ್ಷೇತ್ರದಲ್ಲಿ ನಾವು ಗೆಲ್ಲಬಹುದು ಎಂಬ ನಿರೀಕ್ಷೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇದ್ದಾರೆ.

ಪ್ರಮುಖವಾಗಿ ಸಚಿವರ ಮಕ್ಕಳಿಗೆ ಟಿಕೆಟ್ ನೀಡಿರುವುದು ಉತ್ತಮ ಎಂಬ ಅಭಿಪ್ರಾಯ ವರದಿಯಲ್ಲಿ ಉಲ್ಲೇಖ ಆಗಿದ್ದು, ಅಭ್ಯರ್ಥಿಗಳನ್ನು ಗೆಲ್ಲಿಸಲು ಸಚಿವರು ಸಂಘಟಿತ ಹೋರಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಮೊದಲ ಹಂತದ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವ ಹೆಚ್ಚು ವರ್ಕ್ ಆಗಿದೆ, ಜೊತೆಗೆ ಮೈತ್ರಿ ಲೆಕ್ಕಾಚಾರ ಕೂಡ ಸ್ವಲ್ಪ ಮಟ್ಟಿಗೆ ಕಾಂಗ್ರೆಸ್‍ಗೆ ಹಿನ್ನಡೆ ತಂದಿದೆ ಎನ್ನುವ ಅಂಶಗಳು ವ್ಯಕ್ತವಾಗಿವೆ.

ಆದರೆ, ಎರಡನೇ ಹಂತದಲ್ಲಿ ಅಂದ್ರೆ ಉತ್ತರ ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್‍ನ ಕೈ ಹಿಡಿದಿವೆ ಎಂಬ ಅಂಶಗಳು ವರದಿಯಲ್ಲಿ ಉಲ್ಲೇಖವಾಗಿವೆ.

ಪ್ರಜ್ವಲ್ ರೇವಣ್ಣ ಪ್ರಕರಣ ಚುನಾವಣೆ ಮೇಲೆ ಅಷ್ಟೊಂದು ಪ್ರಭಾವ ಬೀರಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಉತ್ತರ ಕನ್ನಡ, ಬೆಳಗಾವಿ, ಚಿಕ್ಕೋಡಿ, ಬೀದರ್‍ನಲ್ಲಿ ಮರಾಠಿ ಮತಗಳನ್ನು ಸೆಳೆಯುವಲ್ಲಿ ಕಾಂಗ್ರೆಸ್ ಎಡವಿದೆ ಎನ್ನುವ ಅಂಶಗಳು ಕೂಡ ಈ ವರದಿಯಲ್ಲಿ ಇವೆ.

ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಜನರ ಮುಂದೆ ಬಂದಿದ್ದವು. ಬಿಜೆಪಿ 25 ಹಾಗೂ ಜೆಡಿಎಸ್ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ.ಕಾಂಗ್ರೆಸ್ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಬಿಜೆಪಿ ಹಾಗೂ ಜೆಡಿಎಸ್ ನಾಯಕರು 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿದ್ದರೆ, ಕಾಂಗ್ರೆಸ್ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ಹೊಂದಿತ್ತು.

ಸದ್ಯ ತಮ್ಮದೇ ಸೋಲು – ಗೆಲುವಿನ ಲೆಕ್ಕಾಚಾರದಲ್ಲಿ ಮೂರು ಪಕ್ಷಗಳು ತೊಡಗಿದ್ದು, ಜೂನ್ 4ರಂದು ಅಧಿಕೃತ ಫಲಿತಾಂಶ ಹೊರಬೀಳುವವರೆಗೂ ಕಾಯಲೇಬೇಕು.

Share this Article
Leave a comment

Leave a Reply

Your email address will not be published. Required fields are marked *

error: Content is protected !!