ಸುದ್ದಿವಿಜಯ, ಜಗಳೂರು: ಪಟ್ಟಣದವನ್ನು ಸ್ವಚ್ಛವಾಗಿಡುವ ಪೌರ ಕಾರ್ಮಿಕರು ಆರೋಗ್ಯವಾಗಿದ್ದರೆ ಮಾತ್ರ ಪಟ್ಟಣದ ಪೌರರು ಆರೋಗ್ಯದಿಂದಿರಲು ಸಾಧ್ಯ ಎಂದು ತಹಸೀಲ್ದಾರ್ ಅರುಣ್‍ಕಾರಗಿ ಹೇಳಿದರು.
ಇಲ್ಲಿನ ಪಟ್ಟಣ ಪಂಚಾಯಿತಿಯ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 12ನೇ ವರ್ಷದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪಟ್ಟಣದಲ್ಲಿ ರೋಗ ರುಜನಿಗಳು ಹರಡದಂತೆ ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಪೌರರ ಆರೋಗ್ಯವನ್ನು ಕಾಪಾಡಲು ವೈದ್ಯಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪೌರ ಕಾರ್ಮಿಕರು ಚನ್ನಾಗಿರಬೇಕು. ಒಂದು ವಾರ ರಜೆ ಹಾಕಿದರೆ ಎಲ್ಲ ಬೀದಿಗಳು ಗಬ್ಬು ನಾರುತ್ತವೆ. ಪ್ರತಿಯೊಬ್ಬರು ಅವರನ್ನು ಗೌರವಿಸಿ ಪ್ರೀತಿ, ವಿಶ್ವಾಸದಿಂದ ಕಾಣುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.
ಪೌರ ಕಾರ್ಮಿಕರು ವಿದ್ಯಾವಂತರಾಗಬೇಕು. ಮಕ್ಕಳಿಗೆ ಶಿಕ್ಷಣ ಕೊಡಿಸಿ ಸಮಾಜದ ಉತ್ತಮ ಪ್ರಜೆಯನ್ನಾಗಿ ಮಾಡಬೇಕು, ಅಕ್ಷರದಿಂದಲೇ ಜಗತ್ತಿನಲ್ಲಿ ಏನಾದರೂ ಸಾಧಿಸಲು ಸಾಧ್ಯ, ಹಾಗಾಗಿ ಶಿಕ್ಷಣ ಮತ್ತು ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕು. ಕಾರ್ಮಿಕರ ಯೋಗ ಕ್ಷೇಮಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಹಕ್ಕುಗಳನ್ನು ಕಾಪಾಡಲು ಕಾಯಿದೆಗಳು ಜಾರಿಯಲ್ಲಿವೆ. ತಮಗೆ ಅನ್ಯಾಯವಾದಾಗ ಪರಿಹಾರ ಪಡೆಯುವ ಹಕ್ಕು ಇದೆ ಎಂದರು.ಜಗಳೂರಿನ ಪಟ್ಟಣ ಪಂಚಾಯಿತಿಯ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 12ನೇ ವರ್ಷದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರೊಂದಿಗೆ ಶಾಸಕ ಬಿ.ದೇವೇಂದ್ರಪ್ಪ ಜಾಥಾ ನಡೆಸಿದರು.
ಪ.ಪಂ ಮುಖ್ಯಾಧಿಕಾರಿ ಲೋಕ್ಯನಾಯ್ಕ ಮಾತನಾಡಿ, ಪೌರ ಕಾರ್ಮಿಕರು ಮಳೆ, ಚಳಿ, ಗಾಳಿಯನ್ನು ಲೆಕ್ಕಿಸದೆ ಪಟ್ಟಣ ಸ್ವಚ್ಛತೆ ಕಡೆ ಗಮನ ಹರಿಸುತ್ತಾರೆ. ಪ್ರದೇಶ ಸುಂದರವಾಗಿ ಕಾಣಲು ಪೌರ ಕಾರ್ಮಿಕರ ಸೇವೆ ಮುಖ್ಯ. ಆ ನಿಟ್ಟಿನಲ್ಲಿ ಪೌರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಪೌರಕಾರ್ಮಿಕರ ಸೌಲಭ್ಯಕ್ಕಾಗಿ ಸರ್ಕಾರ ಕಾರ್ಯಕ್ರಗಳನ್ನು ಕೊಟ್ಟಿದೆ. ನಿವೇಶನವುಳ್ಳವರಿಗೆ 7 ಲಕ್ಷದವರೆಗೂ ಮನೆ ನಿರ್ಮಿಸಿಕೊಳ್ಳವ ಅವಕಾಶ ನೀಡಿದೆ. ನಿವೇಶನ ರಹಿತರಿಗೆ ಪಟ್ಟಣದಲ್ಲಿ ನಿವೇಶನ ಕೊಡಿಸಲಾಗುವುದು ಎಂದರು.
ಕಾರ್ಯಕ್ರಮಕ್ಕೂ ಮುನ್ನ ಶಾಸಕರ ಜನ ಸಂಪರ್ಕ ಕಚೇರಿಯಿಂದ ಆರಂಭ ಪೌರಕಾರ್ಮಿಕರ ಮೆರವಣಿಗೆಗೆ ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಚಾಲನೆ ನೀಡಿದರು. ಹಳೇ ಮಹಾತ್ಮ ಗಾಂಧಿ ವೃತ್ತದಿಂದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದವರೆಗೂ ದಾರಿಯುದ್ದಕ್ಕೂ ತಮಟೆ ಮೆರವಣಿಗೆಯ ಮೂಲಕ ಸಾಗಿತು. ಇದೇ ವೇಳೆ ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪ.ಪಂ ಸದಸ್ಯರಾದ ಆರ್. ತಿಪ್ಪೇಸ್ವಾಮಿ, ರಮೇಶ್‍ರೆಡ್ಡಿ, ಮಂಜುನಾಥ್, ರವಿಕುಮಾರ್, ಓಬಣ್ಣ, ನವೀನ್, ದೇವರಾಜ್, ಲುಕ್ಮಾನ್‍ವುಲ್ಲಾಖಾನ್, ಪಾಪಲಿಂಗಪ್ಪ, ಶಕೀಲ್, ಮಹಮದ್, ಸಣ್ಣಗೋಸಾಯಿ, ಲಲೀತ ಶಿವಣ್ಣ, ಮಂಜುಳಾ ಮಂಜಪ್ಪ, ನಿರ್ಮಲಕುಮಾರಿ ಹನುಮಂತಪ್ಪ, ದಸಂಸ ಸಂಚಾಲಕರಾದ ಸತೀಶ್, ಕುಬೇಂದ್ರಪ್ಪ, ಆರೋಗ್ಯ ನಿರೀಕ್ಷಕ ಕಿಫಾಯಿತ್ ಸೇರಿದಂತೆ ಮತ್ತಿತರರಿದ್ದರು.